ಬೆಂಗಳೂರು: ತಾಯಿಯ ಅನಾರೋಗ್ಯ ಹಾಗೂ ಸಾಲಬಾಧೆಗೆ ಮಾನಸಿಕ ಖನ್ನತೆಗೊಳಗಾಗಿದ್ದ ಕ್ಯಾಬ್ ಚಾಲಕನೊಬ್ಬ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.
ಮತ್ತೂಂದೆಡೆ ಪುತ್ರನ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಆತನ ತಾಯಿ ಕೂಡ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನು ವಾರ ನಡೆದಿದೆ.
ಕಾಮಾಕ್ಷಿಪಾಳ್ಯದ ಕಾವೇರಿಪುರ ನಿವಾಸಿ ಅರುಣ್ ಕುಮಾರ್ (37) ಆತ್ಮಹತ್ಯೆ ಮಾಡಿಕೊಂಡವ. ಈತನ ತಾಯಿ ಸರಸ್ವತಿ(73) ಮೃತರು. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮೃತ ಸ್ವರಸ್ವತಿಗೆ ಮೂವರು ಗಂಡ ಮಕ್ಕಳು. ಈ ಪೈಕಿ ಹಿರಿಯ ಮತ್ತು ಕೊನೆಯ ಮಗ ಪ್ರತ್ಯೇಕವಾಗಿ ವಾಸವಾಗಿದ್ದಾರೆ. 2ನೇ ಪುತ್ರ ಅರುಣ್ ಕುಮಾರ್ ಮತ್ತು ತಾಯಿ ಸರಸ್ವತಿ ಜತೆ ಕಾವೇರಿಪುರದಲ್ಲಿ ವಾಸವಾಗಿದ್ದರು. ಅರುಣ್ ಕುಮಾರ್ ಅವಿವಾಹಿತನಾಗಿದ್ದು, ಕ್ಯಾಬ್ ಚಾಲನಾಗಿದ್ದ. ತಾಯಿಯ ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ಮಧ್ಯೆ ಒಂದು ವರ್ಷದ ಹಿಂದೆ ಸ್ನಾನದ ಕೋಣೆಯಲ್ಲಿ ತಾಯಿ ಸರಸ್ವತಿ ಕಾಲು ಜಾರಿ ಬಿದ್ದು ಬೆನ್ನು ಮೂಳೆ ಮುರಿದುಕೊಂಡಿದ್ದು, ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು.
ಡೆತ್‌ನೋಟ್ ಪತ್ತೆ: ಸಾಲಬಾಧೆ ಹಾಗೂ ತಾಯಿಯ ಅನಾರೋಗ್ಯದಿಂದಾಗಿ ಅರುಣ್ ಕುಮಾರ್ ಮಾನಸಿಕ ಖನ್ನತೆಗೆ ಒಳಗಾಗಿದ್ದು, ಭಾನುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ 12.30ಕ್ಕೆ ಆತನ ಸಹೋದರ ಮನೆಗೆ ಬಂದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತ್ಮಹತ್ಯೆಗೂ ಮೊದಲು ಅರುಣ್ ಕುಮಾರ್ ಬರೆದಿದ್ದ ಡೆತ್‌ನೋಟ್ ಸಿಕ್ಕಿದ್ದು, ಅದರಲ್ಲಿ “ತನ್ನ ಸಾಲ, ತಾಯಿಯ ಅನಾರೋಗ್ಯದಿಂದ ಮಾನಸಿಕ ಖನ್ನತೆಗೊಳಗಾಗಿದ್ದೇನೆ’ ಎಂದು ಉಲ್ಲೇಖೀಸಿರುವುದು ಪತ್ತೆಯಾಗಿದೆ.
3 ತಾಸಿನ ಬಳಿಕ ತಾಯಿ ಸಾವು: ಮತ್ತೂಂದೆಡೆ ಪುತ್ರ ಅರುಣ್ ಕುಮಾರ್ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಅನಾರೋಗ್ಯಕ್ಕೊಳಗಾಗಿ ಹಾಸಿಗೆ ಹಿಡಿದಿದ್ದ ಆತನ ತಾಯಿ ಸರಸ್ವತಿ ಘಟನೆ ಬೆಳಕಿಗೆ ಬಂದ 3 ತಾಸಿನ ಬಳಿಕ ಮಲಗಿದ್ದ ಹಾಸಿಗೆಯಲ್ಲೇ ಮೃತಪಟ್ಟಿದ್ದಾರೆ. ಮಗನ ಆತ್ಮಹತ್ಯೆ ವಿಚಾರ ತಿಳಿದು ಅದರ ಆಘಾತದಿಂದ ಮೃತಪಟ್ಟಿರುವ ಸಾಧ್ಯತೆಯಿದೆ.