Advertisement

Motherhood: ತಾಯ್ತನದ ಪ್ರೀತಿ..

09:52 PM Jan 14, 2025 | Team Udayavani |

ಮಮತೆ ತುಂಬಿದ ಹೃದಯವೇ ಮಾತೃ ಹೃದಯ. ಕರುಣೆ ತುಂಬಿದ ಕರುಳೇ ಹೆತ್ತ ಕರುಳು. ತನ್ನ ದೇಹದ ಭಾಗವಾಗಿ ಬೆಳೆದು ಹೊರ ಜಗತ್ತಿಗೆ ಬಂದ ಮಗುವು ತನ್ನ ಜೀವಕ್ಕಿಂತಲೂ ಮೇಲು, ಮಗುವೇ ತನ್ನ ಪ್ರಾಣ ಎಂಬ ಭಾವನೆ ಪ್ರತಿಯೊಬ್ಬ ತಾಯಿಯಲ್ಲೂ ಇರುತ್ತದೆ. ಮಗು ಅತ್ತರೆ ತಾನು ಅಳುವ, ಮಗು ನಕ್ಕರೆ ತಾನು ನಗುವ ಭಾವಪರವಶ ಜೀವಿ ತಾಯಿ. ಮಕ್ಕಳು ಎಷ್ಟೇ ದೊಡ್ಡವರಾದರೂ ತಾಯಿಗೆ ಮಾತ್ರ ಮಗುವೇ.

Advertisement

ಕಳೆದ ವಾರ ನಾನು ಹರಕೆ ತೀರಿಸಲೆಂದು ನನ್ನ ಯಜಮಾನರ ಜತೆಗೆ ತಮಿಳುನಾಡಿಗೆ ಹೋಗಿದ್ದೆ. ವಾಪಾಸು ಬರುವಾಗ ನಾವು ವೆಲ್ಲೂರಿನಿಂದ ಹೊಸೂರಿಗೆ ಬರುವ ಬಸ್‌ ಹತ್ತಿ ಕುಳಿತೆವು. ಆಗ ಒಬ್ಬಳು ಮಹಿಳೆ ಒಂದು ಕೈಯಲ್ಲಿ ಬ್ಯಾಗ್‌ ಹಿಡಿದುಕೊಂಡು, ಇನ್ನೊಂದು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಬಸ್‌ ಹತ್ತಿದಳು. ಬಸ್‌ ತುಂಬಾ ರಶ್‌ ಇತ್ತು. ನಿಂತುಕೊಳ್ಳಲು ಸರಿಯಾಗಿ ಜಾಗವಿರಲಿಲ್ಲ. ಎಲ್ಲರೂ ಮೂರು ನಾಲ್ಕು ಗಂಟೆಗಳ ಕಾಲ ಸುದೀರ್ಘ‌ ಪ್ರಯಾಣ ಮಾಡಬೇಕಾಗಿರುವುದರಿಂದ ಯಾರು ಅವಳಿಗೆ ಸೀಟು ಬಿಟ್ಟುಕೊಡಲು ಒಪ್ಪಲಿಲ್ಲ. ಹಾಗಂತ ಅವಳು ಕಳವಳಗೊಳ್ಳಲಿಲ್ಲ. ಬ್ಯಾಗ್‌ ಕೆಳಗಡೆ ಇಟ್ಟು ಮಗುವನ್ನು ಹಿಡಿದುಕೊಂಡು ಸುಮ್ಮನೆ ನಿಂತುಕೊಂಡಿದ್ದಳು. ಸ್ವಲ್ಪ ಹೊತ್ತಿನ ಅನಂತರ ಮಗು ಜೋರಾಗಿ ಅಳತೊಡಗಿತು. ಎಷ್ಟೇ ಸಮಾಧಾನ ಮಾಡಿದರೂ ಕೇಳುತ್ತಿರಲಿಲ್ಲ. ಬೇರೆಯವರು ಎತ್ತಿಕೊಳ್ಳಲು ಪ್ರಯತ್ನಿಸಿದರೂ ಯಾರ ಕೈಗೂ ಹೋಗುತ್ತಿರಲಿಲ್ಲ. ನೀರು ಕುಡಿಸಿದರೂ ಬೇಡವೆಂದು ಹಠ ಮಾಡುತ್ತಿತ್ತು. ಮಗು ಎದೆಹಾಲು ಬೇಕೆಂದು ಕೈ ತೋರಿಸುತ್ತಾ ಒಂದೇ ಸಮನೆ ಅಳುತ್ತಿತ್ತು.

