ಕೋಟ: ರಾಜ್ಯ ಸರಕಾರದ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಗೆ ಸಂಬಂಧಿಸಿದ ಪಶು ಆಸ್ಪತ್ರೆಗಳು, ಉಪಕೇಂದ್ರಗಳಲ್ಲಿ ಸಿಬಂದಿಯ ಕೊರತೆ ಕಾಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ 57 ವಿವಿಧ ಪಶು ವೈದ್ಯಕೀಯ ಹುದ್ದೆಗಳಲ್ಲಿ 30 ಸ್ಥಾನಗಳಿಗೆ ವೈದ್ಯರಿಲ್ಲ ಹಾಗೂ ಹಲವು ಕಡೆಗಳಲ್ಲಿ ಶೂನ್ಯ ಸಿಬಂದಿಯಿದ್ದಾರೆ. ಇದರಿಂದಾಗಿ ಜಾನುವಾರುಗಳಿಗೆ ಲಸಿಕೆ, ಚಿಕಿತ್ಸೆಗಾಗಿ ಹೈನುಗಾರರು ಪರದಾಡಬೇಕಾದ ಸ್ಥಿತಿ ಇದೆ.
ಶೂನ್ಯ ಸಿಬಂದಿ ಆಸ್ಪತ್ರೆಗಳು:
ಬ್ರಹ್ಮಾವರ ತಾ|ನಲ್ಲಿ ಒಟ್ಟು 8 ಮುಖ್ಯ ಆಸ್ಪತ್ರೆಗಳು, 7 ಉಪ ಕೇಂದ್ರಗಳಿವೆ. ಇದರಲ್ಲಿ ಪೇತ್ರಿ, ಧರ್ಮಸಾಲೆ, ಕೊಕ್ಕರ್ಣೆ, ಗುಂಡ್ಮಿ, ಹೆಗ್ಗುಂಜೆ, ಶಿರಿಯಾರ ಆಸ್ಪತ್ರೆಗಳಲ್ಲಿ ಪಶು ವೈದ್ಯಾಧಿಕಾರಿ, ಪಶು ವೈದ್ಯ ಪರೀಕ್ಷಕರು, ಡಿ ದರ್ಜೆ ಸಿಬಂದಿ ಎಲ್ಲ ಹುದ್ದೆಗಳು ಖಾಲಿ ಇದ್ದು ಶೂನ್ಯ ಸಿಬಂದಿಯಿದ್ದಾರೆ. ಇಲ್ಲಿಗೆ ಬೇರೆ ಆಸ್ಪತ್ರೆಗಳಿಂದ ಹೆಚ್ಚುವರಿ ನೆಲೆಯಲ್ಲಿ ವೈದ್ಯರನ್ನು ನೇಮಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ ಹಾಗೂ ಆಸ್ಪತ್ರೆಯ ಬಾಗಿಲು ತೆರೆಯುವ ಸಲುವಾಗಿ ಹೊರಗುತ್ತಿಗೆಯ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಇದ್ದು ಸುವ್ಯವಸ್ಥಿತ ಕಟ್ಟಡ, ಸಾವಿರಾರು ರೂ. ಮೌಲ್ಯದ ಔಷಧವಿದ್ದರೂ ಚಿಕಿತ್ಸೆಗೆ ವೈದ್ಯರೇ ಇಲ್ಲದ ಸ್ಥಿತಿ ಇದೆ.
ಖಾಸಗಿ ವೈದ್ಯರ ಸೇವೆ:
ಸರ ಕಾರಿ ಪಶು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದ ಕಾರಣ ನಿವೃತ್ತ ವೈದ್ಯರು ಹಾಗೂ ಕೆ.ಎಂ.ಎಫ್. ವೈದ್ಯರು ಸೇರಿದಂತೆ ವಿವಿಧ ಖಾಸಗಿ ವೈದ್ಯರ ಸೇವೆಯನ್ನು ಸಾವಿರಾರು ಹೈನುಗಾರರು ನೆಚ್ಚಿಕೊಂಡಿದ್ದಾರೆ.
ಕಾಯಿಲೆಗಳನ್ನು ನಿಯಂತ್ರಿಸುವ ವಿವಿಧ ಲಸಿಕೆ ಶಿಬಿರಗಳು ಹಾಗೂ ಇಲಾಖಾ ಕಾರ್ಯಕ್ರಮಗಳನ್ನು ನೆರವೇರಿಸಲು ಈಗ ಇರುವ ಸಿಬಂದಿಗೆ ಮಾತ್ರ ಕೆಲಸದ ಒತ್ತಡಕ್ಕೆ ಹೆಚ್ಚಾ ಗಿದೆ. ಜತೆಗೆ ಗ್ರಾ.ಪಂ. ನೋಡಲ್ ಅಧಿಕಾರಿ ಹುದ್ದೆ, ಚುನಾವಣೆ ಕರ್ತವ್ಯದ ತಲೆನೋವು ಕೂಡ ಈ ಸಿಬಂದಿಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಸರಕಾರದ ಗಮನಸೆಳೆದು ಖಾಲಿ ಇರುವ ಹುದ್ದೆಗಳಿಗೆ ಶೀಘ್ರ ವೈದ್ಯರನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.
ರಾಜ್ಯಾದ್ಯಂತ ಈ ಸಮಸ್ಯೆ ಇದ್ದು ಸಿಬಂದಿ ಕೊರತೆ ಕುರಿತು ಈಗಾಗಲೇ ಇಲಾಖೆಯ ಮುಖ್ಯಸ್ಥರಿಗೆ ವರದಿ ನೀಡಲಾಗಿದೆ. ಮುಂದೆ ಗುತ್ತಿಗೆ ಅಥವಾ ಖಾಯಂ ವೈದ್ಯರ ನೇಮಕಾತಿ ಸಂದರ್ಭ ಕೊರತೆಯನ್ನು ನೀಗಿಸುವ ಭರವಸೆ ನೀಡಿದ್ದಾರೆ
. –ಡಾ| ಅರುಣ್ ಕುಮಾರ್ ಶೆಟ್ಟಿ, ಆಡಳಿತ ಮುಖ್ಯ ಪಶು ವೈದ್ಯಾಧಿಕಾರಿ, ಬ್ರಹ್ಮಾವರ ತಾಲೂಕು
-ರಾಜೇಶ್ ಗಾಣಿಗ ಅಚ್ಲಾಡಿ