Advertisement

“ಬೆಟ್ಟದ ಜೀವ’ಸಿನೆಮಾ ಪ್ರದರ್ಶನ; ಮುಖಾಮುಖೀ

06:45 AM Aug 03, 2017 | |

ಬಂಟ್ವಾಳ: ಜೀವನಾನುಭವ ದಿಂದ ರಚಿತವಾದ ಸಾಹಿತ್ಯ ಕೃತಿಗಳು ಶಾಶ್ವತವಾಗಿ ನೆಲೆ ನಿಲ್ಲುತ್ತವೆ. ನಾವು ಬದುಕುವ   ಪರಿಸರ, ಸಂಸ್ಕೃತಿ, ಸಮಾಜ, ಜೀವ ವೈವಿಧ್ಯಗಳ ಕುರಿತು ಕಾಳಜಿ ಹುಟ್ಟಿಸುವ ಸಾಹಿತ್ಯವು ಮೂಡಿಬರಬೇಕಾಗಿದೆ.ಡಾ| ಕೆ.ಶಿವರಾಮ ಕಾರಂತರು ತಮ್ಮ ಬದುಕು-ಬರವಣಿಗೆ ಎರಡರಲ್ಲೂ ತಮ್ಮ ಸುತ್ತಣ ಪರಿಸರಕ್ಕೆ ಪ್ರತಿಸ್ಪಂದಿಸುತ್ತ ಬಂದವರು ಎಂದು ಸಿದ್ಧಕಟ್ಟೆ ಸರಕಾರಿ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ಸಂಜಯ್‌ ಬಿ.ಎಸ್‌. ಅಭಿಪ್ರಾಯಪಟ್ಟರು.

Advertisement

ಅವರು ಆ. 1ರಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪ.ಪೂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯಿಂದ ಆಯೋಜಿಸಿದ್ದ ಡಾ| ಕೆ.ಶಿವರಾಮ ಕಾರಂತರ “ಬೆಟ್ಟದ ಜೀವ’ ಸಿನೆಮಾ ಪ್ರದರ್ಶನ ಮತ್ತು ಮುಖಾಮುಖೀ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರಂತರು ನಿರಂತರ ಅನ್ವೇಷಣೆಯ ಮೂಲಕ  ಬದುಕಿನ ವಿವಿಧ ಆಯಾಮಗಳ ನಿಜಾರ್ಥವನ್ನು ಶೋಧಿಸಿದವರು. ಹಾಗಾಗಿಯೇ ಕಾರಂತರ ಸಾಹಿತ್ಯ ಕೃತಿಗಳು ಎಲ್ಲ ಕಾಲಕ್ಕೂ ಸಲ್ಲುವ ಶಾಶ್ವತ ಮೌಲ್ಯವನ್ನು ಪ್ರತಿನಿಧಿಸುತ್ತವೆ.  ನಿಸರ್ಗ ಜತೆಗಿನ ತೀವ್ರ ಒಡನಾಟ, ಸಂಘರ್ಷದಲ್ಲೇ “ಬೆಟ್ಟದ ಜೀವ’ ಕಾದಂಬರಿ ಅರಳಿದೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ,  ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆ ಯಾಗುತ್ತಿರುವುದು ಶೋಚನೀಯ ಸಂಗತಿ. ಬದುಕು ಅರಳಿಸುವ ಕೃತಿಗಳನ್ನು ಓದುವುದು ವರ್ತಮಾನದ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮ ಸಂಯೋಜಕ ಎನ್ನೆಸೆಸ್‌ ಯೋಜನಾಧಿಕಾರಿ ಚೇತನ್‌ ಮುಂಡಾಜೆ  ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಯೋಜನಾಧಿಕಾರಿಗಳಾದ ಪ್ರದೀಪ್‌ ಪೂಜಾರಿ, ಶಿವಪ್ರಸಾದ್‌ ನೀರಚಿಲುಮೆ, ವಿಜೇತಾ, ಕವಿತಾ, ದಿವ್ಯಲಕ್ಷ್ಮೀ  ಮತ್ತಿತರರು ಉಪಸ್ಥಿತರಿದ್ದರು. ಎನ್ನೆಸ್ಸೆಸ್‌  ಘಟಕ ನಾಯಕ ಭರತ್‌ ಸ್ವಾಗತಿಸಿ, ಘಟಕ ನಾಯಕಿ ಅನುಜ್ಞಾ  ವಂದಿಸಿದರು. ಸ್ವಯಂಸೇವಕಿ ಗೌತಮಿ ಕಾರ್ಯಕ್ರಮ ನಿರೂಪಿಸಿದರು. ಪಿ.ಶೇಷಾದ್ರಿ ನಿರ್ದೇಶನದ “ಬೆಟ್ಟದ ಜೀವ’ ಸಿನೆಮಾ ಪ್ರದರ್ಶನ, ಸಂವಾದ ಜರಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next