ವಾಷಿಂಗ್ಟನ್: ಜಾಗತಿಕವಾಗಿ ಭಯ-ಭೀತಿ ಹುಟ್ಟಿಸಿ ಕಂಗೆಡಿಸಿದ್ದ ಕೋವಿಡ್ ಮಹಾಮಾರಿ ಸೋಂಕಿನ ಕಹಿ ಮರೆಯುವ ಮುನ್ನವೇ ಇದೀಗ ಆಫ್ರಿಕಾದಲ್ಲಿ ಮಂಕಿಪಾಕ್ಸ್ (Mpox Diseases) ಜನರನ್ನು ಕಂಗೆಡಿಸಿದ್ದು, ಇದು ಇತರ ದೇಶಗಳಿಗೂ ಹಬ್ಬುವ ಮೂಲಕ ಜಾಗತಿಕ ಅಪಾಯಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇರುವುದಾಗಿ ವರದಿ ತಿಳಿಸಿದೆ.
ಝೀಕಾ ಹಾಗೂ ಚಿಕುನ್ ಗುನ್ಯಾದಂತೆ ಮಂಕಿ ಪಾಕ್ಸ್ ಸೋಂಕನ್ನು ಕೂಡಾ ನಿರ್ಲಕ್ಷಿಸಲಾಗಿತ್ತು. 1958ರಲ್ಲಿ ಮೊದಲ ಬಾರಿಗೆ ವಿಜ್ಞಾನಿಗಳು ಮಂಕಿಪಾಕ್ಸ್ ಸೋಂಕನ್ನು ಪತ್ತೆ ಹಚ್ಚಿದ್ದರು. ಮೊದಲು ಕೋತಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಮಂಕಿಪಾಕ್ಸ್ ನಂತರ ಮನುಷ್ಯರಿಗೂ ಸೋಂಕು ಹರಡತೊಡಗಿತ್ತು. 1970ರಲ್ಲಿ ಮನುಷ್ಯನಲ್ಲಿ ಮೊದಲ ಬಾರಿಗೆ ಈ ಸೋಂಕನ್ನು ಪತ್ತೆಹಚ್ಚಲಾಗಿತ್ತು. ಆದರೆ ದಶಕಗಳ ಕಾಲ ಈ ಸೋಂಕಿನ ಬಗ್ಗೆ ವೈಜ್ಞಾನಿಕವಾಗಿ ಹಾಗೂ ಆರೋಗ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿತ್ತು. ಇದರ ಪರಿಣಾಮ ಆಫ್ರಿಕಾ ಖಂಡಗಳಲ್ಲಿ ಮಂಕಿಪಾಕ್ಸ್ ಮಹಾಮಾರಿ ಜನರನ್ನು ಕಂಗೆಡಿಸಿಬಿಟ್ಟಿರುವುದಾಗಿ ವರದಿ ವಿವರಿಸಿದೆ.
2022ರಲ್ಲಿ ಅಭಿವೃದ್ಧಿಶೀಲ ದೇಶಗಳಲ್ಲೂ ಮಂಕಿಪಾಕ್ಸ್ ರಣಕೇಕೆ ಹಾಕಿದ ನಂತರ ವಿಜ್ಞಾನಿಗಳು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಏತನ್ಮಧ್ಯೆ ಜಾಗತಿಕವಾಗಿ ಮಂಕಿಪಾಕ್ಸ್ ಸೋಂಕು ತಡೆ ಲಸಿಕೆ, ಪ್ರಯೋಗಾಲಯ, ಡಯಾಗ್ನೋಸ್ಟಿಕ್ ಮೇಲೆ ಹೂಡಿಕೆ ಮಾಡುವಂತೆ ಆಫ್ರಿಕಾದ ಸಂಶೋಧಕರು ದುಂಬಾಲು ಬಿದ್ದಿದ್ದರು ಕೂಡಾ 2022-23ರಲ್ಲಿ ಮಂಕಿಪಾಕ್ಸ್ ಜಾಗತಿಕವಾಗಿ ಹರಡಿ ಮತ್ತೆ ಮರಣಭೀತಿ ಹುಟ್ಟಿಸಿರುವುದಾಗಿ ವರದಿ ತಿಳಿಸಿದೆ.
ಇದೀಗ ವಿಶ್ವ ಆರೋಗ್ಯ ಸಂಸ್ಥೆ ( WHO) ಸೋಂಕಿನ ಜಾಗತಿಕ ಕಳವಳದ ಹಿನ್ನೆಲೆಯಲ್ಲಿ ಮಧ್ಯ ಆಫ್ರಿಕಾದಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ. ಮಂಕಿಪಾಕ್ಸ್ ಮಹಾಮಾರಿ ಆಫ್ರಿಕಾದಲ್ಲಿ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇತರ ದೇಶಗಳಲ್ಲೂ ಎಚ್ಚರ ವಹಿಸುವ ನಿಟ್ಟಿನಲ್ಲಿ ತುರ್ತುಸ್ಥಿತಿ ಘೋಷಿಸಿರುವುದಾಗಿ ವರದಿ ತಿಳಿಸಿದೆ.
ಇದು ಮಾರಣಾಂತಿಕವೇ?
ಈ ಮಂಕಿಪಾಕ್ಸ್ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಲೈಂಗಿಕ ಸಂಪರ್ಕದಿಂದ ಹರಡುತ್ತದೆ ಎಂದು ವಿಜ್ಞಾನಿಗಳು ಸಂಶೋಧನೆಯಿಂದ ಪತ್ತೆಹಚ್ಚಿದ್ದರು. ಮಂಕಿ ಪಾಕ್ಸ್ ಸೋಂಕು ಪೀಡಿತ ವ್ಯಕ್ತಿಯಲ್ಲಿ ಮೊದಲಿಗೆ ಚಳಿ, ಜ್ವರ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಾಗದಿದ್ದಲ್ಲಿ, ಮೈ-ಕೈ-ಕಾಲುಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಜೊತೆಗೆ ತುರಿಕೆಯೂ ಇರುತ್ತದೆ. ಮಂಕಿಪಾಕ್ಸ್ ಗೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಸಾವು ಕೂಡಾ ಸಂಭವಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.