Advertisement

ಗಟ್ಟಿ ಸಾಹಿತ್ಯ ಸಮಾಜಕ್ಕೆ ಪ್ರೇರಕ: ಡಾ|ನಾಗಶೆಟ್ಟಿ

05:50 PM Oct 10, 2022 | Team Udayavani |

ಬೀದರ: ಕಾವ್ಯವೆಂದರೆ ಕೇವಲ ಕಲ್ಪನೆಯ ಭಾವಗಳಿದ್ದರಷ್ಟೆ ಸಾಲದು, ನಿಸರ್ಗದ ಸೌಂದರ್ಯವನ್ನು ನೋಡಿ ಆನಂದಿಸುವ ಗುಣವಿರಬೇಕು ಎಂದು ಸಾಹಿತಿ ಡಾ| ನಾಗಶೆಟ್ಟಿ ಪಾಟೀಲ ಗಾದಗಿ ಹೇಳಿದರು.

Advertisement

ನಗರದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ “ಅಂತರಾಳದ ಭಾವಗಳು’ ಕೃತಿಯ ಅವಲೋಕನ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಸ್ತವದ ಪ್ರಜ್ಞೆಯೊಂದಿಗೆ, ಸಮಾಜದ ಅಂಕುಡೊಂಕಗಳ ಬಗ್ಗೆಯೂ ತನ್ನ ಬರಹಗಳ ಮೂಲಕ ಸಮಾಜಮುಖಿಯಾದ ಚಿಂತನೆಗಳನ್ನು ಬಿತ್ತರಿಸುವ ಮನೋಭಾವನೆ, ಸೂಕ್ಷ್ಮಸಂವೇದನೆ ಯಾವ ಕವಿಗಿರುತ್ತದೆಯೋ ಅಂತಹ ಕವಿ ಸದಾಕಾಲ ಜನಮಾನಸದಲ್ಲಿ ಉಳಿಯುತ್ತಾನೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಉತ್ತಮ ಕವಿತೆಗಳು ಒಳಗೊಂಡಿವೆ.

ಅಂತಹ ಗಟ್ಟಿ ಸಾಹಿತ್ಯವೇ ಸಮಾಜಕ್ಕೆ ಪ್ರೇರಕವಾಗುತ್ತವೆ. ಅಂತಹ ಸಾಹಿತ್ಯ ಡಾ| ಶರಣಪ್ಪ ಮಲಗೊಂಡ ರಚಿತ ಈ ಪುಸ್ತಕದಲ್ಲಿ ಕಾಣುತ್ತೇವೆ ಎಂದರು. ಹಿರಿಯ ಸಾಹಿತಿ ಡಾ| ಎಂ.ಜಿ. ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಾಲನ್ನು ಚೆನ್ನಾಗಿ ಕಾಯಿಸಿದಾಗ ಬರುವ ಹಾಲಿನೆ ಮೇಲಿನ ಕೆನೆಯಂತೆ ನಮ್ಮ ಸಾಹಿತ್ಯ ರಚನೆಯಾಗಬೇಕು. ಹಾಗಾದಾಗ ಒಂದು ಉತ್ತಮವಾದ ಗಟ್ಟಿ ಸಾಹಿತ್ಯ ಹೊರಬರುತ್ತದೆ ಎಂದರು.

ಕಾವ್ಯವು ಹೇಗಿರಬೇಕೆಂದರೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಅಧ್ಯಾಯನದ ಹಿನ್ನೆಲೆಯುಳ್ಳ ಸಾಹಿತ್ಯಕ್ಕೆ ಮಾತ್ರ ಗಟ್ಟಿ ನೆಲೆಯಿದೆ. ಅಂತಹ ಸಾಹಿತ್ಯ ರಚನೆಯಾಗಬೇಕು ಎಂದು ಹೇಳಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ| ಶಿವಕುಮಾರ ಕಟ್ಟೆ ಮಾತನಾಡಿ, ಸೃಜನಶೀಲತೆಯ ಭಾವಗಳು ಪುನರಾವರ್ತನೆಯಾಗದಂತೆ ಕವಿಗಳು ಎಚ್ಚರ ವಹಿಸಬೇಕು. ಓದುಗರ ಭಾವನೆಗೆ ಸ್ಪಂದಿಸುವ ಕಾವ್ಯ ರಚನೆಯಾಗಬೇಕು ಎಂದರು.

ವೇದಿಕೆಯ ಗೌರವಾಧ್ಯಕ್ಷ ಡಾ| ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಉದಯೋನ್ಮುಖ ಹಾಗೂ ಪ್ರತಿಭಾವಂತ ಬರಹಗಾರರಿದ್ದಾರೆ. ಆದರೆ ಅವರಿಗೆ ಸೂಕ್ತವಾದ ವೇದಿಕೆಯ ಕೊರತೆಯಿದ್ದು, ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿವಿಧ ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸಿ ಗಟ್ಟಿ ಸಾಹಿತ್ಯ ಹೊರಬರುವಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

Advertisement

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಶಿವಕುಮಾರ ಉಪ್ಪೆ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಷ್ಣುಕಾಂತ ಠಾಕೂರ ಹಾಗೂ ದಾಸ
ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ರವೀಂದ್ರ ಲಂಜವಾಡಕರ್‌ ಮತ್ತು ಲೇಖಕ ಡಾ| ಶರಣಪ್ಪ ಮಲಗೊಂಡ ಮಾತನಾಡಿದರು. ವೇದಿಕೆ ಅಧ್ಯಕ್ಷ ಡಾ| ಶಾಮರಾವ್‌ ನೆಲವಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಕವಿಗಳಾದ ಜಗದೀಶ ಬಿರಾದಾರ, ಕೀರ್ತಿಲತಾ ಹೊಸಾಳೆ, ಬುದ್ಧದೇವಿ ಸಂಗಮ, ಉಮಾಕಾಂತ ಮೀಸೆ, ಡಾ| ಗೌತಮ ಸಂಗಣ್ಣೋರ, ಮುರಳಿನಾಥ ಮೇತ್ರೆ, ಅಶೋಕ ಶಿಂಧೆ, ಸ್ವರೂಪರಾಣಿ ನಾಗೂರೆ, ಡಾ| ಸುಜಾತಾ ಹೊಸಮನಿ, ಅವಿನಾಶ ಸೋನೆ, ಮಂಗಲಾ ಪೋಳ್‌, ಸರೀತಾ ಹುಡಗಿಕರ್‌, ಎಚ್‌.ಬಿ. ಪ್ರಿಯಾಂಕಾ, ರವಿದಾಸ ಕಾಂಬಳೆ, ಪೂಜಾ ಪಟೆ°, ಅನಿಲ, ವಕೀಲ ಪಟೇಲ, ಲಕ್ಷ್ಮಣರಾವ್‌ ಕಾಂಚೆ ಸ್ವರಚಿತ ಕವನ ವಾಚಿಸಿದರು. ಅರ್ಜುನಸಿಂಗ್‌ ಪಾಟೀಲ ಸ್ವಾಗತಿಸಿದರು. ಆತ್ಮನಂದ ಬಂಬುಳಗಿ ನಿರೂಪಿಸಿದರು. ಸೂರ್ಯಕಾಂತ ನಿರ್ಣಾಕರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next