Advertisement

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

01:16 PM Dec 16, 2024 | ಸುಹಾನ್ ಶೇಕ್ |

ಇತ್ತೀಚೆಗಿನ ವರ್ಷದಲ್ಲಿ ಸೋಶಿಯಲ್‌ ಮೀಡಿಯಾ ಇದ್ದವರು ಪ್ರತಿಯೊಬ್ಬರು ಕಂಟೆಂಟ್‌ ಕ್ರಿಯೇಟ್‌ಗಳಾಗಿದ್ದಾರೆ. ರೀಲ್ಸ್‌, ಶಾರ್ಟ್ಸ್‌ಗಳಿಂದ ಖ್ಯಾತಿ ರಾತ್ರಿ ಬೆಳಗ್ಗೆ ಆಗುವುದರೊಳಗೆ ಜನಪ್ರಿಯರಾಗಿ ವೈರಲ್‌ ಸ್ಟಾರ್‌ಗಳಾಗುವವರು  ದಿನನಿತ್ಯ ಕಾಣ ಸಿಗುತ್ತಾರೆ.

Advertisement

ವಿಭಿನ್ನ ಮಾತು, ನಟನೆ, ಹುಚ್ಚಾಟದ ಸಾಹಸ, ಮಾತೇ ಬಾರದೆ ಬರೇ ಕಣ್ಣಿನಲ್ಲೇ ನೋಟ ಬೀರುವ ಕಂಟೆಂಟ್‌ ಕ್ರಿಯೇಟರ್‌ಗಳಿದ್ದಾರೆ. ಟಿಕ್‌ ಟಾಕ್‌ ಬ್ಯಾನ್‌ ಬಳಿಕ ಭಾರತದಲ್ಲಿ ರೀಲ್ಸ್‌ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಏನು ಹೇಳಬೇಕೋ ಅದನ್ನು ಬರೀ ನಿಮಿಷದಲ್ಲಿ ಹೇಳಿ ಮುಗಿಸುವ ಕಂಟೆಂಟ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಸಿಗುತ್ತದೆ.

“ನೀನು ಬೇರೆಯವರ ಯಶಸ್ಸು ನೋಡಿ ಅಳಬೇಡ, ಶ್ರಮಪಟ್ಟರೆ ನಿನ್ನ ಯಶಸ್ಸು ನೋಡಿ ಪ್ರಚಂಚವೇ ಸಂಭ್ರಮಿಸುತ್ತದೆ”.. ಸೂಟ್‌ – ಬೂಟ್‌ ಹಾಕಿಕೊಂಡು ಕೂದಲು ಕ್ರಾಪ್‌ ಮಾಡಿಕೊಂಡು ಇಂತಹ ಸ್ಪೂರ್ತಿದಾಯಕ ಮಾತುಗಳನ್ನು ಹೇಳುವ ಬಾಲಕ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿರುವ ವೈರಲ್‌ ಫೇಸ್.

ಈ ಬಾಲಕ ಯಾರು ಮತ್ತು ಈತ ಈ ರೀತಿ ಮಾತುಗಳನ್ನು ಆಡಲು ಕಲಿಸಿದ್ದು ಯಾರು, ಈತನ ಹಿನ್ನೆಲೆ ಏನು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ..

ಬೆಂಜಮಿನ್ ಪಿ. ಜೋಬಿ. (Joby P U Wayanad) ಕೇರಳದ ವಯನಾಡಿನಲ್ಲಿ 2013ರ ಆಗಸ್ಟ್ 31 ರಂದು ಹುಟ್ಟಿದ ಬೆಂಜಮಿನ್‌ಗೆ ಈಗ 11 ವರ್ಷ. ನಾವು – ನೀವು 11ರ ಪ್ರಾಯದಲ್ಲಿ ಅಪ್ಪ – ಅಮ್ಮ ಹೇಳಿದಂತೆ ಮಾತುಗಳನ್ನು ಶಾಲೆಯಲ್ಲಿ ಟೀಚರ್‌ ಹೇಳಿದ ಪಾಠವನ್ನೇ ಅಂತ್ಯವೆಂದು ಕೇಳಿ ಕೂರುತಿದ್ದೇವು. ಆದರೆ ಜೋಬಿ ಈ ಪ್ರಾಯದಲ್ಲೇ ಸ್ಪೂರ್ತಿದಾಯಕ ಮಾತುಗಳಿಂದ ಜೀವನದ ಪಾಠವನ್ನು ಹೇಳುತ್ತಿದ್ದಾನೆ.

