Advertisement

ಉಡುಪಿಯ ಸುಮಲತಾಗೆ ಹಿಮಾಲಯ ಏರುವುದು ಸುಲಲಿತ!

08:35 AM Sep 15, 2021 | Team Udayavani |

ಕಾರ್ಕಳ: ಸಣ್ಣ ಹಳ್ಳಿಯ ಕೂಲಿ ಕಾರ್ಮಿಕ ಹಿನ್ನೆಲೆಯಿಂದ ಬಂದ ಹುಡುಗಿ ದೂರದ ಹಿಮಾಲಯ ಪರ್ವತವನ್ನು ಅದರಲ್ಲೂ 3ನೇ ಬಾರಿ ಏರುತ್ತಿದ್ದಾರೆ. ಸಾಹಸ ಪ್ರವೃತ್ತಿಯುಳ್ಳ ಬಜಗೋಳಿಯ ಸುಮಲತಾ ಅವರೇ ಈ ಸಾಧಕಿ.

Advertisement

ಸುಮಲತಾ 2 ಬಾರಿ ಹಿಮಾಲಯ ಪರ್ವತಾರೋಹಣ ನಡೆಸಿದ್ದು, 3ನೇ ಬಾರಿ ಸೆ. 13ರಂದು ತೆರಳಿದ್ದಾರೆ.

ಸೆ. 14ರಿಂದ 29ರ ತನಕ ನಡೆಯುವ ಪರ್ವತಾರೋಹಣ ಶಿಬಿರಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಆಯ್ಕೆಗೊಂಡ ಏಕೈಕ ಮಹಿಳಾ ಪ್ರತಿನಿಧಿ ಇವರು.

ಕಾರ್ಕಳ ತಾಲೂಕು ಮಾಳ ಗ್ರಾಮದ ಮಂಜಲ್ತಾರಿನ ಬಾಬು ಮತ್ತು ಬಿಟ್ಟು ದಂಪತಿಯ ಪುತ್ರಿ ಸುಮಲತಾ. ಬಡತನದಲ್ಲೇ ಬೆಳೆದವರು. ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಬಜಗೋಳಿ ಪ.ಪೂ. ಕಾಲೇಜಿನಲ್ಲಿ  ಪೂರೈಸಿ ಪದವಿಯನ್ನು ಉಡುಪಿಯ ಅಜ್ಜರಕಾಡಿನ ಡಾ| ಜಿ. ಶಂಕರ್‌ ಮಹಿಳಾ ಕಾಲೇಜಿನಲ್ಲಿ ಪಡೆದು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಲ್ಲಿ  ವ್ಯಾಸಂಗ ಮುಗಿಸಿ ಈಗ ವಾರ್ತಾ ಇಲಾಖೆಯಲ್ಲಿ ಅಪ್ರಂಟಿಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚಾರಣದ ಹವ್ಯಾಸವಿಲ್ಲದಿದ್ದರೂ ಹಳ್ಳಿಯಲ್ಲಿ ಬೆಳೆದ ಸುಮಲತಾ ಶ್ರಮಜೀವಿಯಾಗಿದ್ದರು. ಶಾಲಾ ಹಂತದಲ್ಲಿ  ಕ್ರೀಡೆಗಳಲ್ಲಿ  ತೊಡಗಿಸಿಕೊಂಡು ಕ್ರೀಯಾಶೀಲರಾಗಿದ್ದರು. ಉಡುಪಿಯಲ್ಲಿ  ಕಲಿಯುತ್ತಿದ್ದಾಗ  ನಿಲಯದ ಮೇಲ್ವಿಚಾರಕಿ ಸುಚಿತ್ರಾ ಸುವರ್ಣ ಇವರಲ್ಲಿನ  ಚಟುವಟಿಕೆ  ಗಮನಿಸಿ  ಪರ್ವತಾರೋಹಣ ಶಿಬಿರದ ಕುರಿತು ಮಾಹಿತಿ ನೀಡಿದರು. ಆ ಮೂಲಕ ಇವರ ಹಿಮಾಲಯ ಯಾತ್ರೆ ಆರಂಭಗೊಂಡಿತ್ತು.

Advertisement

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ 2017ನೇ ಸಾಲಿನಲ್ಲಿ ನಡೆಸಿದ ಪರ್ವತಾರೋಹಣದಲ್ಲಿ ಹಿಮಾಲಯವನ್ನು 14,800 ಅಡಿ ಎತ್ತರ ಏರಿದ್ದರು. 2019ರಲ್ಲಿ 2ನೇ ಬಾರಿ 11,500 ಅಡಿ ಎತ್ತರದವರೆಗೆ ಆರೋಹಣ ಮಾಡಿದ್ದರು. 3ನೇ ಪರ್ವತಾರೋಹಣ ಶಿಬಿರ 16 ದಿನಗಳ ಕಾಲ ಇರಲಿದೆ.  10 ಮಂದಿ ಮಹಿಳೆಯರು, 20 ಮಂದಿ ಪುರುಷರನ್ನೊಳಗೊಂಡ 30 ಮಂದಿಯ ತಂಡ ಇದಾಗಿದೆ.

