Advertisement

ಮಾ.18ಕ್ಕೆ ಮೊದಲ ಸುತ್ತಿನಲ್ಲಿ 20- 22 ಬಿಜೆಪಿ ಅಭ್ಯರ್ಥಿಗಳ ಘೋಷಣೆ

02:14 AM Mar 14, 2019 | |

ಬೆಂಗಳೂರು: ರಾಜ್ಯದ ಬಿಜೆಪಿ ಸಂಸದರ ಪೈಕಿ ಬಹುತೇಕರು ಮತ್ತೆ ಸ್ಪರ್ಧಿಸಲು ಟಿಕೆಟ್‌ ಸಿಗಲಿದ್ದು, ಮಾ. 18ರಂದು ಮೊದಲ ಸುತ್ತಿನಲ್ಲಿ 20ರಿಂದ 22 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
 ರಾಜ್ಯದಲ್ಲಿ ಸದ್ಯ 15 ಬಿಜೆಪಿ ಸಂಸದರಿದ್ದು, (ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಅವರ ನಿಧನದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರ ಸ್ಥಾನ ತೆರವಾಗಿದೆ) ಬಹುತೇಕ ಎಲ್ಲರಿಗೂ ಟಿಕೆಟ್‌ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪತ್ರಿಕಾ ಗೋಷ್ಠಿಯಲ್ಲಿ ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

Advertisement

ಮಾ. 15ರಂದು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದೆ. ಮಾ. 18ರಂದು ಮುಖಂಡರೊಂದಿಗೆ ದಿಲ್ಲಿಗೆ ತೆರಳಿ ಪಕ್ಷದ ಕೇಂದ್ರ ಚುನಾವಣ ಸಮಿತಿಯಲ್ಲಿ ಚರ್ಚಿಸಿ ಮೊದಲ ಹಂತದಲ್ಲಿ 20ರಿಂದ 22 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಚಿಂತನೆ ಇದೆ ಎಂದು ಹೇಳಿದರು.
ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಪತ್ನಿ ತೇಜಸ್ವಿನಿ ಅನಂತ ಕುಮಾರ್‌ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿ ಯುವ ಸಾಧ್ಯತೆ ಇದೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

“ಆಪರೇಷನ್‌ ಕಮಲ’ ಕುರಿತ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಅವರು, ಡಾ| ಉಮೇಶ್‌ ಜಾಧವ್‌ ಅವರು ಪಕ್ಷ ಸೇರಿದ್ದಾರೆ. ಕಾಂಗ್ರೆಸ್‌ನ ಒಂದಿಬ್ಬರು ಅತೃಪ್ತರು ಪಕ್ಷ ಸೇರಬಹುದು. ನಾವು ಯಾರನ್ನೂ ಸೆಳೆದಿಲ್ಲ. ಡಾ| ಉಮೇಶ್‌ ಜಾಧವ್‌ ರೀತಿಯಲ್ಲೇ ಕಾಂಗ್ರೆಸ್‌ನ ಯಾರಾದರೂ ಬಿಜೆಪಿ ಸೇರಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಇನ್ನೂ ಎರಡು ದಿನ ಕಾಯಿರಿ. ನಿಮಗೆ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್‌ನ ಅತೃಪ್ತ ಶಾಸಕರಿಂದ ವಿಪ್‌ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದ ದೂರಿನ ವಿಚಾರಣೆ ಮುಂದೂಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕಾನೂನು ತಜ್ಞರೆಲ್ಲ ಉಮೇಶ್‌ ಜಾಧವ್‌ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವುದೇ ತೊಂದರೆ ಇಲ್ಲ ಎಂಬ ಅಭಿಪ್ರಾಯ ಪಟ್ಟಿದ್ದಾರೆ ಎಂದರು.

ಸುಮಲತಾ ನಿಲುವು ಆಧರಿಸಿ ತೀರ್ಮಾನ
ಸುಮಲತಾ ಅಂಬರೀಷ್‌ ಅವರು ಯಾವ ನಿಲುವು ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ದ್ದೇವೆ. ಒಂದೆರಡು ದಿನಗಳಲ್ಲಿ ಅವರು ಕೈಗೊಳ್ಳುವ ನಿಲುವು ಆಧರಿಸಿ ರಾಷ್ಟ್ರೀಯ ನಾಯಕ ರೊಂದಿಗೂ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಪಕ್ಷದ ಅಭ್ಯರ್ಥಿಗಳ ಆಯ್ಕೆ,  ಮಂಡ್ಯ ಸಹಿತ  ಇತರ ಕ್ಷೇತ್ರದಗಳಲ್ಲಿನ ಸ್ಪರ್ಧೆ, ಸುಮಲತಾ ನಿರ್ಧಾರ ಮತ್ತಿತರ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ಬಯಸುವುದಿಲ್ಲ. ವರಿಷ್ಠರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

Advertisement

ಇತಿಮಿತಿ ಇರಬೇಕು
ಕುಟುಂಬ ರಾಜಕಾರಣದ ಬಗ್ಗೆ ನಾನು ಚರ್ಚೆ ಮಾಡಲು ಇಚ್ಛಿಸುವುದಿಲ್ಲ. ಆದರೆ ಕುಟುಂಬ ರಾಜಕಾರಣಕ್ಕೂ ಇತಿಮಿತಿ ಇರಬೇಕು. ಆ ಇತಿಮಿತಿ ದಾಟಿ ಹೋಗುವ ಪ್ರಯತ್ನವನ್ನು ದೇವೇಗೌಡ ಕುಟುಂಬ ಮಾಡುತ್ತಿದೆ ಎಂಬುದು ಜನಸಾಮಾನ್ಯರ ಆಕ್ರೋಶ ಎಂದು ಬಿಎಸ್‌ವೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next