Advertisement

ಜೋಬಿ ಆರಂಭಿಕ ದಿನಗಳು..‌ 2020ರಲ್ಲಿ ಬೆಂಜಮಿನ್ ಹೆಸರಿನಲ್ಲಿ ಇನ್ಸ್ಟಾಗ್ರಾಮ್‌ ಖಾತೆಯೊಂದು ಶುರುವಾಗುತ್ತದೆ. ಆರಂಭಿಕ ದಿನಗಳಲ್ಲಿ ಈ ಖಾತೆಯಲ್ಲಿ ಅಪ್ಪ – ಅಮ್ಮನ ಜತೆಗಿನ ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿತ್ತು.

2024 ರ ಫೆಬ್ರವರಿ 13ರಲ್ಲಿ ಜೋಬಿ ಅವರ ಖಾತೆಯಲ್ಲಿ ವಯನಾಡಿನಲ್ಲಿ ಘಟನೆಯೊಂದರ ಬಗ್ಗೆ ಮಾತನಾಡುತ್ತಾ, “ವಯನಾಡಿನ ಜನರಿಗೆ ಧರ್ಮವಿಲ್ಲ ರಾಜಕೀಯವಿಲ್ಲ ನಾವೆಲ್ಲ ಒಂದೇ ಜನಾಂಗ” ಎಂದು ಕ್ಯಾಪ್ಷನ್‌ ನೀಡಿರುವ ವಿಡಿಯೋ ಅಪ್ಲೋಡ್‌ ಆಗುತ್ತದೆ. ಈ ವಿಡಿಯೋಗೆ ಕೇರಳದ ಸುದ್ದಿ ವಾಹಿನಿಗಳನ್ನು ಟ್ಯಾಗ್‌ ಮಾಡುತ್ತಾರೆ. ಕಾಡಾನೆ ದಾಳಿಯ ಘಟನೆ ಸಂಬಂಧ ಪ್ರತಿಭಟನೆಗೆ ಇಳಿದ ಜನರ ಕುರಿತಾಗಿ ಮಾಡಿರುವ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತದೆ.

ಇದಾದ ನಂತರ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ ಜೋಬಿ ಅವರು ಅದರಲ್ಲಿ “ಸಮಯ”ದ ಕುರಿತಾದ ವಿಡಿಯೋವೊಂದನ್ನು ಅಪ್ಲೋಡ್‌ ಮಾಡುತ್ತಾರೆ. ಆರಂಭಿಕ ದಿನಗಳ ಬಗ್ಗೆ ಮಾತನಾಡುವುದಾದರೆ ಜೋಬಿ ಅವರು ಪ್ರತಿದಿನ ಖ್ಯಾತ ಕವಿಗಳು ಹಾಗೂ ಬರಹಗಾರರು  ಮತ್ತು ಚಿಂತಕರ ಜನಪ್ರಿಯ ಸಾಲುಗಳನ್ನು ಬಾಯಿಪಾಠ ಮಾಡುತ್ತಿದ್ದರು.

