ಭೋಪಾಲ: ಮಧ್ಯಪ್ರದೇಶ ರಾಜಧಾನಿ ಭೋಪಾಲದ ಹೊರವಲಯದಲ್ಲಿ ಇರುವ ಇಸ್ಲಾಮ್ ನಗರ ಎಂಬ ಗ್ರಾಮದ ಹೆಸರನ್ನು ಜಗದೀಶ್‌ಪುರ ಎಂದು ಬದಲಾಯಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಹೆಸರು ಅನ್ವಯವಾಗಲಿದೆ ಎಂದು ಸರ್ಕಾರದ ಹೊರಡಿಸಿದ ಗೆಜೆಟ್ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಗೃಹ ಸಚಿವಾಲಯ ಕೂಡ ಅನುಮತಿ ನೀಡಿದೆ. “ಹೆಸರು ಬದಲಾವಣೆಯ ಪ್ರಸ್ತಾಪಕ್ಕೆ ಯಾರಿಂದಲೂ ಆಕ್ಷೇಪ ಬರದೇ ಇರುವ ಹಿನ್ನೆಲೆಯಲ್ಲಿ ಇಸ್ಲಾಮ್‌ನಗರ ಹೆಸರನ್ನು ಜಗದೀಶ್‌ಪುರ ಎಂದು ಬದಲಿಸಲಾಗಿದೆ’ ಎಂದು ಸರ್ಕಾರ ಹೇಳಿದೆ.
ಹೆಸರು ಬದಲಾವಣೆ ಆಗಿರುವ ಗ್ರಾಮ ರಾಜಧಾನಿ ಭೋಪಾಲದಿಂದ 14 ಕಿಮೀ ದೂರ ಇದೆ. ಇತಿಹಾಸ ಕಾಲದ ದಾಖಲೆಗಳನ್ನು ಉಲ್ಲೇಖೀಸುವುದಿದ್ದರೆ, ಅದು ಭೋಪಾಲದ ರಾಜಧಾನಿಯಾಗಿತ್ತು. ಅದಕ್ಕೆ ಪುರಾವೆ ಎಂಬಂತೆ ಹಳೆಯ ಅರಮನೆಗಳ ಅವಶೇಷಗಳು ಇವೆ. ರಜಪೂತ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ ಈ ಸ್ಥಳಕ್ಕೆ ಜಗದೀಶ್‌ಪುರ ಎಂಬ ಹೆಸರು ಇತ್ತು. 18ನೇ ಶತಮಾನದಲ್ಲಿ ದೋಸ್ತ್ ಮೊಹಮ್ಮದ್ ಖಾನ್ ಭೋಪಾಲ ರಾಜ್ಯ ಸ್ಥಾಪಿಸಿದಾಗ ಹೆಸರು ಕೂಡ ಬದಲಾವಣೆ ಆಗಿತ್ತು.