ಬೆಂಗಳೂರು: ಲೋಕಸಭೆ ಚುನಾವಣೆ ವೇಳೆ ಚುನಾವಣ ಆಯೋಗದ ಅಧಿಕಾರಿಗಳು ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದವಾರ ಗೋವಿಂದಪ್ಪ ಅವರ ಮನೆಯಲ್ಲಿ 4.8 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಿಸಲಾಗಿರುವ ಚಾರ್ಜ್‌ಶೀಟ್ ರದ್ದುಪಡಿಸುವಂತೆ ಕೋರಿ ಚಿಕ್ಕಬಳ್ಳಾಪುರ ಸಂಸದ ಡಾ| ಕೆ. ಸುಧಾಕರ್ ಸಲ್ಲಿಸಿದ್ದ ಅರ್ಜಿಯಿಂದ ಹೈಕೋರ್ಟ್ ನ್ಯಾಯಪೀಠ ಹಿಂದೆ ಸರಿದಿದೆ.
ಪ್ರಕರಣ ಸಂಬಂಧ ಮಾದನಾಯಕಹಳ್ಳಿ ಪೊಲೀಸರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಜೆಎಂಎಫ್ಸಿ ಕೋರ್ಟ್‌ನಲ್ಲಿ ದಾಖಲಿಸಿರುವ ಚಾರ್ಜ್‌ಶೀಟ್ ರದ್ದುಪಡಿಸುವಂತೆ ಕೋರಿ ಡಾ| ಸುಧಾಕರ್ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿತ್ತು.
ಈ ವೇಳೆ ಡಾ| ಸುಧಾಕರ್ ಪರ ವಕೀಲರು ಹಾಜರಾಗಿ, ನ್ಯಾಯಪೀಠದ ಮುಂದೆ ಪ್ರಕರಣವನ್ನು ಪ್ರಸ್ತಾಪಿಸಿದರು. ಆಗ, ನ್ಯಾಯಮೂರ್ತಿಗಳು ಈ ಅರ್ಜಿಯ ವಿಚಾರಣೆ ನನ್ನ ಮುಂದೆ ಬೇಡ ಎಂದು ಹೇಳಿ, ವಿಚಾರಣೆಯಿಂದ ಹಿಂದೆ ಸರಿದರು. ಅರ್ಜಿದಾರರ ಪರ ಹಿರಿಯ ವಕೀಲರಾದ ಬಿ.ವಿ. ಆಚಾರ್ಯ, ಬಿ.ಎಲ್ ಆಚಾರ್ಯ ಹಾಜರಾಗಿದ್ದರು.
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಹಿಂದಿನ ದಿನ ಚುನಾವಣ ಆಯೋಗದ ಅಧಿಕಾರಿಗಳು ಗೋವಿಂದಪ್ಪ ಅವರ ಮನೆಯಿಂದ 4.8 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದರು. ಈ ಹಣ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಹಣ ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಚುನಾವಣ ನೀತಿ ಸಂಹಿತೆ ಜಾರಿಯ ರಾಜ್ಯ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರಿಗೆ ಸುಧಾಕರ್ ಅವರು ವಾಟ್ಸ್‌ಆ್ಯ ಪ್ ಮೆಸೇಜ್ ಮಾಡಿದ್ದರು. ಆದ್ದರಿಂದ ಚುನಾವಣ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು, ನೆಲಮಂಗಲ ಜೆಎಂಎಫ್ಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಸುಧಾಕರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.