Advertisement

ತಾಯಿ ಮರಣ-ಅನಿಮಿಯಾ ಮುಕ್ತ ದೇಶಕ್ಕೆ ಶ್ರಮಿಸಿ

11:16 AM Apr 10, 2019 | Lakshmi GovindaRaju |

ಗುಡಿಬಂಡೆ: ಆರೈಕೆ ಸಿಗದೆ ತಾಯಿ ಮರಣ ಹಾಗೂ ಅನಿಮಿಯಾ ಮುಕ್ತ ಭಾರತ ಮಾಡಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಜಾರಿಗೆ ತಂದಿದ್ದು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.

Advertisement

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನದಡಿ ಮಂಗಳವಾರ ಹಮ್ಮಿಕೊಂಡಿದ್ದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿ ಮರಣ ದೇಶದ ಪ್ರಗತಿಗೆ ಮಾರಕ. ಭಾರತದಲ್ಲಿ ವೈದ್ಯರ ಕೊರತೆ ಇದೆ. ಬದಲಾದ ಕಾಲ ಘಟ್ಟದಲ್ಲಿ ಸೂಕ್ತ ಸಮಯದಲ್ಲಿ ಗುಣಮಟ್ಟದ ಚಿಕಿತ್ಸೆ ವೈದ್ಯಕೀಯ ಆರೈಕೆ ದೊರಕುತ್ತಿಲ್ಲ. ಹೀಗಾಗಿ ತಾಯಿ ಮರಣ ಸಂಭವಿಸುತ್ತಿದೆ ಎಂದು ಹೇಳಿದರು.

ಒಂದು ತಾಯಿಯ ಮರಣಕ್ಕೆ ಅನೇಕ ಕಾರಣಗಳಿದ್ದು ಅದರಲ್ಲಿ ವೈದ್ಯಕೀಯ, ಅವೈದ್ಯಕೀಯ ಎಂದು ವಿಂಗಡಿಸಬಹುದು. ವೈದ್ಯಕೀಯ ಕಾರಣಗಳಲ್ಲಿ ಬಹಳಷ್ಟು ಮರಣಗಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ಸಂಭವಿಸುತ್ತವೆ ಎಂಬುದು ವಿಷಾಧನೀಯ ಸಂಗತಿ ಎಂದು ತಿಳಿಸಿದರು.

ಎಚ್ಚರವಹಿಸಿ: ಸಾಮಾಜಿಕ, ಆರ್ಥಿಕ ಕಾರಣಗಳಿಂದ ಗರ್ಭಿಣಿ ಒಂದೇ ಊರಿನಲ್ಲಿ ಇರುವುದಿಲ್ಲ. ಬರ ಪೀಡಿತ ಪ್ರದೇಶದ ಜನರು ಕೆಲಸಕ್ಕಾಗಿ ನಗರಗಳ ಕಡೆಗೆ ವಲಸೆ ಹೋಗುತ್ತಾರೆ. ಸೂಕ್ತ ಗರ್ಭಿಣಿ ಆರೈಕೆ ಮಾಡಿಕೊಳ್ಳುವುದಿಲ್ಲ. ಸೂಕ್ತ ವೈದ್ಯಕೀಯ ತಪಾಸಣೆಗೆ ಒಳ ಪಡುವುದಿಲ್ಲ. ಹೆರಿಗೆಗೆ 1 ವಾರ ಇಲ್ಲವೇ 1 ತಿಂಗಳು ಇರುವಾಗ ತಾಯಿ ಮನೆಗೆ ಹೆರಿಗೆಗೆ ಬರುತ್ತಾರೆ.

Advertisement

ಗಂಡಾಂತರ ಹೆರಿಗೆ ಲಕ್ಷಣಗಳು ಇದ್ದರೆ ಸ್ಥಳೀಯ ವೈದ್ಯರು ಮೇಲ್ದರ್ಜೆ ಅಥವಾ ಇತರೆ ಆಸ್ಪತ್ರೆಗೆ ಕಳುಹಿಸುತ್ತಾರೆ. ಈ ವೇಳೆ ದಾರಿ ಮಧ್ಯೆ ಸಾವು ಸಂಭವಿಸಬಹುದು. ವೈದ್ಯರ ನಿರ್ಲಕ್ಷ್ಯದಿಂದಲೂ ಸಾವು ಸಂಭವಿಸಬಹುದಾಗಿದೆ ಎಂದು ಹೇಳಿದರು.

