Advertisement

ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ

01:42 PM May 10, 2020 | Hari Prasad |

ಅಪ್ಪ ಅಮ್ಮ ನನ್ನ ಜಗತ್ತು, ಇವರಿಬ್ಬರು ನನ್ನ ಶಕ್ತಿ ಅಂತ ಹೇಳಬಹುದು. ಪ್ರತೀ ಬಾರಿ ನಮಗೆ ಏನಾದರೂ ನೋವಾದಾಗ, ಎಡವಿದಾಗ ನಮ್ಮ ಬಾಯಿಂದ ಬರುವ ಪದವೇ ಅಮ್ಮ. ಪ್ರೀತಿಗೆ ಇನ್ನೊಂದು ಅರ್ಥ ಅಮ್ಮ.

Advertisement

ಪ್ರತೀ ಬಾರಿ ನನ್ನ ಕಣ್ಣಲ್ಲಿ ನೀರು ಬಂದಾಗ ಅಮ್ಮನ ಮಡಿಲೇ ನನಗೆ ಆಸರೆ. ಅವಳ ಮಡಿಲಿನಲ್ಲಿ ಬಂದು ಮಲಗಿ ಅತ್ತರೆ ಏನೋ ಒಂದು ರೀತಿಯ ನೆಮ್ಮದಿ.

ಮನಸ್ಸಿಗೆ ನೋವಾಗಿ ಜೀವನ ಇನ್ನೇನು ಮುಗಿತು ಎಂದು ಕೊಂಡಾಗ, ನಾನು ಸೋತೆ  ಅಮ್ಮ ಎಂದು ಅವಳ ಮಡಿಲಿನಲ್ಲಿ ಮಲಗಿ ಹೇಳಿದರೆ, ಆಕೆ ತಲೆ ಸವರಿ ಹೇಳುವ ಒಂದೊಂದು ಮಾತು ಗೆಲ್ಲುವ ಛಲವನ್ನು ಹುಟ್ಟಿಸುತ್ತದೆ.

ಹಿಂದೆ ಅಮ್ಮನ ಜೊತೆಗೇ ಇದ್ದೆ. ಆಗ ಅಮ್ಮ ಸದಾ ನನ್ನ ಜೊತೆಗೆ ಇದ್ದಳು. ಆದ್ರೆ ಉನ್ನತ ಶಿಕ್ಷಣಕ್ಕಾಗಿ ಬೇರೆ ಊರಿಗೆ ಹೋಗಬೇಕಾಯಿತು. ಮೊದ ಮೊದಲು ನಿದ್ದೆ ಬರ್ತಾ ಇರಲಿಲ್ಲ.

ನನಗೆ ಅಮ್ಮನ ಪಕ್ಕ ಮಲಗಿ ಅಭ್ಯಾಸ, ಅವಳು ನನಗೆ ನಿದ್ದೆ ಬರುವ ತನಕ ತಲೆ ಸವರುತ್ತಿದ್ದಳು, ಅವಳ ಬೆರಳುಗಳು ನನ್ನ ಎದೆಯ ಮೇಲೆ ಇದ್ದರೆ ಮಾತ್ರ ನನಗೆ ನಿದ್ದೆ ಬರುತ್ತಿತ್ತು. ಅವಳು ಹಾಗೆ ಕೈ ಇಟ್ಟರೆ ನನಗೇನೋ ಧೈರ್ಯ, ಏನೋ ಅವಳ ಕೈ ನನಗೆ ಸಕಾರಾತ್ಮಕ ಶಕ್ತಿ. ಹಾಗಾಗಿ ಬೇಗ ನಿದ್ದೆ ಬರುತ್ತಿತ್ತು.

Advertisement

ಆದ್ರೆ ಓದಿಗಾಗಿ ಬೇರೆ ಊರಿಗೆ ಬಂದಾಗ, ಅಮ್ಮ ಹತ್ತಿರ ಇಲ್ಲದೆ ನಿದ್ದೆ ಬಾರದೆ, ಅತ್ತಿಂದಿತ್ತ ಹೊರಳಾಡಿ, ಅತ್ತು, ಅಮ್ಮನ ಫೋಟೋ ನೋಡಿ ಮಲಗಿದ್ದು ಉಂಟು. ಅದೆಷ್ಟೋ ಬಾರಿ ಅಮ್ಮ ನನ್ನ ಕನಸಿನಲ್ಲಿ ಬಂದಿದ್ದಾಳೆ.

ಅವಳು ತಲೆ ಸವರುತ್ತಿರುವ ಕನಸು, ಮತ್ತೊಮ್ಮೆ ದಾರಿ ತಪ್ಪಬೇಡ ಎನ್ನುವ ಎಚ್ಚರಿಕೆಯ ಕನಸು. ಆಕೆ ಹೆಮ್ಮೆಪಡುವ ಕೆಲಸವನ್ನು ನಾನು ಮಾಡಿ, ಸಾವಿರಾರು ಜನರು ನನ್ನನ್ನು ಪ್ರಶಂಸಿಸುವ ಸಂದರ್ಭದಲ್ಲಿ, ಅಮ್ಮ ನನ್ನನ್ನು ಎದೆಗಪ್ಪಿ ಮುದ್ದಾಡಿದ ಕನಸು.

ಹೀಗೆ ಅಮ್ಮ ನನ್ನ ಕನಸಿನಲ್ಲಿ ಬಂದ ಬಗೆಯನ್ನು ಹೇಳುತ್ತಾ ಹೋದ್ರೆ ಬಹುಶಃ ಅದಕ್ಕೆ ಕೊನೆಯಿಲ್ಲ. ನನ್ನ ಕನಸಿನಲ್ಲಿ, ಮನಸಿನಲ್ಲಿ ಸದಾ ಇರ್ತಾಳೆ ಅವಳು. ಯಾಕೆಂದ್ರೆ ಅವಳು ನನ್ನನ್ನು ತುಂಬಾ ಪ್ರೀತಿಸುತ್ತಾಳೆ, ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ.

ಹಾಗಾಗಿ, ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ.

– ಚೈತ್ರಾ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next