Advertisement

ಬೆಳಗ್ಗಿನ ಆಜಾನ್‌ ಬಗ್ಗೆ ಉಲಮಾ ಸಭೆಯಲ್ಲಿ ತೀರ್ಮಾನ: ಶಫಿ

11:32 PM May 15, 2022 | Team Udayavani |

ಉಡುಪಿ: ಸುಪ್ರೀಂ ಕೋರ್ಟ್‌ ಆದೇಶದಂತೆ ಆಜಾನ್‌ ವಿಷಯಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಮಾರ್ಗಸೂಚಿ ಜಾರಿ ಮಾಡಿದ್ದು, ಧ್ವನಿವರ್ಧಕಗಳ ಡೆಸಿಬಲ್‌ ಕಡಿಮೆ ಮಾಡಲಾಗಿದೆ. ಹಗಲು ಹೊತ್ತಿನಲ್ಲಿ ಆಜಾನ್‌ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಮುಂಜಾನೆಯ ಆಜಾನ್‌ ಹೇಗೆ ನಡೆಸುವುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಷಯ ಷರೀಯತ್‌ಗೆ ಸಂಬಂಧಪಟ್ಟದ್ದಾಗಿರುವುದರಿಂದ ಸೋಮವಾರ ಮತ್ತು ಮಂಗಳವಾರ ಉಡುಪಿ, ದ.ಕ. ಜಿಲ್ಲೆಯ ಎಲ್ಲ ಉಲಮಾಗಳೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್‌.ಕೆ. ಮೊಹಮ್ಮದ್‌ ಶಫಿ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ವಕ್ಫ್ ಮಂಡಳಿ ರಾಜ್ಯದ ಎಲ್ಲ ಮಸೀದಿಗಳಿಗೆ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಮೈಕ್‌ ಶಬ್ದ ಯಾವ ಪ್ರದೇಶದಲ್ಲಿ ಎಷ್ಟು ಡೆಸಿಬಲ್‌ ಇರಬೇಕು ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ಸುತ್ತೋಲೆ ಹೊರಡಿಸಿದೆ. ಕೋರ್ಟ್‌ ಆದೇಶ ಪಾಲಿಸುವುದು ಎಲ್ಲರ ಕರ್ತವ್ಯ ಎಂದರು.

ಐಎಎಸ್‌, ಐಪಿಎಸ್‌ ತರಬೇತಿ ಕೇಂದ್ರ
ಬೆಂಗಳೂರಿನಲ್ಲಿ ಮಂಡಳಿ ವತಿಯಿಂದ 15 ಕೋ.ರೂ. ವೆಚ್ಚದಲ್ಲಿ ಐಎಎಸ್‌ ಮತ್ತು ಐಪಿಎಸ್‌ ಟ್ರೈನಿಂಗ್‌ ಸೆಂಟರ್‌ ಪ್ರಾರಂಭವಾಗಲಿದ್ದು, ಜೂನ್‌ ಮೊದಲ ವಾರದಲ್ಲಿ ಶಿಲಾನ್ಯಾಸ ನಡೆಯಲಿದೆ.

ವಕ್ಫ್ ಮಂಡಳಿ ಕೇಂದ್ರ ಕಚೇರಿ ದುರಸ್ತಿಗೆ ಸರಕಾರ 2 ಕೋ.ರೂ. ಅನುದಾನ ನೀಡಿದೆ. 10 ಜಿಲ್ಲೆಗಳಲ್ಲಿ 10 ಮಹಿಳಾ ಕಾಲೇಜು ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಜಾಗ ಗುರುತಿಸಲಾಗಿದೆ. ವಕ್ಫ್ ಬೋರ್ಡ್‌ ಜಾಗ ಪ್ರಭಾವಿಗಳ ಪಾಲಾಗುತ್ತಿದೆ ಎಂಬ ಆರೋಪವಿದೆ. ಹೀಗಾಗಿ ರಾಜ್ಯ ಸರಕಾರ ವಕ್ಫ್ ಆಸ್ತಿಗಳ ಡ್ರೋನ್‌ ಸರ್ವೇಗೆ 2.5 ಕೋ.ರೂ. ಬಿಡುಗಡೆ ಮಾಡಿದೆ. ಈ ಜಾಗಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಮಂಡಳಿ ತೀರ್ಮಾನ ಕೈಗೊಂಡಿದೆ ಎಂದರು.

ಕಳಂಕಗಳ ಚರ್ಚೆ ಬಿಡೋಣ
ವಕ್ಫ್ ಬೋರ್ಡ್‌ ಅಧೀನದಲ್ಲಿ 1990 ಮದ್ರಸಾಗಳಿವೆ. ಅಲ್ಲೆಲ್ಲ ರಾಷ್ಟ್ರಗೀತೆ ಹಾಡಲಾಗುತ್ತಿದೆ. ಆದರೆ ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿದವರು ಈ ಬಗ್ಗೆ ವಿವಾದ ಸೃಷ್ಟಿಸುತ್ತಿದ್ದಾರೆ. ಟಿಪ್ಪು ಸುಲ್ತಾನ್‌ ಅನೇಕ ಮಠಗಳಿಗೆ ದಾನ ದತ್ತಿ ನೀಡಿದಂತೆ ಮೈಸೂರು ಮಹಾರಾಜರು ಬಾಬಾ ಬುಡನ್‌ಗಿರಿ ದರ್ಗಾ ಹಾಗೂ ಸುತ್ತಲಿನ ಜಾಗವನ್ನು ವಕ್ಫ್ ಗೆ ನೀಡಿದ್ದಾರೆ.

Advertisement

ಇವೆಲ್ಲ ಸೌಹಾರ್ದಕ್ಕೆ ನಿದರ್ಶನವಾಗಿದ್ದು, ಇತಿಹಾಸದ ಕಳಂಕಗಳ ಬಗ್ಗೆ ಚರ್ಚೆ ಮಾಡುವುದು ಅನಗತ್ಯ. ಮನಸ್ಸು ಕೆಡಿಸಿಕೊಂಡು ಯಾರಿಗೂ ಪ್ರಯೋಜನವಿಲ್ಲ. ಸಾಮರಸ್ಯ ಕೆಡಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next