Advertisement

ಸಿನೆಮಾಗಳು ಚಿಂತನೆಗೆ ಪ್ರೇರಣೆಯಾಗಬೇಕು: ಗಿರೀಶ್‌ ಕಾಸರವಳ್ಳಿ

08:08 PM Mar 07, 2021 | Team Udayavani |

ಅಮೆರಿಕ
ಸಿನೆಮಾಗಳು ಚಿಂತನೆಗೆ ಪ್ರೇರಣೆಯಾಗಬೇಕು. ಆದರೆ ವೈಭವೋಪೇತ ಸಿನೆಮಾ ನೋಡುವಾಗ ನಾವು ಭಾವನೆಗಳಲ್ಲಿ ಕಳೆದುಹೋಗುತ್ತೇವೆ. ಇದರಿಂದ ಹೊಸ ಚಿಂತನೆಗಳು ಹುಟ್ಟಲು ಸಾಧ್ಯವಿಲ್ಲ. ಹೀಗಾಗಿ ನನಗೆ ಯಾವುದೇ ಅದ್ದೂರಿ ಚಿತ್ರಗಳನ್ನು ಮಾಡುವ ಕನಸಿಲ್ಲ. ಅದ್ದೂರಿ ಬಜೆಟ್‌ನಲ್ಲಿ ಚಿಂತನೆಗಳಿಗೆ ಪ್ರೇರಣೆಯಾಗಬಲ್ಲ ಸಾಮಾಜಿಕ ಚಿತ್ರಗಳನ್ನು ನಿರ್ಮಿಸಬಹುದು ಎಂದು ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಹೇಳಿದರು.

Advertisement

ಅಮೆರಿಕ ಕನ್ನಡ ಸಾಹಿತ್ಯ ರಂಗದಿಂದ ಶನಿವಾರ ನಡೆದ ವರ್ಚುವಲ್‌ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವೀಕ್ಷಕರ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿ ದರು.
ಫಾರ್ಮಸಿ ಓದು ತ್ತಿರುವಾಗ ಫ‌ಸ್ಟ್‌ ಕ್ಲಾಸ್‌ ನಲ್ಲಿ ಪಾಸಾಗಿದ್ದೆ. ಮುಂದೆ ಎಂಫಾರ್ಮಸಿಗೆ ಸೀಟು ಸಿಗುವುದರಲ್ಲಿತ್ತು. ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದ ರಿಂದ ಸಿನೆಮಾ ಸಂಪರ್ಕ ಹೆಚ್ಚಾಗಿ ಇರಲಿಲ್ಲ. ಸಾಹಿತ್ಯದ ಮೇಲೆ ಒಲವಿತ್ತು. ಸಂಸ್ಕಾರ ಚಿತ್ರ ನೋಡಿದ ಮೇಲೆ ಚಿಕ್ಕಪ್ಪನವರಾದ ಕೆ.ವಿ. ಸುಬ್ಬಣ್ಣ ಅವರು ನೀಡಿದ ಪ್ರೇರಣೆಯಿಂದಾಗಿ ಸಿನೆಮಾ ಕ್ಷೇತ್ರದ ಮೇಲೆ ಒಲವು ಮೂಡತೊಡ
ಗಿತ್ತು. ಹೀಗಾಗಿ ಬಳಿಕ ಫಿಲ್ಮ್ ಇನ್ಸ್‌ಟಿಟ್ಯೂಟ್‌ಗೆ ಸಂದರ್ಶನ ನೀಡಿದೆ.

