Advertisement
ಶನಿವಾರ ಮಧ್ಯಪ್ರದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಭಾರೀ ವಾಗ್ಧಾಳಿ ನಡೆಸಿದ್ದಾರೆ. ಜನರು ಬಿಜೆಪಿಯನ್ನು, ನಮ್ಮ ಅಭಿವೃದ್ಧಿ ಕಾರ್ಯಗಳನ್ನು ನಂಬುತ್ತಾರೆ. ಅದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಆದರೆ, ಕಾಂಗ್ರೆಸ್ ಸುಖಾಸುಮ್ಮನೆ ಸುಳ್ಳುಗಳು, ಗೊಂದಲಗಳು ಹಾಗೂ ನಕಾರಾತ್ಮಕತೆಯನ್ನು ಪಸರಿಸುತ್ತಿದೆ. ಅವರಿಗೆ ಸತ್ಯಾಂಶ ಗೊತ್ತಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಧ್ಯಪ್ರದೇಶವು ರೋಗಗ್ರಸ್ತ ರಾಜ್ಯವೆಂಬ ಹಣೆಪಟ್ಟಿ ಹೊಂದಿತ್ತು. ಈಗ ಬಿಜೆಪಿ ಸರಕಾರವು ರಾಜ್ಯವನ್ನು ಈ ಹಣೆಪಟ್ಟಿಯಿಂದ ಮುಕ್ತವಾಗಿಸಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ರಾಜಗಡದಲ್ಲಿ ಮೋಹನ್‌ಪುರ ನೀರಾವರಿ ಯೋಜನೆ, ಭೋಪಾಲ್‌ನಲ್ಲಿ ಸೂತ್ರ ಸೇವಾ ಎಂಬ ಹೆಸರಿನ ನಗರ ಸಾರಿಗೆ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ ನೀಡಿದ್ದಾರೆ. 3,866 ಕೋಟಿ ರೂ. ವೆಚ್ಚದ ಮೋಹನ್‌ಪುರ ನೀರಾವರಿ ಯೋಜನೆ ಯಿಂದ, 400 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದ್ದು, ಇದರ ನೀರು 700ಕ್ಕೂ ಹೆಚ್ಚು ಗ್ರಾಮಗಳನ್ನು ತಲುಪಲಿದೆ. 1.25 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲಿದೆ. ಇದೇ ವೇಳೆ, ಪ್ರಧಾನಿ ಮೋದಿ 2018ರ ಸ್ವತ್ಛ ಸರ್ವೇಕ್ಷಣದ ವಿಜೇತರಿಗೆ ಸನ್ಮಾನವನ್ನೂ ಮಾಡಿದ್ದಾರೆ. ಇಂದೋರ್, ಭೋಪಾಲ್, ಜಬಲ್ಪುರ, ಗ್ವಾಲಿಯರ್, ಉಜ್ಜೆ„ನ್‌ನಲ್ಲಿ 278 ಕೋಟಿ ರೂ. ವೆಚ್ಚದ 23 ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ನಡುವೆ, ಪ್ರಧಾನಮಂತ್ರಿ ಆವಾಸ ಯೋಜನೆಯಡಿ ನಿರ್ಮಿಸಲಾದ 1 ಲಕ್ಷಕ್ಕೂ ಹೆಚ್ಚು ಮನೆಗಳ ಗೃಹ ಪ್ರವೇಶವೂ ರಾಜ್ಯಾದ್ಯಂತ ಶನಿವಾರ ಏಕಕಾಲಕ್ಕೆ ನೆರವೇರಿತು. ಪ್ರಸಕ್ತ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿಯೂ ಪ್ರಧಾನಿ ಭೇಟಿ ಮಹತ್ವ ಪಡೆದಿದೆ.