ಬೆಂಗಳೂರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶ್ವದ ಅತಿ ದೊಡ್ಡ ವಾರ್ಷಿಕ ಕೇಕ್ ಪ್ರದರ್ಶನ ನಗರದ ವಿಠuಲಮಲ್ಯ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಡಿ.15ರಿಂದ (ಇಂದು) ಆರಂಭವಾಗಲಿದ್ದು, ಜ.1ರವರೆಗೆ ನಡೆಯಲಿದೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಪ್ರತಿಕೃತಿ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಸಿ.ರಾಮಚಂದ್ರನ್‌ರ ನೇತೃತ್ವದಲ್ಲಿ 75 ದಿನಗಳಿಂದ 6 ಮಂದಿ ತರಬೇತುದಾರರು, 17 ಮಂದಿ ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ ವಿದ್ಯಾರ್ಥಿಗಳು ಸೇರಿದಂತೆ 40 ಮಂದಿ 23ಕ್ಕೂ ಹೆಚ್ಚು ಪ್ರತಿಕೃತಿಗಳನ್ನು ಕೇಕ್‌ನಲ್ಲಿ ನಿರ್ಮಿಸಿದ್ದಾರೆ.
ಗೇಟ್ ವೇ ಆಫ್ ಇಂಡಿಯಾ: ಸುಮಾರು 15 ಅಡಿ ಉದ್ದ, 5 ಅಡಿ ಅಗಲ ಹಾಗೂ 11 ಅಡಿ ಎತ್ತರದ ಗೇಟ್ ವೇ ಆಫ್ ಇಂಡಿಯಾ ಪ್ರತಿಕೃತಿ ಕೇಕ್ ತೂಕ ಬರೋಬರಿ 1200 ಸಾವಿರ ಕೆ.ಜಿ. ಕಳೆದ 75 ದಿನಗಳಿಂದ ಏಳು ಮಂದಿ ಕೇಕ್ ಆರ್ಟಿಸ್ಟ್‌ಗಳು ಶುಗರ್ ಬ್ರಿಕ್ಸ್, ಶುಗರ್ ಪೇಸ್ಟ್ ಬಳಸಿಕೊಂಡು ಈ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ.
ಪ್ರಮುಖ ಆಕರ್ಷಣೆ: ನೈರುತ್ಯ ಚೀನಾದ ಬ್ಯಾಬೋ ಕಾಡಿನಲ್ಲಿ ವಾಸಿಸುವ ಪಾಂಡಾ ಕುಟುಂಬ(8 ಅಡಿ ಉದ್ದ, 6 ಅಡಿ ಅಗಲ, 5 ಅಡಿ ಎತ್ತರ), ಧ್ಯಾನ ಸ್ಥಿತಿಯಲ್ಲಿ ಕುಳಿತಿರುವ ಬುದ್ಧ (87 ಕೆಜಿ), ಫೇರಿಟೆಲ್ ವೆಡ್ಡಿಂಗ್ ಕಾಸ್ಟಲ್ (50 ಕೆಜಿ), ಮತ್ಸéಕನ್ಯೆ (65 ಕೆಜಿ), ಫೊಜನ್(66 ಕೆಜಿ), ಫುಟ್‌ಬಾಲ್ ಕ್ರೀಡೆಯ ಕೇಕ್ (85 ಕೆಜಿ), ಆ್ಯಂಗ್ರಿಬರ್ಡ್(56 ಕೆಜಿ), ಗೂಳಿ ಮತ್ತು ಕರಡಿ (75 ಕೆಜಿ), ಐಫೆಲ್ ಟವರ್ ವೆಡ್ಡಿಂಗ್ ಕೇಕ್(45 ಕೆಜಿ), ಮರ್ಡಿಗ್ರಾಸ್ (65 ಕೆಜಿ),
ಕ್ರಿಸ್‌ಮಸ್ ಸಂತಸ ನೆನಪಿಸುವ ಜಾಯ್(42), ಕೌನ್ ಆ್ಯಂಡ್ ಸರ್ಕಸ್(51 ಕೆಜಿ), ವೇಫರ್ ಥೀಮ್ ವೆಡ್ಡಿಂಗ್ ಕೇಕ್(58 ಕೆಜಿ), ಟೀ ಪಾಟ್(28 ಕೆಜಿ), ಸ್ಕೂಟರ್(50 ಕೆಜಿ), ವಿವಾಹ ಸಂದರ್ಭದಲ್ಲಿ ವಧುವನ್ನು ಹೊತ್ತೂಯ್ಯುವ ಡೋಲಿ(145 ಕೆಜಿ), ಮ್ಯೂಸಿಕಲ್ ಥೀಮ್(110 ಕೆಜಿ), ಸೆಲ್ಫಿ (68 ಕೆಜಿ), ಡೈನೋಸರ್ ಕೇಕ್(60 ಕೆಜಿ), ದರ್ಪಣ ಸುಂದರಿ, ಈ ಬಾರಿ ಜನರನ್ನು ಸೆಳೆಯಲಿವೆ ಎಂದು ಮನೀಷ್‌ಗೌರ್ ತಿಳಿಸಿದರು.
ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್‌ನ ತರಬೇತುದಾರರು ಮತ್ತು ವಿದ್ಯಾರ್ಥಿಗಳು ಕೇಕ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಮೊಟ್ಟೆ, ಸಕ್ಕರೆ, ಜೋಳದ ಹಿಟ್ಟು, ರೈಸ್ ಕ್ರಿಸ್ಪಿ, ರಾಯಲ್ ಐಸ್, ಗಮ್‌ಪೇಸ್ ಇತ್ಯಾದಿಗಳನ್ನು ಬಳಸಿಕೊಂಡು ಪ್ರದರ್ಶನಕ್ಕೆ ವಿವಿಧ ವಿನ್ಯಾಸದ ಕೇಕ್‌ಗಳನ್ನು ತಯಾರಿಸಲಾಗಿದೆ ರಾಷ್ಟ್ರೀಯ ಗ್ರಾಹಕರ ಮೇಳದ ನಿರ್ದೇಶಕ ಗೌತಮ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೇಕ್ ಪ್ರದರ್ಶನ ಮೇಳದಲ್ಲಿ ಸುಮಾರು 150 ಮಳಿಗೆಗಳನ್ನು ತೆರಯಲಾಗಿದ್ದು, ಆಹಾರ ಪದಾರ್ಥ ಮತ್ತು ಇತರೆ ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಪ್ರದರ್ಶನ ವೀಕ್ಷಿಸಲು ಮೂರು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ಉಳಿದವರಿಗೆ ತಲಾ 60 ರೂ.ನಿಗದಿಪಡಿಸಲಾಗಿದೆ.
ಕ್ರಿಸ್‌ಮಸ್ ಮತ್ತು ಹೊಸವರ್ಷದ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ 43ನೇ ಪ್ರದರ್ಶನ ಇದಾಗಿದ್ದು, ಕಳೆದ ವರ್ಷ ಪ್ರದರ್ಶನಕ್ಕೆ 75 ಸಾವಿರ ಮಂದಿ ಭೇಟಿ ನೀಡಿದ್ದರು. ಈ ಬಾರಿ 80 ಸಾವಿರ ಮಂದಿ ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
-ಗೌತಮ್, ನಿರ್ದೇಶಕ, ರಾಷ್ಟ್ರೀಯ ಗ್ರಾಹಕರ ಮೇಳ