ಶಿರಸಿ: ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದ ಉತ್ತರ ಕನ್ನಡ ಸಂಸದ, ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ರಾಜ್ಯ ರಾಜಕಾರಣ ಪ್ರವೇಶಿಸಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆಯೇ ಎಂಬ ವಿಚಾರ ಈಗ ಸದ್ದು ಮಾಡುತ್ತಿದೆ.
ಈ ಬಾರಿಯ ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ ಭಾರತೀಯತೆ, ದೇಶ, ಸಂಸ್ಕೃತಿ, ಸಂಸ್ಕಾರ, ಹಿಂದುತ್ವ… ಹೀಗೆ ರಾಷ್ಟ್ರೀಯ ಚಿಂತನೆಗಳ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ ನಾಯಕರನ್ನು ಮುಂದಿಟ್ಟುಕೊಂಡು ಪಕ್ಷವನ್ನು ಮರು ಸಂಘಟಿಸಲು ಚಿಂತನೆ ನಡೆದಿದ್ದು, ಹೆಗಡೆ ಹೆಸರನ್ನು ಸಂಘ ಪರಿವಾರ ಪ್ರಬಲವಾಗಿ ಪ್ರಸ್ತಾವಿಸಿದೆ ಎನ್ನಲಾಗಿದೆ.
ಕಳೆದ ವಿಧಾನಸಭೆ ಚುನಾವಣ ಪ್ರಚಾರದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಅಂಕೋಲಾದಲ್ಲಿ ನಡೆಸಿದ ಸಮಾವೇಶದಲ್ಲೂ ಅವರು ಪಾಲ್ಗೊಂಡಿರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕಳೆದ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಬರುವಂತೆ ಬಿಜೆಪಿಯ ಕೇಂದ್ರದ ವರಿಷ್ಠರು ಸೂಚಿಸಿದ್ದರೂ ಒಪ್ಪದ ಹೆಗಡೆ ಸಕ್ರಿಯ ರಾಜಕಾರಣದಿಂದ ದೂರವಿದ್ದರು. ಆದರೆ ಇದೀಗ ಮತ್ತೆ ಅವರನ್ನು ರಾಜಕೀಯ ಅಖಾಡಕ್ಕಿಳಿಸಲು ಆರ್‌ಎಸ್‌ಎಸ್‌ನ ಪ್ರಮುಖರ ಮೂಲಕ ಮಾತುಕತೆ ನಡೆಸಲಾಗುತ್ತಿದೆ ಎಂದು ಖಚಿತ ಮೂಲಗಳು ತಿಳಿಸಿವೆ.