ಬಾಬ್ರಿ ಮಸೀದಿಯಿಂದ ಶುರುವಾದ ಮಂದಿರ-ಮಸೀದಿ ವಿವಾದ ಈಗ ಜ್ಞಾನವಾಪಿವರೆಗೆ ಮುಂದುವರಿದಿದೆ. ಸದ್ಯ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವೀಡಿಯೋ ಸರ್ವೇ ಮುಗಿದಿದ್ದು ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಅತ್ತ ಮಥುರಾದಲ್ಲೂ ಶ್ರೀಕೃಷ್ಣ ಜನ್ಮಭೂಮಿ ವಿಚಾರ ಸಂಬಂಧ ವಿಚಾರಣೆ ನಡೆಸಲು ಕೋರ್ಟ್ ಕೂಡ ಸಮ್ಮತಿಸಿದೆ. ಇದರ ನಡುವೆಯೇ ದೇಶಾದ್ಯಂತ ಇನ್ನೂ ಹಲವು ಮಸೀದಿಗಳಲ್ಲಿ ವಿವಾದ ಮುಂದುವರಿದಿದೆ. ಇತಿಹಾಸದಲ್ಲಿ ಇವು ಮಂದಿರಗಳೇ ಆಗಿದ್ದವು. ಇವುಗಳ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಸರ್ವೇ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಕೆಲವು ಮಸೀದಿಗಳ ವಿಚಾರದಲ್ಲಿ ಕೋರ್ಟ್ ವಿಚಾರಣೆಗೆ ಒಪ್ಪದಿದ್ದರೆ, ಇನ್ನೂ ಕೆಲವಕ್ಕೆ ಒಪ್ಪಿಗೆ ನೀಡಿದೆ. ಹೀಗಾಗಿ ದಿನದಿಂದ ದಿನಕ್ಕೆ ಮಂದಿರ-ಮಸೀದಿ ವಿವಾದ ಮುಂದುವರಿಯುತ್ತಲೇ ಇದೆ.
ಬಾಬ್ರಿ ಮಸೀದಿ
ಸ್ವಾತಂತ್ರ್ಯ ಸಿಕ್ಕ ಎರಡು ವರ್ಷದ ಬಳಿಕ ಶುರುವಾದ ವಿವಾದವಿದು. 1949ರಲ್ಲಿ ಬಾಬ್ರಿ ಮಸೀದಿಯ ಒಳಗೆ ರಾಮನ ವಿಗ್ರಹವೊಂದನ್ನು ಇಡಲಾಗುತ್ತದೆ. ಇಲ್ಲಿಗೆ ಪೂಜೆ ಮಾಡುವ ಸಲುವಾಗಿ ಇಬ್ಬರು ಅರ್ಚಕರನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಆದರೆ ಜನತೆ ಹೊರಗಿನಿಂದಲೇ ಈ ವಿಗ್ರಹ ನೋಡಬಹುದಾಗಿತ್ತು. 1986ರ ಜ. 31ರಂದು ಫೈಜಾಬಾದ್‌ನ ಜಿಲ್ಲಾ ನ್ಯಾಯಾಧೀಶರೊಬ್ಬರ ಮುಂದೆ ಅಯೋಧ್ಯೆ ರಾಮಮಂದಿರದ ಬಗ್ಗೆ ಅರ್ಜಿಯೊಂದು ಸಲ್ಲಿಕೆಯಾಗುತ್ತದೆ. ಮಾರನೇ ದಿನ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ, ನ್ಯಾಯಾಧೀಶರು ಬಾಬ್ರಿ ಮಸೀದಿಯ ಗೇಟನ್ನು ತೆರೆದು, ಹಿಂದೂಗಳಿಗೆ ಪೂಜೆ ನಡೆಸಲು ಅವಕಾಶ ಮಾಡಿಕೊಡುತ್ತಾರೆ. ಬಳಿಕ ವಿವಾದ ಹೀಗೇ ಸಾಗಿ, 1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಗುತ್ತದೆ. ಬಳಿಕ ಭಾರತ ಪುರಾತತ್ವ ಇಲಾಖೆ ಈ ಸ್ಥಳದಲ್ಲಿ ಸರ್ವೇ ಮಾಡಿ, ಇಲ್ಲಿ ಹಿಂದೆ ಮಂದಿರವಿತ್ತು ಎಂದು ಹೇಳುತ್ತದೆ. ಕಡೆಗೆ ಸುಪ್ರೀಂ ಕೋರ್ಟ್ ಇಲ್ಲಿ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದೆ.