ಸುತ್ತಲೂ ಅನೇಕ ಗಂಡಸರು ನಿಂತಿದ್ದಾರೆ. ಕುಳಿತುಕೊಳ್ಳಲು ಎಲ್ಲೂ ಜಾಗವಿಲ್ಲ. ಆಗ ಧೈರ್ಯಗೆಡದ ತಾಯಿ ಅಲ್ಲಿಯೇ ಜನರ ಕಾಲಿನ ಬುಡದಲ್ಲಿ ಅಂದರೆ ಕೆಳಗಡೆ ಕುಳಿತುಕೊಂಡು, ಮಗುವಿನ ಬಾಯಿಗೆ ಎದೆ ಹಾಲು ತುರುಕಿಸಿದಳು. ಮಗು ಹಠ ನಿಲ್ಲಿಸಿ ಹಾಲು ಕುಡಿಯುತ್ತಾ ಅಲ್ಲಿಯೇ ಮಲಗಿತು. ಆಕೆ ಮೊಬೈಲ್‌ ನೋಡುತ್ತಾ ಊರು ಬರುವವವರೆಗೂ ಮಗುವನ್ನು ಕಾಲ ಮೇಲೆಯೇ ಮಲಗಿಸಿಕೊಂಡು ಕೆಳಗಡೆಯೇ ಕುಳಿತಿದ್ದಳು.

ಈಗಿನ ಮಾಡರ್ನ್ ಯುಗದಲ್ಲಿ ಎಲ್ಲ ಅನುಕೂಲವಿದ್ದೂ, ಮಗು ಅತ್ತಾಗ ಎದೆಹಾಲಿದ್ದರೂ ಬಾಟಲಿ ಹಾಲು ಕುಡಿಸುವ ತಾಯಂದಿರನ್ನು ನಾವು ನೋಡುತ್ತೇವೆ. ರಾತ್ರಿ ಹೊತ್ತು ಮಗು ಹಠ ಮಾಡುತ್ತದೆಂದು ನಿದ್ದೆ ಮಾಡಲು ಬಿಡುವುದಿಲ್ಲವೆಂದು ದೂರ ಮಲಗಿಸುವ ತಾಯಂದಿರು ಇದ್ದಾರೆ. ಅಂತವರಿಗೆ ಹೋಲಿಸಿದಾಗ ಈಕೆ ಅತ್ಯುತ್ತಮಳೆನಿಸುತ್ತಾಳೆ ಅಲ್ಲವೇ?

ಚಿಕ್ಕ ಮಕ್ಕಳನ್ನು ಹೊರಗಡೆ ಎಲ್ಲಾದರೂ ಕರೆದುಕೊಂಡು ಹೋಗುವುದೆಂದರೆ ಅದು ಅಷ್ಟು ಸುಲಭದ ಮಾತೇ? ಮಕ್ಕಳಿಗೆ ಬೇಕಾಗುವ ಎಲ್ಲ ವಸ್ತುಗಳು ಜತೆಯಲ್ಲಿರಬೇಕು. ಹಸಿವಾದಾಗ ತಿನ್ನಲು ಬಿಸ್ಕತ್ತು, ಕುಡಿಯಲು ನೀರು ಇಲ್ಲವೇ ಹಾಲು, ಡೈಪರ್‌, ಹೆಚ್ಚುವರಿ ಬಟ್ಟೆ, ಜ್ವರ ನೆಗಡಿ ಬಂದರೆ ಸಿರಪ್‌ ಹೀಗೆ ಹತ್ತು ಹಲವು ವಸ್ತುಗಳನ್ನು ಹಿಡಿದುಕೊಂಡು, ಮಗುವನ್ನು ಎತ್ತಿಕೊಂಡು ಆಕೆ ದೂರದೂರಿಗೆ ಪ್ರಯಾಣ ಮಾಡಬೇಕು. ಸ್ವಲ್ಪ ಗಾಳಿಯಲ್ಲಿ ಹೋದರೂ ಸಾಕು ಮಗುವಿಗೆ ಮೈ ಕೈ ಬಿಸಿಯಾಗಿ ಜ್ವರ ಬರುವ ಸಾಧ್ಯತೆ ಇರುತ್ತದೆ.

