Advertisement

ಚಿತ್ರ ವಿಮರ್ಶೆ: ಪ್ರೀತಿ, ಸ್ನೇಹ, ರಾಬರಿ

01:15 PM Mar 11, 2023 | Team Udayavani |

ಬಾಲ್ಯದಿಂದಲೇ ಚುರುಕಿನ ಸ್ವಭಾವದ ಹುಡುಗನಾದ ಕೃಷ್ಣನ ತಂದೆ-ತಾಯಿ ತಾವು ಮಾಡಿರದ ರಾಬರಿ ಅಪವಾದದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಾರೆ. ತನ್ನ ಹೆತ್ತವರ ಸಾವಿನ ನಂತರ ಅವರ ಸಾವಿಗೆ ಕಾರಣವಾದ ರಾಬರಿಯನ್ನೇ ಕೃಷ್ಣ ವೃತ್ತಿಯನ್ನಾಗಿ ಮಾಡಿಕೊಂಡು ಬೆಳೆಯುತ್ತಾನೆ. ಹೀಗೆ ಚಿಕ್ಕವಯಸ್ಸಿನಲ್ಲಿಯೇ ರಾಬರಿ ಮಾಡಿಕೊಂಡು ಹಣದ ಹಿಂದೆ ಬೀಳುವ ಹುಡುಗನ ಭವಿಷ್ಯ ಮುಂದೇನಾಗುತ್ತದೆ ಎಂಬುದೇ, ಈ ವಾರ ತೆರೆಗೆ ಬಂದಿರುವ “1 ರಾಬರಿ ಕಥೆ’ ಸಿನಿಮಾದ ಕಥಾಹಂದರ.

Advertisement

ಸಿನಿಮಾದ ಹೆಸರೇ ಹೇಳುವ “1 ರಾಬರಿ ಕಥೆ’ ರಾಬರಿ ಕಥೆಯೊಂದರ ಸುತ್ತ ನಡೆಯುವ ಸಿನಿಮಾ. ರಾಬರಿ ಜೊತೆಗೆ ಒಂದು ಲವ್‌ಸ್ಟೋರಿ, ಅಲ್ಲಲ್ಲಿ ಕಾಮಿಡಿ, ರೊಮ್ಯಾಂಟಿಕ್‌ ದೃಶ್ಯಗಳು, ಡ್ಯುಯೆಟ್‌ ಹಾಡು, ಡ್ಯಾನ್ಸ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಹೀಗೆ ಮಾಸ್‌ ಸಿನಿಪ್ರಿಯರಿಗೆ ಇಷ್ಟವಾಗುವಂತಹ ಒಂದಷ್ಟು ಅಂಶಗಳನ್ನು ಚಿತ್ರಕಥೆಯಲ್ಲಿ ಸೇರಿಸಿ “1 ರಾಬರಿ ಕಥೆ’ಯನ್ನು ತೆರೆಗೆ ತರಲಾಗಿದೆ.

ಸಿನಿಮಾದ ಕಥೆಯ ಎಳೆ ಚೆನ್ನಾಗಿದ್ದರೂ, ಚಿತ್ರಕಥೆಗೆ ಕೊಂಚ ವೇಗ ನೀಡಿ, ನಿರೂಪಣೆ ಮತ್ತು ಸಂಭಾಷಣೆಯ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ನೀಡಿದ್ದರೆ, “1 ರಾಬರಿ ಕಥೆ’ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮನಮುಟ್ಟುವ ಸಾಧ್ಯತೆಗಳಿದ್ದವು.

ನಟ ರಣಧೀರ್‌ ಗೌಡ “1 ರಾಬರಿ ಕಥೆ’ ಸಿನಿಮಾದಲ್ಲಿ ನಾಯಕನಾಗಿ ಮಾಸ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನವ ನಟಿ

ರಿಷ್ವಿ ಭಟ್‌ ನಾಯಕಿಯಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಹಿರಿಯ ನಟ ಸುಂದರ ರಾಜ್‌, ಕರಿಸುಬ್ಬು, ತಬಲ ನಾಣಿ, ಜಹಾಂಗೀರ್‌, ಶಿವರಾಜ್‌ ಕೆ. ಆರ್‌. ಪೇಟೆ, ಸಂಪತ್‌ ಮೈತ್ರೇಯ, ಗಿರೀಶ್‌ ಶಿವಣ್ಣ, ಮೂಗು ಸುರೇಶ, ಎಂ. ಕೆ ಮಠ, ನವೀನ್‌ ಪಡೀಲ್‌ ಹೀಗೆ ಬೃಹತ್‌ ಕಲಾವಿದರ ತಾರಾಗಣವೇ ಸಿನಿಮಾದಲ್ಲಿದೆ.

Advertisement

ಇನ್ನು ಸಿನಿಮಾದ ಒಂದೆರಡು ಹಾಡುಗಳು ಗುನುಗುವಂತಿದ್ದು, ಚಿತ್ರದ ಛಾಯಾಗ್ರಹಣ ದೃಶ್ಯಗಳನ್ನು ಅಂದವಾಗಿಸಿದೆ. ಕೆಲ ಲೋಪಗಳನ್ನು ಬದಿಗಿಟ್ಟು ಹೇಳುವುದಾದರೆ, “1 ರಾಬರಿ ಕಥೆ’ ಒಮ್ಮೆ ನೋಡಿ ಹೊಸಬರ ಪ್ರಯತ್ನಕ್ಕೆ ಬೆನ್ನುತಟ್ಟಬಹುದಾದ ಸಿನಿಮಾ ಎನ್ನಬಹುದು.

-ಜಿಎಸ್‌ಕೆ

Advertisement

Udayavani is now on Telegram. Click here to join our channel and stay updated with the latest news.

Next