ಧಾರವಾಡ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಪ್ರಚೋದನಕಾರಿ ಭಾಷಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ತಾಲೂಕಿನ ಗರಗ ಗ್ರಾಮದ ಶೃತಿ ಬೆಳ್ಳಕ್ಕಿ ಎಂಬುವರನ್ನು ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.
ಪ್ರತ್ಯೇಕ ಧರ್ಮ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ ಅವರು ಸೋನಿಯಾ ಗಾಂಧಿಗೆ ಬರೆದಿದ್ದಾರೆನ್ನಲಾದ ಪತ್ರ ಕುರಿತು ಪ್ರಚೋದನಾತ್ಮಕ ರೀತಿಯಲ್ಲಿ ಶೃತಿ ತಮ್ಮ ಭಾಷಣದಲ್ಲಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದರ ಹಿಂದೆ ವಿವಿಧ ವರ್ಗ, ಸಮುದಾಯ ಮತ್ತು ಧರ್ಮಗಳ ನಡುವೆ ವೈರತ್ವ ಸೃಷ್ಟಿಸುವ ದುರುದ್ದೇಶ ಹೊಂದಿದ್ದು, ಇದರ ಜತೆಗೆ ವಿನಯ ಕುಲಕರ್ಣಿ ಅವರನ್ನು ಸೋಲಿಸಬೇಕು ಎಂಬ ಹೇಳಿಕೆಯನ್ನೂ ನೀಡಿದ್ದಾರೆ ಎಂದು ದಶರಥರಾವ್ ದೇಸಾಯಿ ಎಂಬುವರು ಮಂಗಳವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನನ್ವಯ ಪೊಲೀಸರು ಬುಧವಾರ ಬೆಳಗ್ಗೆ ಶೃತಿ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಂಗ ಬಂಧನ: ಶೃತಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪ್ರಥಮ ಜೆಎಂಎಫ್‌ಸಿ ನ್ಯಾಯಾಲಯ, ಮಧ್ಯಂತರ ಜಾಮೀನು ನೀಡಲು ನಿರಾಕರಿಸಿ ಏ.25ರಂದು ಸರ್ಕಾರಿ ವಕೀಲರಿಗೆ ತಕರಾರು ಅರ್ಜಿ ಸಲ್ಲಿಸಲು ಸೂಚಿಸಿತು. ಹೀಗಾಗಿ, ಶೃತಿಯನ್ನು ಧಾರವಾಡ ಗ್ರಾಮೀಣ ಪೊಲೀಸರು ಧಾರವಾಡ ಕೇಂದ್ರ ಕಾರಾಗೃಹದ ಮಹಿಳಾ ವಿಭಾಗಕ್ಕೆ ಹಸ್ತಾಂತರಿಸಿದರು. ಈ ಮೂಲಕ ಶೃತಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಮಹಿಳೆ ಮೇಲೆ ದೂರು ಬಂದಿರುವ ಕಾರಣ ಅವರನ್ನು ಗೌರವಯುತವಾಗಿ ಮಹಿಳಾ ಪೊಲೀಸರೇ ಹೋಗಿ ವಶಕ್ಕೆ ಪಡೆದಿದ್ದಾರೆ. ಕಾನೂನು ಪದವೀಧರೆಯಾಗಿರುವ ಶೃತಿಗೆ ಯಾವ ಕಲಂ ಅನ್ವಯ ಬಂ ಧಿಸಲಾಗುತ್ತಿದೆ ಎಂದೂ ವಿವರಿಸಲಾಗಿದೆ. ಜತೆಗೆ, ಅವರ ದೊಡ್ಡಪ್ಪ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಲು ಅವಕಾಶ ನೀಡಲಾಗಿದೆ. ಇಡೀ ಪ್ರಕ್ರಿಯೆಯನ್ನು ವಿಡಿಯೋ ಮಾಡಲಾಗಿದೆ.
– ಜಿ.ಸಂಗೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಧಾರವಾಡ.