ತುಮಕೂರು: ಕಳೆದ ಹತ್ತು ದಿನಗಳ ಹಿಂದೆ ಭಾರತಿ ನಗರದ ಮಹಿಳೆ ಹಾಗೂ ಅವಳಿ ಶಿಶು ಸಾವು ಪ್ರಕರಣದಲ್ಲಿ ತಾಯಿ ಹಾಗೂ ಮಕ್ಕಳ ಸಾವಿಗೆ ಕಾರಣರಾದವರ ಮೇಲೆ ಕಠಿನ ಕಾನೂನು ಕ್ರಮ ಜರಗಿಸಲಾಗುವುದು. ತನಿಖಾ ವರದಿ ಆಧರಿಸಿ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ತಿಳಿಸಿದರು.
ನಗರದಲ್ಲಿ ಬುಧವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ನಗರದ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದ ಸಚಿವ ಡಾ| ಕೆ. ಸುಧಾಕರ್, ಇತ್ತೀಚೆಗೆ ತಾಯಿ ಮತ್ತು ಅವಳಿ ಶಿಶುಗಳ ಸಾವು ಸಂಭವಿಸಿ, ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಬಾಲಕಿಯ ಶಿಕ್ಷಣ, ಭದ್ರತೆ ಹಾಗೂ ಭವಿಷ್ಯಕ್ಕಾಗಿ ಆರೋಗ್ಯ ಇಲಾಖೆ ವತಿಯಿಂದ 10 ಲಕ್ಷ ರೂ. ಚೆಕ್ ಅನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರಾ ಅವರಿಗೆ ವಿತರಿಸಿದರು.
ಬಾಲಕಿಯ ಕೈಗೆ ಹೊಸ ಬಟ್ಟೆ, ಹಣ್ಣು ಮತ್ತು ಸಿಹಿ ತಿಂಡಿ ವಿತರಿಸಿದ ಸಚಿವರು ಅನಂತರ ಬಾಲ ಮಂದಿರವನ್ನು ಪರಿಶೀಲಿಸಿದರು. ಬಾಲಕಿಯ ಹೆಸರಿಗೆ ಆರೋಗ್ಯ ಇಲಾಖೆಯಿಂದ 10 ಲಕ್ಷ ರೂ. ಎಫ್ಡಿ ಮಾಡಲಾಗುವುದು ಎಂದರು.