ಜೋಬಿ ಲೂಥರ್ ಕಿಂಗ್ ಜೂನಿಯರ್ ಅವರಂತಹ ಪ್ರಸಿದ್ಧ ವ್ಯಕ್ತಿಗಳ ಭಾಷಣಗಳನ್ನು ಪಠಿಸುತ್ತಿದ್ದ ನಿವೃತ್ತ ಸೇನಾ ಅಧಿಕಾರಿಯಾಗಿರುವ ಜೋಬಿ ತಂದೆ ಇದನ್ನು ಹಾಗೆ ಸುಮ್ಮನೆ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದರು. ಜೋಬಿ ಮಲಯಾಳಂ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ ಮಾತನಾಡುತ್ತಿದ್ದ ಕ್ಷಣವನ್ನು ತಂದೆ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದರು. ಕೆಲ ಸಮಯದ ಬಳಿಕ ಜೋಬಿ ಹೆಸರಿನಲ್ಲಿ ಒಂದು ಸೋಶಿಯಲ್‌ ಮೀಡಿಯಾ ಹಾಗೂ ಯೂಟ್ಯೂಬ್‌ ಖಾತೆಯನ್ನು ತೆರೆದು ಅದರಲ್ಲಿ ಆತ ಮಾತನಾಡಿದ ವಿಡಿಯೋಗಳನ್ನು ಅಪ್ಲೋಡ್‌ ಮಾಡಲು ಶುರು ಮಾಡುತ್ತಾರೆ.

ನಿಧಾನವಾಗಿ ಜೋಬಿಯ ವಿಡಿಯೋಗಳು ಜನರಿಗೆ ತಲುಪಲು ಶುರುವಾಗುತ್ತದೆ. ಸಾವಿರದಲ್ಲಿದ್ದ ವೀವ್ಸ್‌ ಲಕ್ಷಕ್ಕೆ ಬರಲು ಶುರುವಾಗುತ್ತದೆ. ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಮಾತಿನೊಂದಿಗೆ ಒಂದೊಂದು ಸ್ಪೂರ್ತಿದಾಯಕ ವಾಕ್ಯಗಳೊಂದಿಗೆ ಜೋಬಿ ವಿಡಿಯೋಗಳನ್ನು ಮಾಡಿ ಅಪ್ಲೋಡ್‌ ಮಾಡುತ್ತಾರೆ.

ತಂದೆ ಮಗನ ವಿಡಿಯೋ ರೆಕಾರ್ಡ್‌ ಮಾಡಿದರೆ ಜೋಬಿ ತಮ್ಮ ಮಾತುಗಳನ್ನು ವಿಭಿನ್ನ ಶೈಲಿಯಲ್ಲಿ ಹೇಳುತ್ತಾರೆ. ಕೆಲ ಸಮಯದ ನಂತರ ಮಲಯಾಳಂನಲ್ಲಿದ್ದ ವಿಡಿಯೋಗೆ ಸಬ್‌ ಟೈಟಲ್‌ಗಳು ಹಾಕುತ್ತಾರೆ. ಇದರಿಂದ ಅವರ ವಿಡಿಯೋ ಇನ್ನಷ್ಟು ಜನರಿಗೆ ತಲುಪಲು ಶುರುವಾಗುತ್ತದೆ.

ಹಿಂದಿಯಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್..‌ ಮಲಯಾಳಂನಲ್ಲಿರುತ್ತಿದ್ದ ಜೋಬಿ ಅವರ ವಿಡಿಯೋಗಳು ಹಿಂದಿಯಲ್ಲೂ ಬರಲು ಶುರುವಾಗುತ್ತದೆ. ಸೆ.24 ರಂದು ಕಂಪೆನಿಯೊಂದರ ಜಾಹೀರಾತಿನ ಪ್ರಚಾರಕ್ಕಾಗಿ ಮಾಡಿದ ʼSapne dekhna achi baat haiʼ ಎನ್ನುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ (Viral Video) ಆಗುತ್ತದೆ. ಹಿಂದಿಯಲ್ಲಿ ಹೇಳುವ ವಿಶಿಷ್ಟತೆಯಿಂದಾಗಿ ಈ ವಿಡಿಯೋ ದಕ್ಷಿಣ ಭಾರತದಲ್ಲಿ ಬಹಳ ವೇಗವಾಗಿ ವೈರಲ್‌ ಆಗುತ್ತದೆ. 49 ಸಾವಿರ ಲೈಕ್ಸ್‌, 15 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆಯುತ್ತದೆ. ಇಷ್ಟು ಮಾತ್ರವಲ್ಲದೆ ಬಾಲಿವುಡ್‌ ಸ್ಟಾರ್ಸ್‌ಗಳಿಂದ ಜನಪ್ರಿಯ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಇದು ಮಿಮ್ಸ್‌ ಮೇಟಿರಿಯಲ್‌ ಆಗುತ್ತದೆ.

