ಭಾರತದ ವಿರುದ್ಧ ಸುಳ್ಳು ವರದಿ ಸಿದ್ಧಪಡಿಸಲು ಪಡೆದಿದ್ದ ಹಣ
ಭಾರತ ಪ್ರವೇಶಕ್ಕೆ ಅವಕಾಶ ಸಿಕ್ಕದ ಹಿನ್ನೆಲೆಯಲ್ಲಿ ಹಿಂದಿರುಗಿದ್ದ ಡೆಬಿ
ಹೊಸದಿಲ್ಲಿ: ಸಂಸದೆ ಡೆಬಿ ಅಬ್ರಹಾಮ್ಸ್ ನೇತೃತ್ವದ ಬ್ರಿಟನ್ ಸರ್ವ ಪಕ್ಷಗಳ ಸಂಸದೀಯ ತಂಡವು (ಎಪಿಪಿಜಿ) ಪಾಕಿಸ್ಥಾನ ಹಾಗೂ ಪಿಒಕೆ ಪ್ರದೇಶಕ್ಕೆ ಭೇಟಿ ನೀಡಲು ಪಾಕಿಸ್ಥಾನದಿಂದ 30 ಲಕ್ಷ ರೂ. ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ.
ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಅಲ್ಲಿನ ಪರಿಸ್ಥಿತಿ ಅರಿಯುವ ನೆಪದಲ್ಲಿ ಡೆಬಿ ನೇತೃತ್ವದ ಬ್ರಿಟನ್ ಸಂಸದರ ತಂಡ ಆಗಮಿಸಿತ್ತು. ಆದರೆ, ಅವರ ಉದ್ದೇಶ ಕಾಶ್ಮೀರದಲ್ಲಿನ ಪರಿಸ್ಥಿತಿ ಅಧ್ಯಯನದ ಆಗಿರಲಿಲ್ಲ. ಕಾಶ್ಮೀರದಲ್ಲಿ ಅಲ್ಪಸಂಖ್ಯಾಕರ ಮೇಲೆ ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವರದಿ ಕೊಡುವುದೇ ಆಗಿತ್ತು. ಈ ಕೆಲಸಕ್ಕಾಗಿ 30 ಲಕ್ಷ ರೂ.ಗಳನ್ನು ಈ ತಂಡ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಫೆಬ್ರವರಿ ಪ್ರಾರಂಭದಲ್ಲಿ ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಡೆಬಿ ಅವರು ಮಾನ್ಯವಲ್ಲದ ವೀಸಾ ನೀಡಿದ್ದಾಗಿ ಹೇಳಿ ಅವರನ್ನು ನಿಲ್ದಾಣದಿಂದ ಹಿಂದಕ್ಕೆ ಕಳುಹಿಸಲಾಗಿತ್ತು. ಬಳಿಕ ಅವರು ಪಾಕಿಸ್ಥಾನಕ್ಕೆ ಹೋಗಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಭೇಟಿ ಮಾಡಿ, ಆನಂತರ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ್ದರು.