ಅದರಲ್ಲಿ ಆಯ್ಕೆಯಾದೆ ಅಲ್ಲಿಂದ ಮುಂದೆ ಸಿನೆಮಾ ಕ್ಷೇತ್ರದ ನಂಟು ಬೆಳೆಯುತ್ತ ಹೋಯಿತು ಎಂದು ತಿಳಿಸಿದರು.
ಸಿನೆಮಾ ಕಥೆ ಮೂಡುವುದು ಹೇಗೆ ಎಂದು ವೀಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ಆಗುಹೋಗುಗಳನ್ನೇ ಅವಲೋಕಿಸುತ್ತ ಮನಸ್ಸಿನೊಳಗೆ ಸಂವಾದ ನಡೆಸುತ್ತಾ ಇರುತ್ತೇನೆ. ಆಗ ಉಂಟಾಗುವ ಬೆಳವಣಿಗೆ, ತಲ್ಲಣ ಕನ್ನಡದ ಕೃತಿಯತ್ತ ನನ್ನನ್ನು ಸೆಳೆಯುತ್ತದೆ. ಬಳಿಕ ಆ ಕೃತಿಗೆ ಸಿನೆಮಾ ಆಗುವ ಶಕ್ತಿ ಇದೆಯಾ ಎಂದು ಪರಿಶೀಲಿಸುತ್ತೇನೆ. ಒಂದು ವೇಳೆ ಮಾಡಬಹುದು ಎಂದೆನಿಸಿದರೆ ಆನಂತರ ಅದರ ಮೇಲೆ ಕೆಲಸ ಪ್ರಾರಂಭಿಸುತ್ತೇನೆ. ಆದರೆ ಕೃತಿಯ ಮೂಲಕ್ಕೆ ಯಾವತ್ತೂ ನಾನು ನಿಷ್ಠವಾಗಿ ಇರುವುದಿಲ್ಲ. ಸಾಕಷ್ಟು ಬದಲಾವಣೆ ಮಾಡಿಕೊಂಡು ಚಿತ್ರ ನಿರ್ಮಾಣ ಮಾಡಲಾಗುತ್ತದೆ. ಆದರೂ ಈವರೆಗೆ ಇದಕ್ಕೆ ಸಿಕ್ಕಿದ್ದ ಪ್ರತಿಕ್ರಿಯೆಯೂ ಅತ್ಯುದ್ಭುತವಾಗಿದೆ ಎಂದರು.

ಸಿನೆಮಾ ಸ್ವತಂತ್ರ ಅನುಭವ ಕೊಡುವ ಮಾಧ್ಯಮ. ಸಾಹಿತ್ಯಿಕ ಮೌಲ್ಯ ಇಲ್ಲಿ ಮುಖ್ಯವಾಗುವುದಿಲ್ಲ. ಸಿನೆಮಾಕ್ಕೆ ಎಷ್ಟು ಹೊಂದಿಕೊಳ್ಳುತ್ತದೆ ಎನ್ನುವುದಷ್ಟೇ ಮುಖ್ಯವಾಗುತ್ತದೆ. ಕಥೆ ಇಷ್ಟವಾದಾಗ ಮೂಲ ಲೇಖಕರಲ್ಲಿ ಸಿನೆಮಾಕ್ಕೆ ಅನುಮತಿ ಕೇಳುತ್ತೇನೆ. ಬದಲಾದ ರೂಪಕ್ಕೆ ಸಾಹಿತಿಗಳ ಪ್ರತಿಕ್ರಿಯೆ ಕೇಳುತ್ತೇನೆ. ಆರಂಭದಲ್ಲಿ ಸಿಕ್ಕ ಅನಂತ ಮೂರ್ತಿಯವರ ಅಭಿಪ್ರಾಯ ಮತ್ತಷ್ಟು ಕೆಲಸಗಳಿಗೆ ಉತ್ತೇಜನ ಸಿಕ್ಕಿತು ಎಂದು ಹೇಳಿದರು.

