Advertisement
ಡೋಕ್ಲಾಂನಲ್ಲಿ ಕಳೆದ 2 ತಿಂಗಳಿಂದ ಚೀನಾವು ನಿರಂತರವಾಗಿ ಕ್ಯಾತೆ ತೆಗೆದು ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ. ಸೋಮವಾರ ಈ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ವು ಕ್ವಿಯಾನ್, ‘ಪರ್ವತವನ್ನು ಸುಲಭವಾಗಿ ನಡುಗಿಸಬಹುದು. ಆದರೆ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನಲ್ಲ. ನಮ್ಮ ಆರ್ಮಿ ಪಡೆ ಸಾಕಷ್ಟು ಪ್ರಾಬಲ್ಯದಿಂದ ಕೂಡಿದೆ. ಭಾರತವು ನಮ್ಮ ಸಾಮರ್ಥ್ಯದ ಕುರಿತು ಭ್ರಮೆಯಲ್ಲಿದೆ’ ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಪಾಕಿಸ್ಥಾನವೂ ತನ್ನ ಉದ್ಧಟತನ ಮುಂದುವರಿಸಿದೆ. ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘಿಸುತ್ತಿದ್ದರೂ, ಭಾರತದ ಮೇಲೆ ಗೂಬೆ ಕೂರಿಸಿದೆ. ಎಲ್‌ಒಸಿಯಲ್ಲಿ ಭಾರತವೇ ಗುಂಡಿನ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ಭಾರತದ ಡೆಪ್ಯುಟಿ ಹೈಕಮಿಷನರ್ ಜೆ.ಪಿ.ಸಿಂಗ್ ಅವರನ್ನು ಕರೆಸಿ ಪ್ರತಿಭಟನೆ ಸಲ್ಲಿಸಿದೆ. ಭಾರತದ ದಾಳಿಯಿಂದ ನಾಗರಿಕ ಮೃತಪಟ್ಟಿದ್ದಾನೆಂದು ಪಾಕಿಸ್ಥಾನ ಆರೋಪಿಸಿದೆ.
Related Articles
ಸಿಕ್ಕಿಂ ಗಡಿ ವಿವಾದವನ್ನು ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಹಾಗೂ ಚೀನಾ ರಾಜತಾಂತ್ರಿಕವಾಗಿಯೇ ಹೆಜ್ಜೆ ಇಡುತ್ತಿದೆ. ಈ ವಾರ ಬೀಜಿಂಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಎನ್‌ಎಸ್‌ಎ ಸಭೆಯಲ್ಲಿ ಕೌನ್ಸಿಲರ್ ಯಾಂಗ್ ಜಿಯೇಚಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ದ್ವಿಪಕ್ಷೀಯ ಮಾತುಕತೆ ವೇಳೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. ಚೀನಾ ವಿದೇಶಾಂಗ ವಕ್ತಾರ ಲು ಕಾಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ದೋವಲ್ ಹಾಗೂ ಯಾಂಗ್ ಈ ವಿಚಾರವಾಗಿ ಚರ್ಚಿಸುವ ಸಾಧ್ಯತೆ ಇದೆ. ಆದರೆ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈಗಲೇ ಈ ಬಗ್ಗೆ ಹೇಳುವಷ್ಟು ಮಾಹಿತಿಯೂ ನನ್ನ ಬಳಿ ಇಲ್ಲ’ ಎಂದಿದ್ದಾರೆ.
Advertisement