Advertisement

ಕಾರ್ಮಿಕರ ತಂಗು ಪ್ರದೇಶಕ್ಕೆ ಸಂಸದ ಡಾ|ಜಾಧವ ಭೇಟಿ

07:24 AM May 09, 2020 | Suhan S |

ಕಲಬುರಗಿ: ಉದ್ಯೋಗ ಆರಿಸಿ ಮಹಾರಾಷ್ಟ್ರಕ್ಕೆ ಹೋಗಿದ್ದ ಕಾರ್ಮಿಕರು ಕೋವಿಡ್ 19 ಲಾಕ್‌ ಡೌನ್‌ ಸಡಿಲಿಕೆಯಿಂದ ಕರ್ನಾಟಕ-ಮಹಾರಾಷ್ಟ್ರ ಅಂತರ ರಾಜ್ಯ ಗಡಿ ವಾಗ್ಧರಿಯಿಂದ ರಾಜ್ಯದೊಳಗೆ ಪ್ರವೇಶಿಸಿ ವಾಗ್ಧರಿ ಗಡಿಯಲ್ಲಿ ತಂಗಿದ್ದು, ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಾಗೂ ಇತರರು ಕಾರ್ಮಿಕರ ತಂಗು ಪ್ರದೇಶಕ್ಕೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಲಸೆ ಕಾರ್ಮಿಕರಿಗೆ ಊಟ, ಕುಡಿಯುವ ನೀರು, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಹಾಗೂ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದರು. ಪ್ರತಿದಿನ ದುಡಿದು ತಿನ್ನುವ ವಲಸೆ ಕಾರ್ಮಿಕರಿಗೆ ಊರಿಗೆ ಮರಳಿದ ನಂತರ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು. ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಸಿಇಒ ಡಾ| ಪಿ. ರಾಜಾ ಅವರಿಗೆ ಸೂಚನೆ ನೀಡಿದರು.

ಲಾಕ್‌ಡೌನ್‌ ಸಡಿಲಿಕೆಯಿಂದ ಅಂತಾರಾಜ್ಯ ಸಂಚಾರಕ್ಕೆ ವಲಸೆ ಕಾರ್ಮಿಕರಿಗೆ ಅವಕಾಶ ನೀಡಿರುವುದರಿಂದ ಸುಮಾರು 10 ಸಾವಿರ ಜನ ನೆರೆಯ ಮಹಾರಾಷ್ಟ್ರದಿಂದ ಬರುವ ಸಾಧ್ಯತೆ ಇದೆ. ಜಿಲ್ಲಾಡಳಿತ ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಡಾ| ಉಮೇಶ ಜಾಧವ ಸೂಚಿಸಿದರು.

ಜಿಲ್ಲಾಧಿಕಾರಿ ಶರತ್‌ ಬಿ. ಮಾತನಾಡಿ, ವಲಸೆ ಕಾರ್ಮಿಕರಿಗೆ ಇಲ್ಲಿ 24 ಗಂಟೆಗಳ ಕಾಲ ಊಟದ ವ್ಯವಸ್ಥೆ ಇರಲಿದೆ. ಕುಡಿಯುವ ನೀರು, ಪೊಲೀಸ್‌ ಭದ್ರತೆ, ರಾತ್ರಿ ಬೆಳಕಿನ ವ್ಯವಸ್ಥೆಗೆ ಜನರೇಟರ್‌, ಆ್ಯಂಬ್ಯುಲೆನ್ಸ್‌ ಸೇವೆ ಕಲ್ಪಿಸಲಾಗುವುದು. ಎಲ್ಲರಿಗೂ ಮಾಸ್ಕ್, ಹ್ಯಾಂಡ್‌ ಸ್ಯಾನಿಟೈಸರ್‌ ವಿತರಿಸುವಂತೆ ತಹಶೀಲ್ದಾರ್‌ ದಯಾನಂದ ಪಾಟೀಲ ಅವರಿಗೆ ಸೂಚನೆ ನೀಡಿದ ಜಿಲ್ಲಾ ಧಿಕಾರಿಗಳು, ಯಾವುದೇ ಕಾರಣಕ್ಕೂ ಇಲ್ಲಿ ಜನಸಂದಣಿಯಾಗದಂತೆ ನೋಂದಣಿ, ತಪಾಸಣೆ ಹಾಗೂ ಆಹಾರ ವಿತರಿಸಿ ಜನರನ್ನು ಇಲ್ಲಿಂದ ಕಳುಹಿಸಬೇಕು ಎಂದು ಆದೇಶಿಸಿದರು.

ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗುವುದು. ಯಾರಿಗಾದರೂ ಕೋವಿಡ್‌-19 ಲಕ್ಷಣ ಕಂಡುಬಂದಲ್ಲಿ ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗುವುದು. ಲಕ್ಷಣ ಇಲ್ಲದಿದ್ದವರಿಗೆ ತಮ್ಮ ಊರು ಸಮೀಪದ ಶಾಲೆ ಅಥವಾ ವಸತಿ ನಿಲಯಗಳಿಗೆ ತೆರಳಲು ಬಸ್‌ ವ್ಯವಸ್ಥೆ ಮಾಡಿ ಕಡ್ಡಾಯವಾಗಿ ಸರ್ಕಾರಿ ಗೃಹ ಬಂಧನದಲ್ಲಿರಿಸಲಾಗುವುದು ಎಂದರು.

Advertisement

ಸೇವಾ ಸಿಂಧು ತಂತ್ರಾಂಶದಲ್ಲಿ ಬಹಳಷ್ಟು ಜನ ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರೂ ಶನಿವಾರದಿಂದ ರಾಜ್ಯದೊಳಗೆ ಪ್ರವೇಶ ಮಾಡುವ ಸಾಧ್ಯತೆಯಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ  ದುಧನಿ, ವಾಗ್ಧರಿ ಮತ್ತು ಕಿಣ್ಣಿ ಗಡಿಯಿಂದ ವಲಸೆ ಕಾರ್ಮಿಕರು ರಾಜ್ಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಈ ಮೂರು ಗಡಿ ಪ್ರದೇಶದಲ್ಲಿ ಅಗತ್ಯ ಮುನ್ನೆಚರಿಕೆ ಕ್ರಮ ತೆಗೆದುಕೊಂಡಿದ್ದು, ಸ್ಕ್ರೀನಿಂಗ್‌ ಮಾಡಿಯೆ ಕಾರ್ಮಿಕರನ್ನು ಒಳ ಬಿಡಲಾಗುತ್ತದೆ ಎಂದರು. ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಸಹಾಯಕ ಆಯುಕ್ತ ರಾಮಚಂದ್ರ, ಐ.ಎ.ಎಸ್‌ ಪ್ರೊಬೇಷನರಿ ಅಧಿಕಾರಿ ಡಾ| ಗೋಪಾಲಕೃಷ್ಣ ಬಿ. ಸೇರಿದಂತೆ ಸ್ಥಳೀಯ ಪೊಲೀಸ್‌ ಹಾಗೂ ಕಂದಾಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next