Advertisement

ತಾಯಿಯ ಪ್ರೀತಿಯೇ ಶ್ರೇಷ್ಠ

12:51 PM Nov 13, 2017 | |

ಬೆಂಗಳೂರು: ಹಲವು ರೂಪಗಳಲ್ಲಿರುವ ಪ್ರೀತಿಗಳಲ್ಲಿ ತಾಯಿಯ ಪ್ರೀತಿ ಅತ್ಯಂತ ಆಪ್ತ ಹಾಗೂ ಶ್ರೇಷ್ಠ ಎಂದು ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.ನಗರದ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ಭಾನುವಾರ ನಡೆದ ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರ “ಪ್ರೀತಿಸುವವರನ್ನು ಕೊಂದು ಬಿಡಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಪ್ರೀತಿಯಲ್ಲಿ ಹಲವು ರೂಪಗಳಿವೆ. ಎಲ್ಲ ಸಂಬಂಧಗಳ ಪ್ರೀತಿಯೂ ಕಾಲ ಬದಲಾದಂತೆ ರೂಪ ಕಳೆದುಕೊಂಡು ಬೇರೆ ಸ್ವರೂಪ ಪಡೆದುಕೊಳ್ಳಲಿದೆ. ಆದರೆ, ಎಂದಿಗೂ ತಾಯಿಯ ಪ್ರೀತಿಯೇ ಅತ್ಯಂತ ಆಪ್ತ ಹಾಗೂ ಶ್ರೇಷ್ಠವಾಗಿರಲಿದೆ ಎಂದು ಅಭಿಪ್ರಾಯಪಟ್ಟರು. ಜೀವನದ ಬೇರೆ ಬೇರೆ ಹಂತದಲ್ಲಿ ವಿವಿಧ ರೂಪದಲ್ಲಿ ಜೊತೆಯಾಗುವ ಪ್ರೀತಿ ಬೆಳೆಯುತ್ತಾ, ಮಾಗುತ್ತಾ, ಪ್ರಬುದ್ಧವಾಗಲಿದೆ.

ಈ ಪ್ರೀತಿಯನ್ನು ಕೊಳ್ಳಲು, ಕಟ್ಟಿಹಾಕಲು, ಕಳವು ಮಾಡಲು ಸಾಧ್ಯವಿಲ್ಲ. ಒಬ್ಬೊಬ್ಬರಿಗೆ ಒಂದೊಂದು ವಿಧದ ಪ್ರೀತಿಯು ಅವ್ಯಕ್ತ ಭಾವ ನೀಡಲಿದೆ. ವೈಯಕ್ತಿಕವಾಗಿ ನನಗೆ ನನ್ನ ಕೆಲಸದ ಮೇಲಿನ ಪ್ರೀತಿ ಹೆಚ್ಚು ಆಪ್ತತೆ ನೀಡಲಿದೆ.ಸಹಬಾಳ್ವೆ ಪ್ರೀತಿಯ ಹಲವು ಮುಖಗಳನ್ನು ಪುಸ್ತಕದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ ಎಂದರು.

ಖ್ಯಾತ ನಟ ಪ್ರಕಾಶ್‌ ರೈ ಮಾತನಾಡಿ, ಪ್ರಯಾಣದ ಹಾದಿಯಲ್ಲಿ ಸಾಗುವ “ಪ್ರೀತಿಸುವವರನ್ನು ಕೊಂದು ಬಿಡಿ’ ಪುಸ್ತಕ ಓದುಗರಿಗೆ ವಿಶೇಷ ಅನುಭವ ನೀಡಲಿದೆ. ಪ್ರೀತಿಯನ್ನು ಪೇಚಿಗೆ ಸಿಲುಕಿಸುವ, ಓರೆಗೆ ಹಚ್ಚುವ ಚಿಂತನಾಶೀಲತೆ ಹೊಂದಿದೆ. ಪುಸ್ತಕ ಓದುತ್ತಾ ಹೋದಂತೆಲ್ಲಾ, ಒಂದು ವಿಶೇಷಗ್ರಹಿಕೆ, ಹೊಸ ದಿಗಂತಕ್ಕೆ ಕೊಂಡೊಯ್ದು ನಾವೇ ಗುರಿ ತಲುಪಿದೆವು ಎಂಬ ಅನುಭೂತಿ ನೀಡಲಿದೆ ಎಂದು ವಿಶ್ಲೇಷಿಸಿದರು.

ಸಾಕಷ್ಟು ಬ್ಯುಸಿ ಜೀವನದಲ್ಲಿಯೂ ಬೆಂಗಳೂರಿನಲ್ಲಿ ಕಳೆದುಕೊಂಡ ನೆನಪುಗಳನ್ನು ಮತ್ತೆ ಮತ್ತೆ ಪಡೆಯಲು ಬರುತ್ತಿರುತ್ತೇನೆ. ಇಂತಹ ಕಾರ್ಯಕ್ರಮಗಳಲ್ಲಿ ಆ ಕ್ಷಣಗಳು ಸಿಗಲಿವೆ ಎಂದರು. ಲೇಖಕ ಜೋಗಿ ಮಾತನಾಡಿ, ಕನ್ನಡದ ಪುಸ್ತಕಗಳನ್ನು ಕೊಂಡು ಓದುವ ಸಾವಿರಾರು ಮಂದಿ ಓದುಗರಿದ್ದಾರೆ.

Advertisement

ಎಲ್ಲಾ ವಯೋಮಾನದವರು ಅವರವರ  ಗ್ರಹಿಕೆಗೆ, ಅಭಿರುಚಿಗೆ ತಕ್ಕನಾಗಿ ಕುವೆಂಪು, ಲಂಕೇಶ್‌, ತೇಜಸ್ವಿ, ಸೇರಿದಂತೆ ಅನೇಕ ಲೇಖಕರ ಪುಸ್ತಕಗಳನ್ನು ಕೊಳ್ಳುವ ಯುವಪೀಳಿಗೆ ಹುಟ್ಟಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಆಧುನೀಕರಣದ ಡಿಜಿಟಲ್‌ ಯುಗದಲ್ಲಿ ಪುಸ್ತಕಗಳನ್ನು ಓದುವ ಶೈಲಿ ಸಂಪೂರ್ಣ ಬದಲಾಗುತ್ತಿದೆ.

ತುಂಬಾ ಕ್ಲಿಷ್ಟ  ಹಾಗೂ ಸಂಕೀರ್ಣ ವಿಚಾರಗಳನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳಾಗುತ್ತಿವೆ ಎಂದರು. ಹಿರಿಯ ಲೇಖಕ ಪ್ರೊ.ಜಿ.ಕೆ ಗೋವಿಂದರಾವ್‌, ನಟ, ನಿರ್ದೇಶಕ ಟಿ.ಎನ್‌ ಸೀತಾರಾಂ, ಲೇಖಕ ಅಹೋರಾತ್ರ, ಕ್ಷಿಪ್ರಚಿತ್ರ ಕಲಾವಿದ ವಿಲಾಸ್‌ ನಾಯಕ್‌, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್‌, ರವಿ ಹೆಗಡೆ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next