ಕಳೆದ ಬಾರಿ ಪೆರ್ಡೂರಿನ ಯುವತಿಯೋರ್ವಳು ಆಯ್ಕೆಯಾಗಿದ್ದರು.  ಈ ಬಾರಿ ಅವಿಭಜಿತ ಜಿಲ್ಲೆಯಿಂದ ಒಬ್ಬರೇ ಆಯ್ಕೆಯಾಗಿದ್ದಾರೆ. ಪರ್ವತಾರೋಹಣದ ವೇಳೆ ಹಲವು ಅಧ್ಯಯನ, ಚಟುವಟಿಕೆಗಳಿರುತ್ತವೆ.

ಹೆತ್ತವರ ಸಂತಸ:

ಮಗಳ  ಸಾಹಸಗಾಥೆ ಬಗ್ಗೆ ಹೆತ್ತವರಲ್ಲಿ ಸಂತಸವಿದೆ.   ಅವಳಿನ್ನೂ ದೊಡ್ಡ ಮಟ್ಟದ ಸಾಧನೆ ಮಾಡುವಂತಾಗಬೇಕು ಎಂದು ಹೆತ್ತವರು ಮಗಳ ಸಾಧನೆ ಕುರಿತು ಸಂತಸ ಹಂಚಿಕೊಂಡರು.

2017ರಲ್ಲಿ ಮೊದಲ ಬಾರಿಗೆ ಹಿಮಾಲಯ ಏರಿದಾಗ ಮನಾಲಿ ಬಕ್ಕಾರ್‌ತಾಜ್‌ ಎಂಬಲ್ಲಿಗೆ ತೆರಳಿದ್ದೆವು. 2019ರಲ್ಲಿ ಎರಡನೆ ಬಾರಿಗೆ ಜಮ್ಮುಕಾಶ್ಮೀರದ ಸೇನಾ ಮಾರ್ಗದ ತಾಜಿಯಾ ವಾಸ್‌ ಸಂದರ್ಶಿಸಿದ್ದೆವು. ಇವೆಲ್ಲವೂ ಅತ್ಯಧಿಕ ಹಿಮಪಾತವಾಗುವ ಪ್ರದೇಶಗಳಾಗಿವೆ. ಮೂರನೇ ಬಾರಿಗೆ ಜಮ್ಮು ಕಾಶ್ಮೀರದ ಪಹಲ್ಗಮ್‌ ಪರ್ವತ, ಗ್ಲೆàಸಿಯರ್‌ಗೆ ತೆರಳಲಿದ್ದೇವೆ. ತೆರಳಲಿರುವ ಜಾಗ ಇನ್ನಿತರ ಮಾಹಿತಿಗಳನ್ನು ತಂಡದ ಮುಖ್ಯಸ್ಥರು ಶಿಬಿರದಲ್ಲಿ ನೀಡುತ್ತಾರೆ ಎಂದು ಸುಮಲತಾ ಮಾಹಿತಿ ನೀಡಿದ್ದಾರೆ.

ಹಿಮಾಲಯವನ್ನು ನೋಡುತ್ತೇನೆ ಎನ್ನುವ ಕಲ್ಪನೆಯೂ ಬಾಲ್ಯದಲ್ಲಿ ನನಗಿರಲಿಲ್ಲ, ಪುಟ್ಟ ಹಳ್ಳಿಯಿಂದ ಹಿಮಾಲಯದವರೆಗಿನ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ನನಗೆ ಒದಗಿ ಬಂದಿರುವುದು ಖುಷಿ ನೀಡಿದೆ. ಇದಕ್ಕೆ ನಿಲಯದ ಮೇಲ್ವಿಚಾರಕರು, ಶಿಕ್ಷಕರ ಪ್ರೋತ್ಸಾಹ ಕಾರಣ. ಧೈರ್ಯ, ಶ್ರದ್ಧೆ, ಆತ್ಮವಿಶ್ವಾಸವೇ ನನ್ನನ್ನು ಪರ್ವತರೋಹಣಕ್ಕೆ  ತೆರಳುವಂತೆ ಮಾಡಿದೆ.– ಸುಮಲತಾ ಬಜಗೋಳಿ, ಪರ್ವತಾರೋಹಿ

 -ಬಾಲಕೃಷ್ಣ  ಭೀಮಗುಳಿ

 

Advertisement

Udayavani is now on Telegram. Click here to join our channel and stay updated with the latest news.

Next