Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Team Udayavani, Dec 15, 2024, 12:52 PM IST
ಬೆಳಗಾವಿ: ಗದಗದ ಅತ್ತೆ-ಸೊಸೆ ಕಾರ್ಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘನೆ ವ್ಯಕ್ತಪಡಿಸಿದ್ದು, ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ-ಸೊಸೆ ನಡುವೆ ಜಗಳ ಎನ್ನುತ್ತಿದ್ದ ವಿಪಕ್ಷಗಳಿಗೆ ಉತ್ತರ ನೀಡಿದ್ದಾರೆ ಎಂದು ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಹಣ ನೀಡುವ ಮೂಲಕ ಸರ್ಕಾರ ಅತ್ತೆ-ಸೊಸೆ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದ ವಿಪಕ್ಷಗಳಿಗೆ ಗದಗದ ಅತ್ತೆ-ಸೊಸೆ ಉತ್ತರ ನೀಡಿದ್ದು, ಗೃಹಲಕ್ಷ್ಮೀ ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ.
ಗದಗ ಜಿಲ್ಲೆಯ ಗಜೇಂದ್ರಗಡದ ಅತ್ತೆ, ಸೊಸೆ ಕಾರ್ಯ ನೋಡಿ ತುಂಬಾ ಖುಷಿಯಾಯಿತು. ಗೃಹಲಕ್ಷ್ಮೀ ಯೋಜನೆಯ ಹಣ ಅತ್ತೆಗೊ, ಸೊಸೆಗೊ ಎಂದು ಹೇಳುವ ಮೂಲಕ ವಿರೋಧ ಪಕ್ಷದವರು ಜಗಳ ಸೃಷ್ಟಿಸುವ ಕೆಲಸ ಮಾಡುತ್ತಿದ್ದರು. ಈಗ ಗದಗದ ಈ ಅತ್ತೆ, ಸೊಸೆ ಇಬ್ಬರೂ ಕೂಡಿಟ್ಟ ಹಣದಿಂದ ಬೊರವೆಲ್ ಕೊರೆಸಿ, ಮಾದರಿಯಾಗಿದ್ದಾರೆ ಎಂದರು.
ಗದಗದ ಅತ್ತೆ, ಸೊಸೆ ನಿಜವಾಗಿಯೂ ಆದರ್ಶವಾದಿಗಳಾಗಿದ್ದಾರೆ. ಬೋರ್ ವೆಲ್ ನಿಂದ ನೀರು ಹರಿಸಿ, ವ್ಯವಸಾಯ ಮಾಡುತ್ತಿದ್ದಾರೆ. ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವ ಸಲುವಾಗಿ ಎರಡು ಸಾವಿರ ಹಣ ಕೊಡಲಾಗುತ್ತಿದೆ. ಈ ರೀತಿಯ ಹಣವನ್ನು ಕೂಡಿಟ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವೆ ಮೆಚ್ಚುಗೆ ವ್ಯಕ್ತಪಡಿಸಿದರು.