ಇದಾದ ನಂತರ ಶವರ್ಮಾ ಹೊಟೇಲ್‌ವೊಂದರ ಕುರಿತಾದ ಮತ್ತೊಂದು ಹಿಂದಿ ವಿಡಿಯೋ ಕೆಲವೇ ಗಂಟೆಗಳಲ್ಲಿ ಬಹಳ ವೈರಲ್‌ ಆಗುತ್ತದೆ 665 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋಗೆ ಲೈಕ್ಸ್‌ ಕೊಟ್ಟಿದ್ದು, 1.5 ಮಿಲಿಯನ್‌ ಜನ ಹಂಚಿಕೊಂಡಿದ್ದಾರೆ. 14.4 ಸಾವಿರ ಜನ ಇದಕ್ಕೆ ಕಮೆಂಟ್‌ ಮಾಡಿದ್ದಾರೆ. 16 ಮಿಲಿಯನ್‌ಗೂ ಅಧಿಕ ವೀಕ್ಷಣೆ ಈ ವಿಡಿಯೋಗಿದೆ.

ನೀನು ಬೇರೆಯವರ ಯಶಸ್ಸು ನೋಡಿ.. ಕನ್ನಡದಲ್ಲೂ ವೈರಲ್‌ ಆದ ಜೋಬಿ..

“ನೀನು ಬೇರೆಯವರ ಯಶಸ್ಸು ನೋಡಿ ಅಳಬೇಡ, ಶ್ರಮಪಟ್ಟರೆ ನಿನ್ನ ಯಶಸ್ಸು ನೋಡಿ ಪ್ರಚಂಚವೇ ಸಂಭ್ರಮಿಸುತ್ತದೆ”.. ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಬಹುತೇಕರ ಫೀಡ್‌ನಲ್ಲಿ ಈ ಮಾತಿನ ವಿಡಿಯೋ ಒಂದಕ್ಕಿಂತ ಹೆಚ್ಚಿನ ಬಾರಿ ಬಂದೇ ಇರುತ್ತದೆ. ಈ ವಿಡಿಯೋ ಇಟ್ಟುಕೊಂಡು ಕನ್ನಡದಲ್ಲಿ ನಾನಾ ರೀತಿಯ ಮಿಮ್ಸ್‌ಗಳು ಬಂದಿದೆ. ಕಂಟೆಂಟ್‌ ಕ್ರಿಯೇಟರ್‌ಗಳು ಇದನ್ನು ಸಖತ್‌ ಆಗಿ ಬಳಸಿಕೊಂಡಿದ್ದಾರೆ. ‌

ನ.24 ರಂದು ಜೋಬಿ ಅವರು ಈ ವಿಡಿಯೋವನ್ನು ಅಪ್ಲೋಡ್‌ ಮಾಡುತ್ತಾರೆ.  ವಿಡಿಯೋಗೆ 42 ಸಾವಿರ ಮೆಚ್ಚುಗೆ ಕೊಟ್ಟಿದ್ದು, 108 ಲಕ್ಷ ಜನ ಇದನ್ನು ಹಂಚಿಕೊಂಡಿದ್ದಾರೆ.  ಸದ್ಯ ಕರ್ನಾಟಕದಲ್ಲಿ ಜೋಬಿ ಅವರ ಈ ವಿಡಿಯೋ ವೈರಲ್‌ ಆಗುತ್ತಿದೆ.