ಸಿನೆಮಾ ಚಿತ್ರಕಥೆ ಎನ್ನುವುದು ಕೇವಲ ದೃಶ್ಯದಿಂದ ಹುಟ್ಟುವುದಿಲ್ಲ. ಅದು ಶಬ್ದ, ಸಂಗೀತ ದಿಂದಲೂ ಹುಟ್ಟಬಹುದು. ಎಷ್ಟೋ ಬಾರಿ ಕಥೆ
ಗಳನ್ನು ಆಯ್ಕೆ ಮಾಡುವಾಗ ಕೆಲವೊಂದು ಸನ್ನಿವೇಶ ಗಳು ಕಾಡಲಾರಂಭಿಸುತ್ತದೆ. ಅಲ್ಲಿಂದ ಕಥೆ ಹುಟ್ಟಿ ಕೊಳ್ಳುತ್ತದೆ ಎಂದ ಅವರು, ಕಥೆಯಿಂದ ಸಿನೆಮಾ ಹುಟ್ಟೋದಿಲ್ಲ. ಬಿಂಬದಿಂದ ಸಿನೆಮಾ ಹುಟ್ಟುತ್ತದೆ. ಹಿಂದಿನ ತಲೆಮಾರಿನಲ್ಲಿ ಸಂಬಂಧಗಳೇ ಮುಖ್ಯ ವಾಗಿರುತ್ತಿತ್ತು. ಆದರೆ ಈಗ ವೈಯಕ್ತಿಕ ಬೇಕುಬೇಡ ಗಳೇ ಮುಖ್ಯವಾಗಿವೆ. ಹೀಗಾಗಿ ಸಿನೆಮಾ ಕ್ಷೇತ್ರದಲ್ಲೂ ಇದು ಪರಿಣಾಮವಿದೆ ಎಂದರು.
ಇಂಗ್ಲಿಷ್‌ ಕಥೆ, ಕಾದಂಬರಿಗಳನ್ನು ನೀವು ಯಾಕೆ ನಿಮ್ಮ ಸಿನೆಮಾಕ್ಕಾಗಿ ಆಯ್ಕೆ ಮಾಡಿಕೊಂಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಗಿರೀಶ್‌ ಕಾಸರವಳ್ಳಿ ಅವರು, ಕನ್ನಡದ ಕಥೆ ಮಾಡುವಾಗ ಅದು ನನ್ನ ಕಥೆ ಎಂದೆನಿಸುತ್ತದೆ. ಬೇರೆ ಭಾಷೆಯ ಕೃತಿಗಳನ್ನು ಆಯ್ದುಕೊಳ್ಳುವಾಗ ಅದರೊಳಗೆ ಬಾಂಧವ್ಯ ಬೆಸೆಯುವುದು ಕಷ್ಟವಾಗುತ್ತಿತ್ತು. ಹೀಗಾಗಿ ಬೇರೆ ಭಾಷೆಯ ಸಾಹಿತ್ಯಗಳನ್ನು ಸಿನೆಮಾಕ್ಕೆ ಬಳಸುವ ಪ್ರಯತ್ನ ಮಾಡಿದ್ದೆ. ಆದರೆ ಸಾಧ್ಯವಾಗಲಿಲ್ಲ ಎಂದರು.

Advertisement

ಪುಸ್ತಕ, ಸಿನೆಮಾ ಹೋಲಿಕೆ ಸರಿಯಲ್ಲ
ಕನ್ನಡ ಸಾಹಿತ್ಯ, ನಾಟಕ, ಯಕ್ಷಗಾನದ ಅರಿವಿತ್ತು. ಸಿನೆಮಾದ ಅರಿವು ಅನಂತರ ಮೂಡಿತ್ತು. ಭಾವನೆಗಿಂತ ಹೆಚ್ಚಾಗಿ ಯೋಚನೆ ಮಾಡುವುದು ನನ್ನ ಅಭ್ಯಾಸ. ಹೀಗಾಗಿ ಅಭಿನಯ ಯಾವತ್ತೂ ನನ್ನ ಆಸೆಯಾಗಿರಲಿಲ್ಲ ಎಂದ ಅವರು, ಪುಸ್ತಕ ಮತ್ತು ಸಿನೆಮಾವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ಇದರಲ್ಲಿ ಸಿನೆಮಾ ಕೇಳುವುದು, ಪುಸ್ತಕ ಓದಿ ದಕ್ಕಿಸಿಕೊಳ್ಳುವುದು. ಅದನ್ನು ಹೋಲಿಕೆ ಮಾಡುವುದೇ ಸರಿಯಲ್ಲ. ದೃಶ್ಯಗಳನ್ನು ವಿವರಗಳ ಮೂಲಕ ಸಿನೆಮಾಗಳಲ್ಲಿ ಕಟ್ಟಿಕೊಡುವ ಹಾಗೇ ಸಾಹಿತ್ಯದಲ್ಲಿ ಮಾಡಲು ಸಾಧ್ಯವಿಲ್ಲ. ಸಿನೆಮಾವನ್ನು ಓದುವುದಲ್ಲ, ಅದನ್ನು ನೋಡಬೇಕು. ಸಿನೆಮಾ ಎನ್ನುವುದು ಅನುಭವವನ್ನು ಕಟ್ಟಿಕೊಡುವುದು. ಅದನ್ನು ಸಾಹಿತ್ಯದಲ್ಲಿ ಕಟ್ಟಲು ಸಾಧ್ಯವಿಲ್ಲ. ಆ ದೃಷ್ಟಿಕೋನದಿಂದ ನೋಡಿದರೆ ಸಿನೆಮಾ ಮತ್ತು ಪುಸ್ತಕದ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ. ಅದ್ದರಿಂದ ಸಿನೆಮಾ ಮತ್ತು ಪುಸ್ತಕಗಳ ಹೋಲಿಕೆ ಮಾಡುವುದು ನಾವು ಕಲೆಗೆ ಕೊಡುವ ಗೌರವವಲ್ಲ ಎಂದರು.

