Advertisement
ನಗರದ ಹೊರವಲಯಗಳಿಂದ ದೂರದ ಸ್ಥಳಗಳ ಬಸ್ ಸಂಚಾರ ಕೈಗೊಳ್ಳಲಾಯಿತು. ನಗರದ ಕೆಲವೇ ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದ್ದು ಬಿಟ್ಟರೆ ಬಹುತೇಕ ಶಾಲಾ-ಕಾಲೇಜುಗಳು, ಪೆಟ್ರೋಲ್ ಬಂಕ್, ಚಿತ್ರಮಂದಿರ, ಬ್ಯಾಂಕ್, ಸರಕಾರಿ ಕಚೇರಿಗಳು, ಹೊಟೇಲ್‌ಗಳು, ಮಾರಾಟ ಮಳಿಗೆಗಳು ಬಹುತೇಕ ಎಂದಿನಂತೆ ಕಾರ್ಯನಿರ್ವಹಿಸಿದವು.
Related Articles
Advertisement
ಕನ್ನಡ ಪರ ಹೋರಾಟಗಾರರು ಕೋರ್ಟ್ ವೃತ್ತ, ಕೇಶ್ವಾಪುರ, ದೇಶಪಾಂಡೆ ನಗರ ಸೇರಿದಂತೆ ಕೆಲವೆಡೆ ಅಂಗಡಿ, ಕಚೇರಿ ಹಾಗೂ ಶೋರೂಮ್‌ಗಳನ್ನು ಬಂದ್ ಮಾಡಿಸಿದರಾದರೂ, ಹೋರಾಟಗಾರರು ನಿರ್ಗಮಿಸಿದ ಕೆಲ ಹೊತ್ತಿನ ನಂತರ ಅಂಗಡಿಗಳು ಬಾಗಿಲು ತೆರೆದಿರುವುದು ಕಂಡು ಬಂತು.
ಸಂಸದರ ಮನೆಗೆ ಭದ್ರತೆ: ಬಂದ್ ಹಿನ್ನೆಲೆಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರ ನಿವಾಸ ಹಾಗೂ ಕಚೇರಿಗೆ ಭದ್ರತೆ ಒದಗಿಸಲಾಗಿತ್ತು. ಸಂಸದ ಜೋಶಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಕೇಶ್ವಾಪುರದ ಅನಂತ ಎಕ್ಸಿಕ್ಯೂಟಿವ್ ಹೊಟೇಲ್‌ಗೆ ಮುತ್ತಿಗೆ ಹಾಕಲು ಹೋರಾಟಗಾರರು ಆಗಮಿಸಿದರಾದರೂ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.
ಕೇಶ್ವಾಪುರ ರಸ್ತೆಯಿಂದ ಹೊಟೇಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಪೊಲೀಸ್ ಜೀಪ್ ನಿಲ್ಲಿಸಿದ್ದರಿಂದ ಹೋರಾಟಗಾರರು ಅಲ್ಲಿಯೇ ಕೆಲ ಹೊತ್ತು ನಿಂತು ಅಲ್ಲಿಂದ ನಿರ್ಗಮಿಸಿದರು. ಬಿಎಸ್‌ಎನ್‌ಎಲ್ ಕಚೇರಿಗೆ ಮುತ್ತಿಗೆ ಯತ್ನ: ಹೋರಾಟಗಾರರು ರೈಲ್ವೆ ನಿಲ್ದಾಣ ಸಮೀಪದ ಬಿಎಸ್‌ಎನ್ ಎಲ್ ಕಚೇರಿಗೆ ಬೀಗ ಹಾಕಲು ಹೋಗಿದ್ದರು.
ಆದರೆ ಅಲ್ಲಿ ಸಿಬ್ಬಂದಿ ಒಳಗೆ ಕೆಲಸ ಮಾಡುತ್ತಿದ್ದು, ಬಾಗಿಲು ಮುಚ್ಚಿದ್ದರಿಂದ ಹೋರಾಟಗಾರರು ಹಿಂದಿರುಗಬೇಕಾಯಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೇಂದ್ರೆ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಇಲ್ಲದಿದ್ದರಿಂದ ಅಟೋದವರ ಆಟಾಟೋಪ ಜೋರಾಗಿತ್ತು.
ಹುಬ್ಬಳ್ಳಿಯಿಂದ ಧಾರವಾಡ ದವರೆಗೆ ಪ್ರತಿಯೊಬ್ಬ ಪ್ರಯಾಣಿಕರಿಗೆ ತಲಾ 100ರೂ. ಪಡೆದರೆ, ನವನಗರದಿಂದ ಚನ್ನಮ್ಮ ವೃತ್ತದವರೆಗೆ ತಲಾ 50 ರೂ. ಪಡೆದರು. ಬಸ್‌ಗಳ ಸೇವೆ ಇರದಿದ್ದರಿಂದ ಅನೇಕರು ರೈಲ್ವೆಗಳ ಮೂಲಕ ಪ್ರಯಾಣಿಸಿದರು. ಹಳೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ಅನೇಕರು ನಡೆಯುತ್ತಲೇ ಹೋಗುತ್ತಿದ್ದುದು ಕಂಡು ಬಂತು.
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಮಾಡುವುದಾಗಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದರು. ಆದರೆ ಹುಬ್ಬಳ್ಳಿಯಲ್ಲಿ ಚನ್ನಮ್ಮ ವೃತ್ತದಲ್ಲಿದ್ದ ಹೋರಾಟಗಾರರು ತಮ್ಮ ಹೋರಾಟವನ್ನು ಮಧ್ಯಾಹ್ನ 2:30ರ ವೇಳೆಗೆ ಕೊನೆಗೊಳಿಸಿದರು. ಮಳೆ ಕೂಡ ಹೋರಾಟಕ್ಕೆ ಅಡ್ಡಿಯಾಯಿತು.
ಮಳೆ ಆರಂಭವಾಗುತ್ತಿದ್ದಂತೆಯೇ ಪಕ್ಕದ ಅಂಗಡಿಗಳನ್ನು ಆಶ್ರಯಿಸುತ್ತಿದ್ದ ಹೋರಾಟಗಾರರು ಮಳೆ ನಿಂತ ಮೇಲೆ ವೃತ್ತಕ್ಕೆ ಬರುತ್ತಿದ್ದರು. ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ, ಜೆಡಿಎಸ್, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ದಳ, ಕರ್ನಾಟಕ ಸಂಗ್ರಾಮ ಸೇನೆ, ಆರ್ಯವೈಶ್ಯ ಸಂಘ, ಹುಬ್ಬಳ್ಳಿ ಅಟೋ ಚಾಲಕರ ಹಾಗೂ ಮಾಲಿಕರ ಸಂಘ, ಲಕ್ಷ್ಮಣ ಹಿರೇಕೆರೂರ ಅಟೋ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ರಾಜಣ್ಣ ಕೊರವಿ, ಸಿದ್ದು ತೇಜಿ, ವೀರಣ್ಣ ಮಳಗಿ, ಮಹೇಶ ಪತ್ತಾರ, ಅಮೃತ ಇಜಾರಿ, ಹೇಮನಗೌಡ ಬಸನಗೌಡರ, ಮಂಜುನಾಥ ಲೂತಿಮಠ, ಶಿವಣ್ಣ ಹುಬ್ಬಳ್ಳಿ, ಕುಮಾರಸ್ವಾಮಿ ಹಿರೇಮಠ, ಶೇಖರಯ್ಯ ಮಠಪತಿ, ನಾಗರಾಜ ಬಡಿಗೇರ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.