ಸಣ್ಣ ವಯಸ್ಸಿನಲ್ಲೇ ದೊಡ್ಡ ಆಲೋಚನೆ.. ವಯನಾಡುವ ಮೂಲದ ಜೋಬಿ ಅವರಿಗೆ 11 ವರ್ಷ. ಇವರ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ “ಜಾತಿ, ಧರ್ಮ, ರಾಜಕೀಯದ ಕಾರಣದಿಂದ ಈ ಭೂಮಿಯಲ್ಲಿ ಯಾರೂ ಸಾಯಬಾರದು ಎಂಬುದು ನನ್ನ ಕನಸು” ಎಂದು ಬರೆದುಕೊಂಡಿದ್ದಾರೆ. ಮೊಬೈಲ್‌ ಸಂಖ್ಯೆಯನ್ನು ಅವರ ಖಾತೆಯ ಬಯೋದಲ್ಲಿ ಹಾಕಿಕೊಂಡಿದ್ದಾರೆ.

ಬ್ರ್ಯಾಂಡ್‌ ಪ್ರಮೋಷನ್‌ಗಾಗಿ ಹುಡುಕಿಕೊಂಡು ಬರುತ್ತಿದೆ ಕಂಪೆನಿಗಳು.. ವಿಶಿಷ್ಟ ಶೈಲಿಯಲ್ಲಿ ಮಾತನಾಡುವ ಜೋಬಿ ವೈರಲ್‌ ಆಗುವುದರ ಜತೆ ಜತೆಗೆ ಹಣ ಸಂಪಾದನೆಯಲ್ಲೂ ಮುಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಜನರನ್ನು ಸೆಳೆಯುತ್ತಿರುವ ಅವರನ್ನು ಹುಡುಕಿಕೊಂಡು ಈಗಾಗಲೇ ಅನೇಕ ಕಂಪೆನಿಗಳು ತಮ್ಮ ಬ್ರ್ಯಾಂಡ್‌ ಪ್ರಚಾರಕ್ಕಾಗಿ ಬಳಸಿಕೊಂಡಿದೆ. ಫುಡ್‌ ಬ್ರ್ಯಾಂಡ್‌, ಹೊಟೇಲ್‌, ಹಾಸಿಗೆ, ಪ್ರವಾಸ ಹೀಗೆ ನಾನಾ ಕಂಪೆನಿಗಳು ತಮ್ಮ ಬ್ರ್ಯಾಂಡ್‌ ಪ್ರಚಾರ ಮಾಡಲು ಜೋಬಿ ಅವರನ್ನು ಬಳಸಿಕೊಂಡಿದೆ.

ಜೋಬಿ ಅವರ ಬಹುತೇಕ ವಿಡಿಯೋಗಳು ವೈರಲ್‌ ಆಗಿರುವುದು ಈ ಬ್ರ್ಯಾಂಡ್‌ ಪ್ರಚಾರದಿಂದಲೇ. ಕಂಪೆನಿಗಳ ಬ್ರ್ಯಾಂಡ್‌ಗಳನ್ನು ಪ್ರಮೋಟ್‌ ಮಾಡುವಾಗ ಅವರು ಹೇಳುವ ಡೈಲಾಗ್ಸ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅತಿಥಿ, ಸನ್ಮಾನ ಮತ್ತು ದಾಖಲೆ..  ಪ್ರೈಮರಿ ಶಾಲೆಯಲ್ಲಿ ಓದುತ್ತಿರುವ ಜೋಬಿ ಇಂದು ಸೋಶಿಯಲ್‌ ಮೀಡಿಯಾ ಪ್ರಭಾವಿ ಆಗಿದ್ದಾರೆ. ಸ್ಪೂರ್ತಿದಾಯಕ ಮಾತಿನಿಂದಲೇ ಜನಪ್ರಿಯತೆಯನ್ನು ಗಳಿಸಿರುವ ಅವರನ್ನು ನಾನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಅನೇಕ ಶಾಲಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಜೋಬಿ ಭಾಗಿಯಾಗಿದ್ದಾರೆ. ಅವರ ಸಾಧನೆಗೆ ಸನ್ಮಾನ ಕೂಡ ಆಗಿದೆ. ಇದರೊಂದಿಗೆ ತಮ್ಮ ವಯಸ್ಸಿನ ಹಾಗೂ ತಮ್ಮಗಿಂತ ಹಿರಿಯ ಮಕ್ಕಳಿಗೆ ವೇದಿಕೆ ಹತ್ತಿ ಸ್ಪೂರ್ತಿದಾಯಕ ಮಾತುಗಳನ್ನು ಆಡಿ ಉತ್ಸಾಹ ತುಂಬುತ್ತಾರೆ.