ಮನೋರಂಜನೆಯನ್ನು ನಾವಿಂದು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಮನೋವಿಕಾಸ ಎನ್ನುವುದು ಕೂಡ ಮನೋರಂಜನೆಯ ಭಾಗ. ಸಿನೆಮಾ ಎನ್ನುವುದು ಮನೋರಂಜನೆ ಆಗಕೂಡದು. ಅದು ನಮ್ಮನ್ನು ಹೊಸದೊಂದು ಚಿಂತನೆಗೆ ಪ್ರೇರಣೆ ನೀಡಬೇಕು. ಮನೋರಂಜನೆಯ ದೃಷ್ಟಿಕೋನವೇ ಇಂದು ಬದಲಾಗಿದೆ. ಹೀಗಾಗಿ ನಾವು ಸಿನೆಮಾ ಅಂದರೆ ಹೀಗೆಯೇ ಇರಬೇಕು ಎಂದುಕೊಳ್ಳುತ್ತೇವೆ. ಹೀಗಾಗಿ ಭಾರತೀಯ ಸಿನೆಮಾಗಳು ಯಾವುದೂ ಇಂದು ಅದನ್ನು ಮೀರಿ ಹೋಗುವ ಪ್ರಯತ್ನ ಮಾಡಿಲ್ಲ. ಅದನ್ನು ಪ್ರಶ್ನೆ ಮಾಡಲು ಹೊರಟರೆ ನಾವು ಬೇರೆ ರೀತಿಯಾಗಿ ಸಿನೆಮಾ ನೋಡಲು
ಸಾಧ್ಯವಿದೆ.

ಮನುಷ್ಯನ ದೃಷ್ಟಿಕೋನವನ್ನು ಯಾವ ರೀತಿ ಎತ್ತಿ ಹಿಡಿಯಬಹುದು ಎನ್ನುವುದು ಸಿನೆಮಾದಲ್ಲಿ ಒಂದು ಬಹುಮುಖ್ಯ ಭಾಗವಾಗುತ್ತದೆ ಎಂದು ಅವರು ತಿಳಿಸಿದರು.
ಈಗಲೂ ನಾನು ದಿನಕ್ಕೊಂದು ಸಿನೆಮಾ, ಪುಸ್ತಗಳನ್ನು ಓದುವ, ನೋಡುವ ಅಭ್ಯಾಸವಿಟ್ಟುಕೊಂಡಿದ್ದೇನೆ. ಪ್ರತಿಯೊಂದು ಕ್ಷೇತ್ರಗಳಲ್ಲೂ ಹೊಸಹೊಸ ತಂತ್ರಜ್ಞಾನಗಳು ಬೆಳೆಯುತ್ತಿದೆ. ಹೀಗಾಗಿ ಇದು ಕೂಡ ಇಂದು ಸಿನೆಮಾ ವಲಯವನ್ನು ಪ್ರಭಾವಿತಗೊಳಿಸುತ್ತಿದೆ. ಇದಕ್ಕೆ ಕಾರಣಗಳು ಬೇರೆಬೇರೆ ಇರುತ್ತದೆ. ಇದರಿಂದ ಪ್ರೇಕ್ಷಕ ಸಿನೆಮಾ ನೋಡುವ ಕ್ರಮವೂ ಬದಲಾಗುತ್ತಿದೆ ಎಂಧಉ ಅವರು ಹೇಳಿದರು.
ನನ್ನ ಯಾವ ಸಿನೆಮಾಗಳೂ ಒಟಿಟಿ ಪ್ಲ್ರಾಟ್‌ಫಾರ್ಮ್ನಲ್ಲಿ ಇಲ್ಲ. ಇತ್ತೀಚೆಗೆ ಸಿನೆಮಾ ನಿರ್ಮಾಣ ಆದರ ಮೇಲೆ ಅದು ನಿರ್ಮಾಪಕರ ಸೊತ್ತಾಗಿರುತ್ತದೆ. ಹೀಗಾಗಿ ಒಟಿಟಿ ಪ್ಲಾಟ್‌ಫಾರ್ಮ್ ಈಗ ಅಗತ್ಯ ಎಂಬಂತಾಗಿದೆ. ಅದ್ದರಿಂದ ಕೆಲವೊಂದು ಒಟಿಟಿ ಪ್ಲಾಟ್‌ಫ್ಲಾರ್ಮ್ ಗಳಲ್ಲಿ ಕೇಳ್ತಾ ಇದ್ದೇನೆ. ಮುಂದೆ ಸಿಗಬಹುದು ಎಂದರು.

