ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ನಡೆಯಿತು. ಈಗ ಅವರೇ ಸಿಎಂ, ಆಗಲೇ ಎಸ್ ಡಿಪಿಐ, ಪಿಎಫ್ಐ ಮೇಲೆ ಕ್ರಮ ತಗೊಂಡಿದ್ದರೆ ಈ ಕೊಲೆ ಆಗುತ್ತಿರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದ ಹಿಂದೂ ಸಂಘಟನೆ ಕಾರ್ಯಕರ್ತನ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಬೀದಿಯಲ್ಲಿ ಕಗ್ಗೊಲೆಯಾಗಿದ್ದಾರೆ. ಇದು ನನಗೆ ಅತೀವ ನೋವು ತಂದಿದೆ. ನಮ್ಮ ಸರ್ಕಾರ ಬಂದ ಮೇಲೂ ಕೊಲೆ ಆಗಿರುವುದು ನನಗೆ ನಾಚಿಕೆಯಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಪ್ರತೀ ಹತ್ಯೆ ಆದಾಗಲೂ ಸಿದ್ದರಾಮಯ್ಯರನ್ನು ಬೈಯುತ್ತಿದ್ದೆವು. ಇವತ್ತು ನಮ್ಮದೇ ಸರ್ಕಾರ ಇದೆ. ನಮ್ಮ ಕಾರ್ಯಕರ್ತ ಒಬ್ಬ ಹತ್ಯೆಯಾಗಿದ್ದಾನೆ ಎಂದರು.
ಹಿಜಾಬ್ ವಿಚಾರ ಬಂದಾಗ ರಾಜ್ಯಾದ್ಯಂತ ಅಶಾಂತಿ ವಾತಾವರಣವಿದೆ, ಮಧ್ಯಂತರ ಆದೇಶದ ಪಾಲನೆಯಾಗುತ್ತಿಲ್ಲ. ಶಾಂತಿಗೆ ಭಂಗ ತರುವವರ ಮೇಲೆ ಕ್ರಮವಾಗಲಿಲ್ಲ. 144 ಸೆಕ್ಷನ್ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಕೊಂಡಿಲ್ಲ. ಈಗ ನಮ್ಮ ಕಾರ್ಯಕರ್ತ ಹತ್ಯೆ ಆಗಿದ್ದಾನೆ. ಸರ್ಕಾರ ಇನ್ನು ಯಾವಾಗ ಕ್ರಮ ಕೈಗೊಳ್ಳುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮೇವು ಹಗರಣ-ಖಜಾನೆ ದುರ್ಬಳಕೆ ಕೇಸ್; ಲಾಲುಪ್ರಸಾದ್ ಗೆ 5 ವರ್ಷ ಜೈಲು, 60 ಲಕ್ಷ ರೂ. ದಂಡ
ಡಿಜೆ ಹಳ್ಳಿ ಕೆ ಜಿ ಹಳ್ಳಿ ಗಲಾಟೆಯಾದಾಗಲೇ ಎಸ್ ಡಿಪಿಐ, ಪಿಎಫ್ಐ ಮೇಲೆ ಕ್ರಮವಾಗಬೇಕಿತ್ತು, ಬ್ಯಾನ್ ಮಾಡಬೇಕಿತ್ತು. ಆಗಲೇ ಕ್ರಮ ಕೈಗೊಂಡಿದ್ದರೆ ಹರ್ಷ ಸಾಯುತ್ತಿರಲಿಲ್ಲ. ಕಠಿಣ ಕ್ರಮ, ನಿರ್ದಾಕ್ಷಿಣ್ಯ ಕ್ರಮ ತೆಗೆದುಕೋಳ್ಳುತ್ತೇವೆಂದು ಪತ್ರಿಕಾ ಹೇಳಿಕೆ ಕೊಟ್ಟರೆ ಪ್ರಯೋಜನ ಇಲ್ಲ, ಸಿಎಂ ಬೊಮ್ಮಾಯಿ ಮಾತು ನಿಲ್ಲಿಸಿ ಕಠಿಣತೆಯನ್ನು ತೋರಿಸಲಿ ಎಂದು ಭಾವೋದ್ವೇಗದಿಂದ ಪ್ರತಾಪ್ ಸಿಂಹ ಹೇಳಿದರು.