Advertisement

ಕಾಂಗ್ರೆಸ್ಸಿಗರಿಂದ ದಾರಿ ತಪ್ಪಿಸುವ ಕೆಲಸ: ಸಂಸದ ಭಗವಂತ ಖೂಬಾ

04:07 PM Oct 03, 2020 | Suhan S |

ಬೀದರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ರೈತರ ಹಿತಕ್ಕಾಗಿ ಎಪಿಎಂಸಿ ಕಾಯ್ದೆ ಸೇರಿ ಹೊಸ ಮಸೂದೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ಸಿಗರು ಈ ಬಗ್ಗೆ ಇಲ್ಲಸಲ್ಲದ ಸುಳ್ಳು ಹೇಳುತ್ತಿದ್ದು, ರೈತರು ಇಂತಹ ಹೇಳಿಕೆಗಳಿಂದ ದೂರವಿರಬೇಕು ಎಂದು ಸಂಸದ ಭಗವಂತ ಖೂಬಾ ಮನವಿ ಮಾಡಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಪ್ಪಂದವು ರೈತರಿಗೆ ಪೂರ್ವನಿಗದಿತ ದರ ಪಡೆಯಲು ಅನುವು ಮಾಡಿಕೊಡಲಿದೆ. ಯಾವಾಗ ಬೇಕಾದರೂ ರೈತರು ಒಪಂದದಿಂದ ನಿರ್ಗಮಿಸಬಹುದು. ರೈತರು ಭೂಮಿಯನ್ನು ಮಾರಾಟ, ಲೀಸ್‌ ಅಥವಾ ಅಡ ಇಡುವಿಕೆಗೆ ನಿಷೇಧಿಸಲ್ಪಟ್ಟಿದೆ ಎಂದು ಮಸೂದೆಯಲ್ಲಿ ಸ್ಪಷ್ಟವಾಗಿ ನಿರ್ದೇಶಿಸಲ್ಪಟ್ಟಿದೆ, ಒಪ್ಪಂದವು ಬೆಳೆಗಳಿಗೆ ಸಂಬಂಧಿಸಿದೆ ಹೊರತು ಭೂಮಿಗೆ ಸಂಬಂಧಿಸಿಲ್ಲ. ಕೃಷಿ ಮಸೂದೆಗೂ ಕನಿಷ್ಠ ಬೆಂಬಲ ಬೆಲೆಗೂ ಯಾವುದೇ ಸಂಬಂಧವಿಲ್ಲ. ಎಂ.ಎಸ್‌.ಪಿ. ನೀಡಲಾಗುತ್ತದೆ ಮತ್ತು ಮುಂದೆಯೂ ಅದು ಮುಂದುವರಿಯುತ್ತದೆ. ಕೃಷಿ ಮಸೂದೆಯೂ ರೈತರಿಗೆ ಸ್ವಾತಂತ್ರ್ಯ ನೀಡಲಿದೆ. ಈಗ ರೈತರು ತಮ್ಮ ಬೆಳೆಗಳನ್ನು ಯಾರಿಗೆ ಬೇಕಾದರೆ, ಯಾವಾಗ ಬೇಕಾದರೂ ಮಾರಾಟ ಮಾಡಬಹುದು ಮತ್ತು ಇದು ಒಂದು ರಾಷ್ಟ್ರ ಒಂದು ಮಾರುಕಟ್ಟೆ ಸೃಷ್ಟಿಸಲಿದೆ.

ರೈತನು ತಾನು ಬೆಳೆದ ಬೆಳೆಗಳನ್ನು ತನಗಿಷ್ಟವಾದಲ್ಲಿ, ತನಗೆ ಸರಿಹೊಂದುವ ಬೆಲೆಯಲ್ಲಿ ದೇಶಾದ್ಯಂತ ಎಲ್ಲಿ ಬೇಕಾದರೂ ಮಾರಾಟ ಮಾಡಲಿ ಎನ್ನುವ ಉದ್ದೇಶದಿಂದ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ ಜಾರಿಗೆ ತರಲಾಗಿದೆ. ಇತರ ರಾಜ್ಯಗಳ ಪರವಾನಗಿ ಹೊಂದಿದ ವ್ಯಾಪಾರಿಗಳೊಂದಿಗೆ ನೇರವಾಗಿ ಒಪ್ಪಂದ ಮಾಡಿಕೊಂಡು ರೈತ ವ್ಯವಹರಿಸಬಹುದಾಗಿದೆ, ದಲ್ಲಾಳಿಗಳಿಂದ ಮುಕ್ತಿ ನೀಡುವುದು ಮಸೂದೆ ಉದ್ದೇಶವಾಗಿದೆ ಎಂದರು.

ಬೆಳೆ ಖಾತ್ರಿ ಮತ್ತು ಕೃಷಿ ಸೇವೆಗಳ ಮಸೂದೆಯಿಂದ ಸಣ್ಣ ರೈತ ಕೂಡ ನೇರವಾಗಿ ಸಗಟು ಮಾರಾಟಗಾರರೊಂದಿಗೆ ಮತ್ತು ರಫ್ತುದಾರರೊಂದಿಗೆ ನೇರ ಒಪ್ಪಂದ ಅಥವಾ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಬಹುದು. ಸರಿಯಾದ ಕೃಷಿ ಯಂತ್ರೋಪಕರಣಗಳನ್ನು ಖರೀದಿದಾರರೇ ರೈತರಿಗೆ ನೀಡುತ್ತಾರೆ. ಜತೆಗೆ, ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುವರು. ಇದರಿಂದ ದೇಶದ ಬೆನ್ನೆಲುಬಾಗಿರುವ ರೈತನ ಆದಾಯ 2022ರವೆಳೆಗೆ ದ್ವಿಗುಣಗೊಳಿಸುವ ಆಶಯ ಹೊಂದಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next