ಬದುಕು ತುಂಬಾ ಸಂಕೀರ್ಣ ವಾಗಿರುತ್ತದೆ. ಅದನ್ನು ಸುಲಭಗೊಳಿಸದೆ ಮಾಡುವುದು ತುಂಬಾ ಸವಾಲಿನ ಕೆಲಸ. ಇವತ್ತು ಸಿನೆಮಾ ಕ್ಷೇತ್ರದಲ್ಲಿ ಅಂಶಿಕ ವಿಚಾರಗಳನ್ನೇ ನೋಡಿ ತೆರೆಯ ಮೇಲೆ ತರಲಾಗುತ್ತದೆ. ಹೀಗಾಗಿ ಬದುಕುವುದು ತುಂಬಾ ಸರಳ ಎಂದೆನಿಸಿ ಬಿಡುತ್ತದೆ. ಆದರೆ ಕೆಲವೇ ಮಂದಿ ಮಾತ್ರ ಸಮಗ್ರವಾಗಿ ಅದನ್ನು ಗ್ರಹಿಸುತ್ತಾರೆ.

ಯಾವುದೇ ವಿಚಾರವಿರಲಿ ನೋಡುವ ಕ್ರಮ ಸಮಗ್ರವಾಗಿರಬೇಕು. ಇವತ್ತು, ನಿನ್ನೆ, ನಾಳೆಗೆ ಇರುವ ಸಂಬಂಧ ಗುರುತಿಸದೇ ಹೋದರೆ ಅದು ಬಹುಬೇಗನೆ ನಶಿಸಿ ಹೋಗುತ್ತದೆ. ಸಿನೆಮಾದಲ್ಲಿ ಸೌಂದರ್ಯ ಶಾಸ್ತ್ರ ತುಂಬಾ ಬೆಳೆದಿದ್ದರೂ ಪ್ರಚಾರಕ್ಕೆ ಬಂದಿಲ್ಲ. ಯಾಕೆಂದರೆ ಸಾಮಾನ್ಯ ನೋಡುಗರಿಗೆ ಅದು ಗೊತ್ತಾಗೋದಿಲ್ಲ, ನಾವು ಅದನ್ನು ಹೇಳಿದರೂ ಅವರಿಗೆ ಅರ್ಥವಾಗುವುದಿಲ್ಲ ಎಂದರು.
ಆರಂಭದಲ್ಲಿ ಕನ್ನಡ ಸಾಹಿತ್ಯ ರಂಗದ ಚಟುವಟಿಕೆಯ ಕುರಿತು ಚುಟುಕಾಗಿ ಮಾಹಿತಿ ನೀಡಿದ ಅಧ್ಯಕ್ಷ ಮೈಸೂರು ನಟರಾಜ್‌ ಅವರು ಗಿರೀಶ್‌ ಕಾಸರವಳ್ಳಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ತ್ರಿವೇಣಿ ಶ್ರೀನಿ ವಾಸ್‌ ರಾವ್‌ ಅವರು ಸಂವಾದ ಕಾರ್ಯ ಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಅಮೆರಿಕ ಸಾಹಿತ್ಯ ರಂಗದ ವತಿಯಿಂದ ಅವರಿಗೆ ಧನ್ಯವಾದ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next