ಕಲಬುರಗಿ: ಸಂಸದ ಡಾ.ಉಮೇಶ್ ಜಾಧವ್ ಹಾಗೂ ಇವರ ಪುತ್ರ ಹಾಗೂ ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್ ಅವರಿಗೂ ಕೋವಿಡ್-19 ಸೋಂಕು ದೃಢಪಟ್ಟಿದೆ.
ಇವರಿಬ್ಬರೂ ಸದ್ಯ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಇಬ್ಬರೂ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಇಬ್ಬರಲ್ಲೂ ಕೋವಿಡ್ 19 ಸೊಂಕು ಪಾಸಿಟಿವ್ ಇರುವುದು ಖಚಿತ ಪಟ್ಟಿದೆ.
ತಕ್ಷಣವೇ ಉಮೇಶ್ ಹಾಗೂ ಅವಿನಾಶ್ ಜಾಧವ್ ಅವರಿಬ್ಬರೂ ಬೆಂಗಳೂರಿನಲ್ಲಿರುವ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಸಂಬಂಧಿಯೊಬ್ಬರಿಗೂ ಸೋಂಕು ಪತ್ತೆಯಾಗಿದ್ದು, ಅವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದ್ದು ಯಾವುದೇ ರೀತಿಯ ಸಮಸ್ಯೆ ಇಲ್ಲ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಮತ್ತು ಕೆಲ ದಿನಗಳಿಂದ ನಮ್ಮ ಸಂಪರ್ಕಕ್ಕೆ ಬಂದವರು ಕೋವಿಡ್ ತಪಾಸಣೆ ಮಾಡಿಕೊಳ್ಳಿ ಎಂದು ಸಂಸದ ಡಾ.ಉಮೇಶ್ ಜಾಧವ್ ಮನವಿ ಮಾಡಿದ್ದಾರೆ.
ಈ ಹಿಂದೆ ಜಿಲ್ಲೆಯ ಶಾಸಕರಾದ ಡಾ.ಅಜಯ್ ಸಿಂಗ್, ರಾಜಕುಮಾರ್ ಪಾಟೀಲ್ ತೇಲ್ಕೂರ್ ಹಾಗೂ ಬಸವರಾಜ್ ಮತ್ತಿಮಡು ಅವರಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಮತ್ತು ಅವರೆಲ್ಲರೂ ಇದೀಗ ಈ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.