Advertisement

ವಿಂಡೀಸ್‌ ಆಟಗಾರರಿಂದ ಹೆಚ್ಚಿನ ಲಾಭ: ರೋಹಿತ್‌

06:00 AM Apr 19, 2018 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌ ಸಹಿತ ಐಪಿಎಲ್‌ನ ಹೆಚ್ಚಿನೆಲ್ಲ ತಂಡಗಳಿಗೆ ವೆಸ್ಟ್‌ ಇಂಡೀಸ್‌ನ ಕ್ರಿಕೆಟಿಗರ ಸ್ಫೋಟಕ ಆಟದಿಂದಾಗಿ ಹೆಚ್ಚಿನ ಲಾಭವಾಗಿದೆ. ಟ್ವೆಂಟಿ20 ಮಾದರಿಯ ಕ್ರಿಕೆಟಿಗೆ ಬೇಕಾದ ಒಳ್ಳೆಯ ಗುಣಮಟ್ಟದ ಆಟ ಅವರಿಗೆ ಕರಗತವಾಗಿದೆ. ಅವರಿಗೆ ಈ ಕುರಿತು ಯಾವುದೇ ಮಾರ್ಗದರ್ಶನದ ಅಗತ್ಯವೂ ಇಲ್ಲ. ಚೆಂಡನ್ನು ಶಕ್ತಿಯುತವಾಗಿ ಹೊಡೆಯುವ ಸಾಮರ್ಥ್ಯ ಹೊಂದಿರುವ ವಿಂಡೀಸ್‌ ಆಟಗಾರರು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಬಲ್ಲರು ಮತ್ತು ಚುರುಕಿನ ಫೀಲ್ಡಿಂಗ್‌ಗೂ ಸೈ ಎನಿಸಿಕೊಂಡಿದ್ದಾರೆ.

Advertisement

ಆಲ್‌ರೌಂಡರ್‌ ಕೈರನ್‌ ಪೋಲಾರ್ಡ್‌ 2010 ರಿಂದ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಲವೊಂದು ಪಂದ್ಯಗಳಲ್ಲಿ ಗೆಲುವಿಗೆ ಕಠಿನ ಪರಿಸ್ಥಿತಿಯಿದ್ದರೂ ತಂಡವನ್ನು ದಡ ಮುಟ್ಟಿಸಿದ ಸಾಧನೆಯನ್ನು ಅವರು ಮಾಡಿದ್ದಾರೆ. ಕಳೆದ ಕೆಲವು ವರ್ಷ ಲೆಂಡ್ಲ್ ಸಿಮನ್ಸ್‌ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದ್ದರು. ಆಶ್ಚರ್ಯವೆಂಬಂತೆ ಮುಂಬೈ ಈ ಬಾರಿ ಸಿಮನ್ಸ್‌ ಅವರನ್ನು ಉಳಿಸಿಕೊಂಡಿಲ್ಲ. ಆದರೆ ಟ್ರಿನಿಡಾಡ್‌ನ‌ ಇನ್ನೋರ್ವ ಆಕ್ರಮಣಕಾರಿ ಆಟಗಾರ ಎವಿನ್‌ ಲೆವಿಸ್‌ ಅವರನ್ನು ಸೇರಿಸಿಕೊಂಡಿತ್ತು. 2016ರ ಆಗಸ್ಟ್‌ನಲ್ಲಿ ಭಾರತ ವಿರುದ್ಧ ನಡೆದ ಟಿ20 ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿದ್ದ ಲೆವಿಸ್‌ ಕಳೆದ ವರ್ಷ ಕಿಂಗ್‌ಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಅಜೇಯ 125 ರನ್‌ ಸಿಡಿಸಿರುವುದು ರೋಹಿತ್‌ ಅವರಿಗೆ ಮೆಚ್ಚುಗೆಯಾಗಿತ್ತು.

ಮಂಗಳವಾರ ವಾಂಖೆಡೆಯಲ್ಲಿ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಲೆವಿಸ್‌ 42 ಎಸೆತಗಳಿಂದ 65 ರನ್‌ ಸಿಡಿಸಿ ತಂಡದ ದೊಡ್ಡ ಮೊತ್ತಕ್ಕೆ ನೆರವಾಗಿದ್ದರು. ಕೆರಿಬಿಯನ್‌ನ ಆರಂಭಿಕ ಆಟಗಾರನಿಗೆ ನೀವು ಏನು ಸಲಹೆ ನೀಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್‌ ಅವರು ವೆಸ್ಟ್‌ಇಂಡೀಸ್‌ನ ಆಟಗಾರರಿಗೆ ಮಾರ್ಗದರ್ಶನ ನೀಡುವ ಅಗತ್ಯವಿಲ್ಲ. ಅವರು ಮುಕ್ತವಾಗಿ ಆಡಲು ನಾವು ಅವಕಾಶ ಕಲ್ಪಿಸಬೇಕು. ಹೀಗೆ ಆಡಬೇಕು ಎಂದು ಹೇಳಿದರೆ ಅವರಿಗೆ ಸಮಸ್ಯೆಯಾಗಬಹುದು. ಅದಕ್ಕಿಂತ ಬದಲು ಅವರಿಗೆ ಇಷ್ಟವಾದ ರೀತಿಯಲ್ಲಿ ಆಡಲು ಬಿಡಬೇಕು ಎಂದರು.

ಕಳೆದ ಆರು ವರ್ಷ ಪೋಲಾರ್ಡ್‌ ಜತೆಗಿನ ಮಾತುಕತೆಯಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ನಾನು ಆಟದ ಬಗ್ಗೆ ಅವರಿಗೆ ಏನನ್ನೂ ಹೇಳಲಿಲ್ಲ. ಅವರಿಗೆ ಯಾವ ರೀತಿ ಆಡಬೇಕೆಂದು ತಿಳಿದಿದೆ. ಹಾಗೆಯೇ ಲೆವಿಸ್‌ ಅವರ ಪಾಡಿಗೆ ಬಿಟ್ಟಿದ್ದೇನೆ ಎಂದು ರೋಹಿತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next