ವಿಜಯಪುರ: ಅನಾರೋಗ್ಯದಿಂದಾಗಿ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಮ್ಮ ತಂದೆಯ ಆರೋಗ್ಯ ಸ್ಥಿರವಾಗಿದೆ. ಸಾರ್ವಜನಿಕರು, ಅಭಿಮಾನಿಗಳು ಯಾರೂ ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಪುತ್ರ ವಿನೋದ್ ಜಿಗಜಿಣಗಿ ಮನವಿ ಮಾಡಿದ್ದಾರೆ.
ತಮ್ಮ ತಂದೆ ಸಂಸದ ರಮೇಶ ಜಿಗಜಿಣಗಿ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿನೋದ್, ಮಿದುಳಿನಲ್ಲಿ ಸ್ವಲ್ಪ ರಕ್ತ ಹೆಪ್ಪುಗಟ್ಟಿತ್ತು, ಸಣ್ಣ ರಂಧ್ರದ ಮೂಲಕ ಹೆಪ್ಪುಗಟ್ಟಿದ ರಕ್ತವನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಇದೀಗ ವೈದ್ಯರ ಸಕಾಲಿಕ ಚಿಕಿತ್ಸೆಯ ಪರಿಣಾಮ ಯಾವುದೇ ಸಮಸ್ಯೆ ಇಲ್ಲದೇ ನಮ್ಮ ತಂದೆಯ ಆರೋಗ್ಯ ಸ್ಥಿರವಾಗಿದೆ.
ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿನ್ನೆ ಬೆಳಗಾವಿಗೆ ತೆರಳಿದ್ದರು. ಆರೋಗ್ಯದ ಸ್ವಲ್ಪ ಏರುಪೇರಾಗಿದ್ದರಿಂದ ಅಲ್ಲಿನ ಕೆಎಲ್‍ಇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಎರಡು ದಿನಗಳ ಹಿಂದೆ ತಮ್ಮ ಸಹೋದರಿ 97 ವರ್ಷದ ರಾಧಾಬಾಯಿ ನಿಧನ ಹೊಂದಿದ್ದರು. ಸಹೋದರ-ಸಹೋದರಿ ಇಬ್ಬರ ಮಧ್ಯೆ ಅತ್ಯಂತ ಭಾವನಾತ್ಮಕ ಬಾಂಧವ್ಯ ಇದ್ದ ಕಾರಣ ಸಹೋದರಿಯ ಅಗಲಿಕೆ ಅವರನ್ನು ನೋವಾಗಿಸಿತು. ಹೀಗಾಗಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂದು ವಿವರ ನೀಡಿದರು.
ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ಹೋಗಿದ್ದಾಗಲೇ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೂಡಲೇ ಅವರನ್ನು ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವಿವರಿಸಿದ್ದಾರೆ.