ಹಾಗಂತ ಘೋಷಿಸಿಯೇಬಿಟ್ಟರು ನಿರ್ದೇಶಕ ಚನಾನಿರಾಜ. ಅವರ ಹೆಸರೇನೋ ವಿಚಿತ್ರವಾಗಿದೆಯಲ್ಲಾ ಅಂತನಿಸಬಹುದು. ಅವರ ನಿಜವಾದ ಹೆಸರು ಚನ್ನಬಸವ. ಅವರು ಐವರು ಸ್ನೇಹಿತರಂತೆ. ಹಾಗಾಗಿ ಐವರ ಹೆಸರಿನ ಮೊದಲಕ್ಷರವನ್ನು ಜೋಡಿಸಿ ಚನಾನಿರಾಜ ಆಗಿದ್ದಾರೆ. ಈಗ ವಿಷಯಕ್ಕೆ ಬರೋದಾದರೆ, ಅವರು ಚಿತ್ರದ ಹಾಡುಗಳ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು ಚಿತ್ರದ ಮುಹೂರ್ತದ ದಿನದಂದು. ಕಳೆದ ವಾರ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅವರ ಮೊದಲ ಚಿತ್ರ “ಭರಣಿ – ಪಾರ್ವತಮ್ಮನ ಮಗ’ ಚಿತ್ರದ ಮುಹೂರ್ತವಿತ್ತು. “ದುನಿಯಾ’ ಯೋಗಿ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಹೋದ ಕೆಲ ಹೊತ್ತಲ್ಲೇ ಪತ್ರಿಕಾಗೋಷ್ಠಿ ನಡೆಯಿತು.
Advertisement
ಅಂದಹಾಗೆ, ಈ ಚಿತ್ರದಲ್ಲಿ ಯೋಗಿ ಅವರ ಸಂಬಂಧಿ ಮಾಧವ್ ಮತ್ತು ಸ್ವಾತಿ ಕೊಂಡೆ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಅಪ್ಪಟ ಗ್ರಾಮೀಣ ಚಿತ್ರ ಎನ್ನುತ್ತಾರೆ ಚನಾನಿರಾಜ. “ಗ್ರಾಮೀಣ ಕಥೆಯಾದರೂ ಇದು ಬೇರೆ ತರಹ ಇರುತ್ತದೆ. ಇದು ತಾಯಿ-ಮಗನ ಸೆಂಟಿಮೆಂಟ್ ಚಿತ್ರ. ಇದುವರೆಗೂ ತಾಯಿ-ಮಗನ ಸೆಂಟಿಮೆಂಟ್ ಕುರಿತಾದ ಹಲವು ಚಿತ್ರಗಳು ಬಂದಿರಬಹುದು. ಇದು ವಿಭಿನ್ನವಾಗಿರುತ್ತದೆ. ಇಲ್ಲಿ ತಾರಾ ಅವರು ತಾಯಿಯ ಪಾತ್ರ ಮಾಡುತ್ತಿದ್ದಾರೆ. ಒಂದು ಆನೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. “ಬಾಹುಬಲಿ’ ಚಿತ್ರದಲ್ಲಿ ಆ ಆನೆ ಕಾಣಿಸಿಕೊಂಡಿತ್ತು’ ಅಂತೆಲ್ಲಾ ಹೇಳುತ್ತಾ ಹೋದರು ಚನಾನಿರಾಜ.