ಮಲಯಾಳಂ, ಹಿಂದಿ, ತಮಿಳು ಹಾಗೂ ತೆಲಗು ಭಾಷೆಯಲ್ಲಿ ವಿಡಿಯೋ ಮಾಡುವ ಜೋಬಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಬಹುಭಾಷೆಯಲ್ಲಿ ಹೆಚ್ಚಿನ ವಿಡಿಯೋಗಳನ್ನು ಅಪ್ಲೋಡ್‌ ಮಾಡಿದ ಅವರ ಸಾಧನೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಅಕ್ಟೋಬರ್ 9 2024 ರಂದು ಅವರು ಈ ಸಾಧನೆಗೆ ಭಾಜನರಾಗಿದ್ದಾರೆ.

ಯೂಟ್ಯೂಬ್‌, ಇನ್ಸ್ಟಾ, ಫೇಸ್‌ಬುಕ್‌ನಲ್ಲೂ ಮಿಂಚು..: ಜೋಬಿ ಅವರ ವಿಡಿಯೋಗಳಿಗೆ ಇಂದು ಲಕ್ಷಾಂತರ ಮಂದಿ ವೀಕ್ಷಕರಿದ್ದಾರೆ. ಇದುವರೆಗೆ ಅವರು ಯೂಟ್ಯೂಬ್‌ನಲ್ಲಿ 369 ವಿಡಿಯೋಗಳನ್ನು ಅಪ್ಲೋಡ್‌ ಮಾಡಿದ್ದು, 13 ಸಾವಿರ ಸಬ್‌ ಸ್ಕ್ರೈಬರ್ಸ್‌ಗಳನ್ನು ಹೊಂದಿದ್ದಾರೆ. ಇನ್ನು ಇನ್ಸ್ಟಾಗ್ರಾಮ್‌ನಲ್ಲಿ ಅವರ ಜನಪ್ರಿಯತೆ ಹೆಚ್ಚೇ ಇದೆ. 464 ಪೋಸ್ಟ್‌ ಹಾಕಿದ್ದು, 206 ಲಕ್ಷ ಫಾಲೋವರ್ಸಗಳಿದ್ದಾರೆ. ಫೇಸ್‌ಬುಕ್‌ನಲ್ಲಿ 6.1 ಸಾವಿರ ಫಾಲೋವರ್ಸಗಳಿದ್ದಾರೆ.

ವೈರಲ್‌ ಆಗುವುದರ ಜತೆ ಟ್ರೋಲ್..‌ ಜೋಬಿ ಅವರ ವಿಡಿಯೋಗಳು ವೈರಲ್‌ ಆಗುವುದರ ಜತೆ ಜತೆಗೆ ಅನೇಕರಿಂದ ಟ್ರೋಲ್‌ಗೆ ಒಳಾಗಾಗುತ್ತಿದೆ. ಅವರ ಹಿಂದಿ ಭಾಷೆಗೆ ಹಲವರು ಬೇರೆ ಸನ್ನಿವೇಶಗಳನ್ನು ಬಳಸಿಕೊಂಡು ಮಿಮ್ಸ್‌ ಮಾಡಿದ್ದಾರೆ. ಇನ್ನು ಅವರ ವಿಡಿಯೋ ಬೇರೆ ವಿಡಿಯೋಗಳ ದೃಶ್ಯಗಳನ್ನು ಹಾಕಿ ಟ್ರೋಲ್‌ ಮಾಡಲಾಗುತ್ತಿದೆ. ಈ ಕಾರಣದಿಂದಲೂ ಅವರ ಜೋಬಿ ಅವರ ವೈರಲ್‌ ಆಗುತ್ತಿದೆ ಎಂದರೆ ತಪ್ಪಾಗದು.

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.