ಕ್ರಮ ವಹಿಸಿ: ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ವಿಜಯಲಕ್ಷಿ, ದೇಶದಲ್ಲಿ ತಾಯಿ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಆರೋಗ್ಯ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಯೋಜನೆ ಜಾರಿಗೆ ತಂದಿದ್ದಾರೆ.

ಇದರ ಮೂಲ ಉದ್ಧೇಶ ಪ್ರತಿ ತಿಂಗಳು 9 ನೇ ತಾರೀಖೀನಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ, ಸರ್ಕಾರಿ/ ಅರೆ ಸರ್ಕಾರಿ/ಖಾಸಗಿ ಸ್ತ್ರೀ ರೋಗ ತಜ್ಞರು ಗರ್ಭಿಣಿ ಸ್ತ್ರೀಯರ ಪರೀಕ್ಷೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಬೇಕು. ಮುಖ್ಯವಾಗಿ ತಾಯಿ ಮರಣ ಸಂಭವಿಸದಂತೆ ಕ್ರಮ ವಹಿಸಬೇಕೆಂದರು.

ಉಚಿತ ಔಷಧಿ: ಇದೊಂದು ಗ್ರಾಮೀಣ ಮತ್ತು ಬಡ ಹೆಣ್ಣು ಮಕ್ಕಳ ಪಾಲಿಗೆ ವರವಾಗಿದ್ದು ಹೊಸದಾದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಇದರ ಪೂರ್ಣ ಪ್ರಯೋಜನವನ್ನು ಗರ್ಭಿಣಿಯರು ಪಡೆಯಬೇಕು. ವೈದ್ಯರಿಗೆ ಹಣ ನೀಡಬೇಕಿಲ್ಲ. ಈ ವೇಳೆ ಗರ್ಭಿಣಿಗೆ ಅಗತ್ಯ ಇರುವ ಔಷಧಿಯನ್ನು ಜೆ.ಎಸ್‌.ಎಸ್‌.ಕೆ ಕಾರ್ಯಕ್ರಮದಡಿ ಭರಿಸಲಾಗುವುದೆಂದರು.

ತಾಯ್ತನಕ್ಕೆ ಯಾವುದೇ ಜಾತಿ, ಕುಲದ ಹಂಗು ನೋಡದೇ, ಬಡವ, ಶ್ರೀಮಂತ ಎಂದು ಬೇಧವೆಣಿಸದೆ ಉಚಿತವಾದ ಚಿಕಿತ್ಸೆ ನೀಡಲಾಗುವುದು. ಮೂಲಕ ತಾಯಿ ಮರಣ ಶಿಶು ಮರಣ ತಡೆಗಟ್ಟಬೇಕೆಂದರು.

ಗರ್ಭಿಣಿಯರಿಗೆ ಉಚಿತ ಔಷಧಿ: ಪ್ರತಿ ಗರ್ಭಿಣಿ ಕನಿಷ್ಠ 4 ಬಾರಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ರಕ್ತದಲ್ಲಿ ಹಿಮೋಗ್ಲೊಬಿನ್‌ ಪ್ರಮಾಣ, ಬಿ.ಪಿ, ಕಬ್ಬಿಣಾಂಶ ಮತ್ತಿತರ ವಿಷಯಗಳ ಕಡೆ ಗಮನ ಹರಿಸಬೇಕು. ಅನಿಮಿಯಾ ಎಂದು ಕಂಡು ಬಂದಲ್ಲಿ, ಬಿ.ಪಿ ಹೆಚ್ಚು ಇರುವುದು ಕಂಡು ಬಂದಲ್ಲಿ ಸೂಕ್ತ ಮಾತ್ರೆ- ಔಷಧಿ ಪಡೆಯಬೇಕು.

ಎಚ್‌ಐವಿ ಮತ್ತಿತರ ಪರೀಕ್ಷೆಗೊಳಪಟ್ಟು ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ಪಡೆಯಬಹುದು. ಅಲ್ಲದೇ, ಮಗುವಿಗೆ ಕಾಯಿಲೆ ಹರಡದಂತೆ ತಡೆಯಬಹುದು ಎಂದು ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next