ಮಥುರಾ ಶಾಹಿ ಈದ್ಗಾ ಮಸೀದಿ
ಅಯೋಧ್ಯೆ ವಿವಾದ ಮುಗಿದ ಅನಂತರ ಮೊದಲಿಗೆ ಸದ್ದಾಗುವುದು ಇದೇ. ಏಕೆಂದರೆ ಮಥುರಾ ಸ್ಥಳೀಯ ಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟ್‌ನಲ್ಲಿ ಹತ್ತಾರು ಕೇಸ್‌ಗಳು ದಾಖಲಾಗುತ್ತವೆ. ಹಿಂದೂಗಳು ಹೇಳುವ ಪ್ರಕಾರ, ಇದು ಶ್ರೀಕೃಷ್ಣನ ಜನ್ಮಸ್ಥಳವಾಗಿದ್ದು, ಇಲ್ಲೇ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ನಮಗೆ ಈ ಭೂಮಿ ಕೊಡಬೇಕು, ಪೂಜೆಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಲಾಗುತ್ತದೆ. ಮೊದಲ ಕೇಸ್ 2020ರ ಸೆಪ್ಟಂಬರ್‌ನಲ್ಲಿ ಸಲ್ಲಿಕೆಯಾಗುತ್ತದೆ. ರಂಜನ್ ಅಗ್ನಿಹೋತ್ರಿ ಎಂಬ ವಕೀಲರ ಮೂಲಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದನ್ನು ತಳ್ಳಿಹಾಕಲಾಗುತ್ತದೆ. ಮತ್ತೆ ಮೇಲ್ಮನವಿ ಸಲ್ಲಿಸಿದ್ದು, ಇದನ್ನು ಸ್ಥಳೀಯ ಕೋರ್ಟ್ ಸ್ವೀಕಾರ ಮಾಡಿರುತ್ತದೆ. ಜತೆಗೆ ಗುರುವಾರ ತೀರ್ಪು ನೀಡಿ, ಶಾಹಿ ಈದ್ಗಾ ಮಸೀದಿ ಜಾಗದ ಬಗ್ಗೆ ವಿಚಾರಣೆ ನಡೆಸಬಹುದು ಎಂದು ಹೇಳುತ್ತದೆ.
ಜ್ಞಾನವಾಪಿ ಮಸೀದಿ
ವಾರಾಣಸಿಯಲ್ಲಿರುವ ಮೊಘಲ್ ಕಾಲದ ಮಸೀದಿ ಇದು. ಆದರೆ 1991ರಲ್ಲಿ ಸ್ವಯಂಭು ವಿಶ್ವೇಶ್ವರ ದೇವರ ಭಕ್ತರೊಬ್ಬರು ಸಿವಿಲ್ ಕೋರ್ಟ್‌ನಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಸರ್ವೇಯಾಗಬೇಕು ಎಂದು ಅರ್ಜಿ ಸಲ್ಲಿಸುತ್ತಾರೆ. ಇವರ ಪ್ರಕಾರ, ಜ್ಞಾನವಾಪಿ ಮೂಲತಃ ಮಸೀದಿಯಲ್ಲ. ಇದು ಮಂದಿರ ಎಂದು ಪ್ರತಿಪಾದಿಸುತ್ತಾರೆ. ಹೀಗಾಗಿ ಇಲ್ಲಿ ದೇವರ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಾರೆ. ಆಗಿನಿಂದ ಈಗಿನ ವರೆಗೂ ಈ ಮಸೀದಿ ಸಂಬಂಧ ವಿವಿಧ ಕೋರ್ಟ್‌ಗಳಲ್ಲಿ ಕಾನೂನು ಸಮರ ನಡೆಯುತ್ತದೆ. ಆದರೆ 2021ರ ಆಗಸ್ಟ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಯಲ್ಲಿ ಮಸೀದಿಯೊಳಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶೃಂಗಾರ ಗೌರಿ, ಗಣೇಶ, ಹನುಮಾನ್‌ನ ವಿಗ್ರಹಗಳಿವೆ ಎಂದು ಪ್ರತಿಪಾದಿಸಲಾಗುತ್ತದೆ. ಅದರಂತೆಯೇ ಈಗ ವೀಡಿಯೋಗ್ರಫಿ ನಡೆಸಲಾಗಿದ್ದು, ಸದ್ಯ ವಿವಾದ ಸದ್ದು ಮಾಡುತ್ತಿದೆ.
