ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಆರಾಧ್ಯ ದೇವ ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಜೀವನ ಚರಿತ್ರೆ ಆಧಾರಿತ ಲಚ್ಯಾಣ ಸಿದ್ದಲಿಂಗ ಮಹಾರಾಜ ಕನ್ನಡ ಚಲನಚಿತ್ರ ಡಿ. 31ರಂದು ಪಟ್ಟಣದ ಶ್ರೀನಿವಾಸ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಲನಚಿತ್ರ ನಿರ್ಮಾಪಕರಾದ ಮಲ್ಲೇಶಿ ಮುಜಗೊಂಡ, ವಿ.ಎಂ. ಕರಾಳೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರ ಬಿಡುಗಡೆ ಸಮಾರಂಭದಲ್ಲಿ ಲಚ್ಯಾಣ ಹಾಗೂ ಬಂಥನಾಳದ ಪೀಠಾಧಿಪತಿಗಳಾದ ಡಾ| ವೃಷಭಲಿಂಗ ಮಹಾಶಿವಯೋಗಿಗಳು, ಹಳಿಂಗಳಿಯ ಕಮರಿಮಠದ ಶಿವಾನಂದ ಸ್ವಾಮೀಜಿ, ಶಾಸಕ ಯಶವಂತರಾಯಗೌಡ ಪಾಟೀಲ, ಬಿಜೆಪಿ ಧುರೀಣರಾದ ಕಾಸುಗೌಡ ಬಿರಾದಾರ ಪಾಲ್ಗೊಳ್ಳಲಿದ್ದಾರೆ ಎಂದರು.
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಚಿತ್ರಕ್ಕೆ ನಟ ಶ್ರೀಧರ ನಾಯಕ ನಟನಾಗಿ ಮತ್ತು ಕಾವ್ಯ ಅಭಿನಯಿಸಿದ್ದಾರೆ. ಲಚ್ಯಾಣ, ಕಕ್ಕಳಮೇಲಿ, ಶ್ರೀಶೈಲದ ಕಮರಿಮಠ, ಕನ್ನೊಳ್ಳಿ ಸಾಹುಕಾರರ ಮನೆ, ಜಿಗಜಿವಣಗಿಯ ಕೌದೆಪ್ಪ ಮಹಾರಾಜರ ಮಠದಲ್ಲಿ, ಮಹಾರಾಷ್ಟ್ರ ಅಕ್ಕಲಕೋಟದ ಶ್ಯಾವಳ, ಪಂಢರಪುರ ದಲ್ಲಿ ಚಿತ್ರೀಕರಿಸಲಾಗಿದೆ. ಹಳಂಗಳಿಯ ಕಮರಿ ಮಠದ ಶಿವಾನಂದ ಶ್ರೀಗಳು ರಚಿಸಿದ ಗ್ರಂಥವನ್ನು ಆಧರಿಸಿ, ಶಂಕರ ಪಾಟೀಲ ಹಾಗೂ ಸಿ.ಜಿ. ವೆಂಕಟರಾವ್ ನಿರ್ದೇಶನದಲ್ಲಿ ಚಿತ್ರ ನಿರ್ಮಾಣಗೊಂಡಿದೆ ಎಂದರು.
ಎ.ಪಿ. ಕಾಗವಾಡಕರ, ವಿನೋದ ಮುಜಗೊಂಡ, ವಿಶ್ವನಾಥ ಪೋಲಾಶಿ, ಮಲ್ಲಿಕಾರ್ಜುನ ಹೂಗಾರ ಮತ್ತಿತರರಿದ್ದರು.