ಚಿತ್ರರಂಗಕ್ಕೆ ಹೊಸದಾಗಿ ಬರುವ ಸಿನಿಮಾ ಮಂದಿ ಪ್ರೇಕ್ಷಕರಿಗೆ ಹೊಸ ಬಗೆಯ ಸಿನಿಮಾ ನೀಡಲು ಪ್ರಯತ್ನಿಸುತ್ತಿದ್ದಾರೆ. ಅದೇ ಕಾರಣ ದಿಂದ ವಿಭಿನ್ನ ವಿಚಾರಗಳನ್ನು ಸಿನಿಮಾದಲ್ಲಿ ಅಳವಡಿಸಿ, ಹೊಸ ಬಗೆಯ ಸಿನಿಮಾ ನೀಡಲು ಮುಂದಾಗುತ್ತಿದ್ದಾರೆ.
“ಮಂಡಲ’ ಕೂಡಾ ಈ ಸಾಲಿಗೆ ಸೇರುವ ಸಿನಿಮಾ. ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳ ಸಂಖ್ಯೆ ಕಡಿಮೆ. ಅದರಲ್ಲೂ ಅನ್ಯಗ್ರಹ ಜೀವಿಗಳು, ಹಾರುವ ತಟ್ಟೆಗಳ ಕುರಿತಾದ ಸಿನಿಮಾಗಳು ಬಂದಿರೋದು ವಿರಳ. “ಮಂಡಲ’ದಲ್ಲಿ ಅಂತಹ ಒಂದು ಪ್ರಯತ್ನ ಮಾಡಲಾಗಿದೆ. ಕನ್ನಡಕ್ಕೆ ಇದು ಅಪರೂಪದ ಕಥೆ ಎಂದರೆ ತಪ್ಪಲ್ಲ. ಇಡೀ ಸಿನಿಮಾ ಬಾಹ್ಯಾಕಾಶ, ಎಲಿಯೆನ್ಸ್, ಮುಗ್ಧ ಜನರ ನಂಬಿಕೆ, ಅದರ ಹಿಂದಿನ ಲೆಕ್ಕಾಚಾರದ ಸುತ್ತವೇ ಸುತ್ತುತ್ತದೆ. ನಿರ್ದೇಶಕ ಅಜಯ್ ಸರ್ಪೇಷ್ಕರ್ ಸಿನಿಮಾದ ಕಥೆ ಬಿಟ್ಟು, ಅನಗತ್ಯ ಅಂಶಗಳನ್ನು ಸೇರಿಸಿಲ್ಲ. ಇಡೀ ಸಿನಿಮಾವನ್ನು ಚೌಕಟ್ಟಿನೊಳಗೆ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆ ತುಂಬಾ ಗಂಭೀರವಾದುದು. ಆದರೆ, ಈ ಗಂಭೀರ ಕಥೆಯ ನಡುವೆಯೇ ಕೆಲವು ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ತಲೆ ಎತ್ತಿ ಬಾಹ್ಯಾಕಾಶವನ್ನು ನೋಡು ಮತ್ತು ತಲೆ ಬಗ್ಗಿಸಿ ನಮ್ಮ ಮೂಲ ಸಂಸ್ಕೃತಿ ಹಿನ್ನೆಲೆಯ ಬಗ್ಗೆ ತಿಳಿದುಕೋ ಎಂಬ ಎರಡು ಅಂಶಗಳೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿರುವುದರಿಂದ ಒಂದಷ್ಟು ಕುತೂಹಲ ದೊಂದಿಗೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಹೆಚ್ಚು ಪಾತ್ರಗಳಿಲ್ಲ. ಇರುವ ಪ್ರತಿ ಪಾತ್ರಗಳಿಗೂ ಇಲ್ಲಿ ಪ್ರಾಮುಖ್ಯತೆ ಇದೆ. ಅದರಲ್ಲೂ ಅನಂತ್‌ನಾಗ್, ಕಿರಣ್ ಅವರ ಪಾತ್ರ ಗಮನ ಸೆಳೆಯುತ್ತದೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಹೊರನಾಡು, ಸುಧಾ ಬೆಳವಾಡಿ ನಟಿಸಿದ್ದಾರೆ.
-ರವಿ ರೈ