Advertisement

ಜೋಡೋ ಯಾತ್ರೆಗೆ ಸರ್ವರೂ ಕೈ ಜೋಡಿಸಿ

03:16 PM Sep 27, 2022 | Team Udayavani |

ಚನ್ನಪಟ್ಟಣ: ದೇಶದ ಐಕ್ಯತೆ, ಸಮಗ್ರತೆ ಹಾಗೂ ಸಾಮರಸ್ಯ ವೃದ್ಧಿಸುವ ನಿಟ್ಟಿನಲ್ಲಿ ಭಾರತ್‌ ಜೋಡೋ- ಭಾರತ ಐಕ್ಯತಾ ಯಾತ್ರೆಯನ್ನು ಎಐಸಿಸಿ ವರಿಷ್ಠರಾದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಯಾತ್ರೆಗೆ ಸರ್ವರೂ ಕೈ ಜೋಡಿಸಿಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಮನವಿ ಮಾಡಿದರು.

Advertisement

ನಗರದಲ್ಲಿ ಚನ್ನಪಟ್ಟಣ ಕಾಂಗ್ರೆಸ್‌ ಘಟಕದಿಂದ ನಡೆದ ಭಾರತ್‌ ಜೋಡೋ- ಭಾರತ ಐಕ್ಯತಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಹುಲ್‌ ಗಾಂಧಿ ಅವರು ಸೆ.30ರಂದು ರಾಜ್ಯಕ್ಕೆ ಆಗಮಿಸಲಿದ್ದು, ನಿತ್ಯ ಇಪ್ಪತ್ತೈದು ಕಿಲೋ ಮೀಟರ್‌ ನಂತೆ ರಾಜ್ಯದಲ್ಲಿ ಐನೂರಕ್ಕೂ ಹೆಚ್ಚು ಕಿ.ಮೀ ಯಾತ್ರೆ ನಡೆಸಲಿದ್ದಾರೆ. ಹೀಗಾಗಿ, ನಮ್ಮ ಕಾರ್ಯಕರ್ತರು, ಪ್ರಗತಿಪರರು, ವಿವಿಧ ಸಂಘಟನೆಗಳು ಸಾಥ್‌ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಬಿಜೆಪಿ ಹೊರತುಪಡಿಸಿ, ಬೇರೆ ಪಕ್ಷಗಳ ನಾಯಕರನ್ನು ಹಣಿಯುವ ಕೆಲಸ ಮಾಡುತ್ತಿದೆ. ಇಂತಹ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವ ಬಿಜೆಪಿ ಪಕ್ಷವನ್ನು ಕಿತ್ತೂಗೆಯುವ ನಿಟ್ಟಿನಲ್ಲಿ ಶತಮಾನದ ಇತಿಹಾಸಯುಳ್ಳ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲು ಜನತೆಗೆ ಮನ ಮುಟ್ಟುವಂತೆ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಪ್ರಸನ್ನ ಪಿ.ಗೌಡ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಿಂದ ನಂಜನಗೂಡು ವರೆಗೆ ನಡೆಯುವ ರಾಹುಲ್‌ ಗಾಂಧಿ ನೇತೃತ್ವದ ಪಾದಯಾತ್ರೆಗೆ ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಿ ಪಾದಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ರಾಮನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್‌.ಗಂಗಾಧರ್‌, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ.ವೀರೇಗೌಡ ಮಾತ ನಾಡಿದರು. ಚನ್ನಪಟ್ಟಣ ತಾಲೂಕು ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಆರ್‌.ಪ್ರಮೋದ್‌, ನಗರ ಬ್ಲಾಕ್‌ ಅಧ್ಯಕ್ಷ ಸುನೀಲ್‌ ಕುಮಾರ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕೆ.ಟಿ. ಲಕ್ಷ್ಮಮ್ಮ, ಮುಖಂಡರಾದ ಬೋರ್‌ವೆಲ್‌ ರಂಗನಾಥ್‌, ಕೋಡಂಬಹಳ್ಳಿ ಶಿವಮಾದು, ನಗರಸಭಾ ಸದಸ್ಯರಾದ ವಾಸಿಲ್‌ ಖಾನ್‌ ಹಾಗೂ ತಾಲೂಕು ಕಾಂಗ್ರೆಸ್‌ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next