ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ನ್ಯಾಯಾಲಯದ ಕಲಾಪವನ್ನು ಚಿತ್ರೀಕರಿಸುತ್ತಿದ್ದ ಆರೋಪದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋನು ಮನ್ಸೂರಿ(30) ಬಂಧಿತ ಆರೋಪಿ. ಬಜರಂಗದಳ ನಾಯಕ ತನು ಶರ್ಮ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಶನಿವಾರ ಇಂದೋರ್ ಜಿಲ್ಲಾ ನ್ಯಾಯಾಲಯದ ಕೊಠಡಿ ಸಂಖ್ಯೆ 42ರಲ್ಲಿ ನಡೆಯುತ್ತಿತ್ತು. ವಿಚಾರಣೆಯ ದೃಶ್ಯಗಳನ್ನು ಮಹಿಳೆಯೊಬ್ಬರು ಸೆರೆಹಿಡಿಯುತ್ತಿರುವುದನ್ನು ಗಮನಿಸಿದ ಶರ್ಮ ಪರ ವಕೀಲರು, ಮಹಿಳಾ ವಕೀಲರ ಸಹಾಯದಿಂದ ಮಹಿಳೆಯನ್ನು ಹಿಡಿದಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಮಹಿಳೆ, ಹಿರಿಯ ನ್ಯಾಯವಾದಿ ನೂರ್ಜಹಾನ್ ಖಾನ್ ಅವರ ಸೂಚನೆಯಂತೆ ತಾನು ಕೋರ್ಟ್ ಕಲಾಪ ಚಿತ್ರೀಕರಿಸಿದ್ದಾಗಿ ತಿಳಿಸಿದ್ದಾಳೆ. ಅಲ್ಲದೇ ಇದನ್ನು ಪಿಎಫ್ಐಗೆ ಕಳುಹಿಸಿದರೆ 3 ಲಕ್ಷ ರೂ. ನೀಡುವುದಾಗಿ ಹೇಳಿದ್ದರು ಎಂದು ಆರೋಪಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.