Advertisement

ಒಟ್ಟಿನಲ್ಲಿ ಹೇಳುವುದಾದರೆ ಮಕ್ಕಳು ಚಿಕ್ಕವರಿದ್ದಾಗ ಪ್ರಯಾಣ ಮಾಡುವುದು ತ್ರಾಸದಾಯಕವೇ ಸರಿ. ಪಾಪ! ಒಬ್ಬಳೇ ಹೆಂಗಸು ಆರು ತಿಂಗಳ ಮಗುವನ್ನು ಎತ್ತಿಕೊಂಡು ಬಸ್‌ನಲ್ಲಿ ಬರುವ ಪರಿಸ್ಥಿತಿ ಏನಿತ್ತೋ ಏನೋ? ಅಷ್ಟು ಕಷ್ಟದಲ್ಲಿದ್ದರೂ ಸಹ ಅವಳು ಮಗುವಿನ ಮೇಲೆ ಸ್ವಲ್ಪವೂ ರೇಗಲಿಲ್ಲ. ಅಳುವ ಮಗುವನ್ನು ಮುದ್ದಿಸಿ ಅದರ ಹಸಿವನ್ನು ನೀಗಿಸಿ ತಾಯ್ತನವನ್ನು ಮೆರೆದಳು.

ತಾನು ಕೆಸರಲಿ

ಕುಸಿಯುತ್ತಿದ್ದರೂ

ತಾವರೆಯು ಮರಿದುಂಬಿಗಳ

ಪೊರೆವ ತೊಟ್ಟಿಲಾಗಿ..

ಹೇಗೆ ತಾಯ್ತನವನ್ನು

ಪ್ರೀತಿಯಲಿ ಮೆರೆಯುವುದೋ

ಹಾಗೆ ಬಾಳಿಸು ಗುರುವೆ

ಕರುಣೆಯಿಟ್ಟು……

ಹಾಗೆ ಬಾಳಿಸು ಗುರುವೆ

ಕರುಣೆಯಿಟ್ಟು…

ಇದು ಎಚ್‌. ಎಸ್‌. ವಿ. ಅವರು ಬರೆದಿರುವ ಗೀತೆ. ತಾಯ್ತನ ಅಂದರೆ ಏನು? ಅದು ಹೇಗಿರಬೇಕು ಎಂಬುದರ ಬಗ್ಗೆ ತಿಳಿಸುತ್ತದೆ ಈ ಹಾಡು.

ತಾವರೆಯು ತಾನು ಕೆಸರಿನಲ್ಲಿ ಅಂದರೆ ಕಷ್ಟದಲ್ಲಿ ಇದ್ದರೂ ಸಹ ಮರಿದುಂಬಿಗಳನ್ನು ಪೊರೆಯುವ ತೊಟ್ಟಿಲಾಗುತ್ತದೆ. ಹಾಗೆಯೇ ತಾಯಿಗೆ ಎಷ್ಟೇ ಸಂಕಷ್ಟ ಎದುರಾದರೂ ಸಹ ತನ್ನ ಮಕ್ಕಳ ಪಾಲನೆ ಪೋಷಣೆ ಮಾಡುತ್ತಾಳೆ. ಅದೇ ನಿಜವಾದ ತಾಯ್ತನದ ಪ್ರೀತಿ ಎಂದು ಕವಿ ವರ್ಣಿಸುತ್ತಾರೆ.

ತನ್ನ ಮಗು ಹಸಿದಿದ್ದಾಗ ಅದಕ್ಕೆ ಹಾಲು ನೀಡುವುದು ಅವಳ ಕರ್ತವ್ಯ. ಸುತ್ತಲಿನ ಜನರು ನೋಡುತ್ತಾರೆಂದು ಕಿಂಚಿತ್ತೂ ನಾಚಿಕೊಳ್ಳದೇ, ಯಾರೇನೇ ಅಂದರೂ ಪರವಾಗಿಲ್ಲ, ನನ್ನ ಮಗುವಿನ ಹಸಿವನ್ನು ನೀಗಿಸಬೇಕು, ಅದರ ಅಳುವನ್ನು ನಿಲ್ಲಿಸಬೇಕೆಂದು ನಿರ್ಧರಿಸಿ ತಾಯಿ ಹಾಲು ಕೊಡಲು ಮುಂದಾಗುತ್ತಾಳೆ. ತನ್ನ ತಾಯ್ತನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾಳೆ. ಅಂತಹ ಸಂದರ್ಭದಲ್ಲಿ ಅವಳ ಸುತ್ತಲೂ ನೆರೆದ ಜನರು ಕೂಡ ಅವಳಿಗೆ ಸಹಕರಿಸುತ್ತಾರೆ. ಅವಳಿಗೆ ಸ್ವಲ್ಪವೂ ಮುಜುಗರವಾಗದಂತೆ ನಡೆದುಕೊಂಡು ಮಾನವೀಯತೆ ಮೆರೆಯುತ್ತಾರೆ.

-ಚಂದ್ರಿಕಾ ಆರ್‌. ಬಾಯಿರಿ

ಬಾರಕೂರು

Advertisement

Udayavani is now on Telegram. Click here to join our channel and stay updated with the latest news.