ಜಾಮೀಯಾ ಮಸೀದಿ
ಕೇವಲ ಉತ್ತರ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿಯೂ ದೇಗುಲವೋ ಅಥವಾ ಮಂದಿರವೋ ಎಂಬ ಕುರಿತ ಕೆಲವು ವಿವಾದಗಳಿವೆ. ಅಂದರೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮೀಯಾ ಮಸೀದಿ ಹಿಂದೆ ಹನುಮಾನ್ ದೇಗುಲವಾಗಿತ್ತು. ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ ಕಡೆಯಿಂದ ಸ್ಥಳದ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ. ಹಿಂದೂ ಸಂಘಟನೆಗಳ ಪ್ರಕಾರ, ಟಿಪ್ಪು ಸುಲ್ತಾನ್ ಕಾಲದಲ್ಲಿ ಇಲ್ಲಿದ್ದ ಹನುಮಾನ್ ದೇಗುಲವನ್ನು ಕೆಡವಿ, ಇಲ್ಲಿ ಮಸೀದಿ ನಿರ್ಮಿಸಲಾಗಿದೆ. ಒಂದು ವೇಳೆ ರಾಜ್ಯ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಹೈಕೋರ್ಟ್ ಮೊರೆಹೋಗುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.
ತಾಜ್‌ಮಹಲ್
ಆಗ್ರಾದಲ್ಲಿರುವುದು ತಾಜ್ ಮಹಲ್ ಅಲ್ಲ, ತೇಜೋಆಲಯ ಎಂಬುದು ಕೆಲವರ ವಾದ. ಈ ಸಂಬಂಧ ಅಲಹಾಬಾದ್ ಹೈಕೋರ್ಟ್‌ಗೆ ಬಿಜೆಪಿ ನಾಯಕ ರಜನೀಶ್ ಸಿಂಗ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರು ತಮ್ಮ ಅರ್ಜಿಯಲ್ಲಿ ತಾಜ್‌ಮಹಲ್ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯಿಂದ ಸರ್ವೇ ನಡೆಸಬೇಕು. ಮುಚ್ಚಿರುವ 22 ಕೋಣೆಗಳ ಒಳಗೆ ಏನಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದನ್ನು ತಿರಸ್ಕರಿಸಿರುವ ಕೋರ್ಟ್, ಈ ಕುರಿತಂತೆ ಇತಿಹಾಸಕಾರರು ನಿರ್ಧಾರ ಕೈಗೊಳ್ಳಲಿ, ನಾವಲ್ಲ ಎಂದು ಹೇಳಿದೆ.
ಕುತುಬ್ ಮಿನಾರ್
ಕುತುಬ್ ಮಿನಾರ್ ಕುರಿತಂತೆಯೂ ವಿವಾದಗಳಿವೆ. 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ, ಕುತುಬ್ ಮಿನಾರ್‌ನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ದಿನಗಳಂದು ಪೂಜೆ ಮಾಡಬಹುದು ಎಂದು ಆದೇಶ ನೀಡಿದೆ. ಅಂದರೆ ಹಿಂದೂಗಳ ಪ್ರಕಾರ, ಕುತುಬ್ ಮಿನಾರ್ ಅಂದರೆ ಸರಸ್ವತಿ ದೇಗುಲವಾಗಿದ್ದು, ಇದನ್ನು ಬೋಜಶಾಲೆ ಎಂದು ಕರೆಯಲಾಗುತ್ತದೆ. ಆದರೆ ಮುಸ್ಲಿಮರು ಇದು ಮಸೀದಿಯೇ ಎಂದು ಹೇಳುತ್ತಿದ್ದಾರೆ. ಇದೇ ವರ್ಷದ ಮೇ 11ರಂದು ಈ ವಿವಾದದ ಬಗ್ಗೆ ವಿಚಾರಣೆ ನಡೆಸಿರುವ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್ ನೀಡಿದೆ. ಹಾಗೆಯೇ 2021ರ ನವೆಂಬರ್‌ನಲ್ಲಿ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸ್ಥಳೀಯ ಕೋರ್ಟ್ ತಿರಸ್ಕರಿಸಿತ್ತು. ಆದರೆ ಇದೇ ಮೇ 24ರಂದು ದಿಲ್ಲಿಯ ಸಾಕೇತ್ ಕೋರ್ಟ್ ಹಿಂದೂಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲಿದೆ.
ಮಳಲಿ: ಮಸೀದಿ ಕಟ್ಟಡದ ಸ್ಥಳದಲ್ಲಿ ದೇವಸ್ಥಾನ ಹೋಲುವ ರಚನೆ ಪತ್ತೆ?
ಮಂಗಳೂರು ತಾಲೂಕಿನ ಗಂಜೀಮಠ ಗ್ರಾ.ಪಂ. ವ್ಯಾಪ್ತಿಯ ಮಳಲಿ ಪೇಟೆಯ ಮಸೀದಿ ಸ್ಥಳದಲ್ಲಿ ಪ್ರಾಚೀನ ದೇವಸ್ಥಾನದ ಮಾದರಿಯನ್ನು ಹೋಲುವ ರಚನೆ ಕಾಣಿಸಿದೆ. ಮಸೀದಿಯನ್ನು ನವೀಕರಿಸುವ ಉದ್ದೇಶಕ್ಕಾಗಿ ಕೆಲಸ ನಡೆಯುತ್ತಿದ್ದ ಸಂದರ್ಭ ದೇಗುಲ ಮಾದರಿಯ ರಚನೆ ಎ. 21ರಂದು ಸಾರ್ವಜನಿಕರಿಗೆ ಕಾಣಿಸಿತ್ತು. ಅನಂತರ ವಿವಿಧ ಸಂಘಟನೆಗಳು, ಪೊಲೀಸರು ಭೇಟಿ ನೀಡಿದ್ದು, ತತ್‌ಕ್ಷಣದಿಂದಲೇ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಲವರು ಇದೊಂದು ದೇಗುಲದ ರಚನೆ ಎಂದಿದ್ದರೆ, ಇನ್ನು ಕೆಲವರು ಇದೊಂದು ಬಸದಿಯ ರಚನೆಯಂತೆ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲಿ ಸದ್ಯ ಯಾವುದೇ ಕಾಮಗಾರಿ ನಡೆಸದಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ನಡುವೆ ಕೋರ್ಟ್‌ಗೆ ಕೂಡ ದೂರು ನೀಡಲಾಗಿದ್ದು, ಅಲ್ಲಿ ತಡೆ ಯಾಜ್ಞೆ ನೀಡಲಾಗಿದೆ. ಮುಂದಿನ ವಿಚಾರಣೆ ಜೂ. 3ಕ್ಕೆ ನಿಗದಿಯಾಗಿದೆ. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆ ಇರಿಸಿ ಧಾರ್ಮಿಕ ಮಹತ್ವ ತಿಳಿದುಕೊಳ್ಳಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ.