Advertisement

ಪಾಕ್‌ ವಿರುದ್ಧ ಇನ್ನಷ್ಟು ಅಸ್ತ್ರ

06:00 AM Jan 07, 2018 | Team Udayavani |

ವಾಷಿಂಗ್ಟನ್‌: ತನ್ನ ನೆಲದಲ್ಲಿ ಪಾಕಿಸ್ಥಾನ ಖುದ್ದು ತನ್ನ ಕೈಯ್ನಾರೆ ಪೋಷಿಸಿ ಬೆಳೆಸುತ್ತಿರುವ ತಾಲಿಬಾನ್‌ ಹಾಗೂ ಹಕ್ಕಾನಿ ಉಗ್ರರ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆ ದೇಶವನ್ನು ಬಗ್ಗಿಸಲು ನಮ್ಮಲ್ಲಿ ಹಲವಾರು ಅಸ್ತ್ರಗಳಿವೆ ಎಂದು ಅಮೆರಿಕ ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಅಮೆರಿಕದ ಮುಂದಿನ ನಡೆಗಳ ಬಗ್ಗೆ ಕುತೂಹಲ ಹುಟ್ಟಿಸಿದೆ. 

Advertisement

ಶುಕ್ರವಾರವಷ್ಟೇ, ಉಗ್ರರ ದಮನ ಕಾರ್ಯಾಚರಣೆಗಾಗಿ ಪಾಕಿಸ್ಥಾನಕ್ಕೆ ತಾನು ಕೊಡಬೇಕಿದ್ದ ಸುಮಾರು 9 ಸಾವಿರ ಕೋಟಿ ರೂ.ಗಳ ರಕ್ಷಣಾ ಅನುದಾನಕ್ಕೆ ಅಮೆರಿಕ ಸರಕಾರ ತಡೆ ಹಾಕಿತ್ತು. ಶನಿವಾರ ಮಾತನಾಡಿರುವ ಅಧಿಕಾರಿಯೊಬ್ಬರು, ತನ್ನ ನೆಲದ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿಯುವಂತೆ ಪಾಕಿಸ್ಥಾನದ ಮೇಲೆ ಒತ್ತಡ ಹೇರಲು ಅಮೆರಿಕದ ಬಳಿ ಹಲವಾರು ಅಸ್ತ್ರಗಳಿವೆ. ಸದ್ಯಕ್ಕೆ ಅನುದಾನ ನಿಲ್ಲಿಸಿರುವುದು ಅದರ ಮೊದಲ ಹೆಜ್ಜೆಯಷ್ಟೆ. ಮುಂಬರುವ ದಿನಗಳನ್ನು ತನ್ನ ಆಣತಿಯಂತೆ ಪಾಕಿಸ್ಥಾನವನ್ನು ಬಗ್ಗಿಸುವಲ್ಲಿ ಅಮೆರಿಕ ಯಶಸ್ವಿಯಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ  ಎಂದು ಅವರು ತಿಳಿಸಿದ್ದಾರೆ. ಆದರೆ, ಉಳಿದ ಅಸ್ತ್ರಗಳಾÂವುವು ಎಂಬ ಪ್ರಶ್ನೆಗೆ ಅವರು ಉತ್ತರಿಸಿಲ್ಲ. 

ಏತನ್ಮಧ್ಯೆ, ಈ ಹಿಂದೆ ಇದ್ದಂತೆ, ಪಾಕಿಸ್ಥಾನವನ್ನು “ನ್ಯಾಟೋಯೇತರ ದೇಶ’ ಎಂದು ಘೋಷಿಸಬೇಕು. ಅಲ್ಲದೆ, ವಿಶ್ವಸಂಸ್ಥೆ, ಐಎಂಎಫ್ಗಳ ಮೂಲಕವೂ ಹಲವಾರು ನಿಬಂಧನೆಗಳನ್ನು ಹೇರುವ ಮೂಲಕ ಪಾಕಿಸ್ಥಾನ ಅಮೆರಿಕದ ಮಾತನ್ನು ಕೇಳುವಂತೆ ಒತ್ತಡ ಹೇರಬೇಕೆಂದು ಕೆಲ ಸಂಸದರು ಹಾಗೂ ಪೆಂಟಗನ್‌ನ ಹಿರಿಯ ಅಧಿಕಾರಿಗಳು ಟ್ರಂಪ್‌ಗೆ ಸಲಹೆ ನೀಡಿದ್ದಾರೆನ್ನಲಾಗಿದೆ. 

ಇದೆಲ್ಲದರ ನಡುವೆಯೇ, ಪಾಕಿಸ್ಥಾನ ತನ್ನ ನೆಲದಲ್ಲಿರುವ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದರೆ ಈಗ ತಡೆ ಹಿಡಿಯಲಾಗಿರುವ ಭದ್ರತಾ ಅನುದಾನವನ್ನು ನೀಡಲಾಗುವುದು ಎಂದು ಅಮೆರಿಕದ ರಕ್ಷಣಾ ಸಚಿ ವ‌ ಜಿಮ್‌ ಮ್ಯಾಟಿಸ್‌ ತಿಳಿಸಿದ್ದಾರೆ. 

ರಾಂಡ್‌ ಸಲಹೆ ಸ್ವೀಕರಿಸಿದ ಟ್ರಂಪ್‌: ಪಾಕಿಸ್ಥಾನಕ್ಕೆ ತಡೆ ಹಿಡಿಯಲಾಗಿರುವ ಭದ್ರತಾ ಅನುದಾನವನ್ನು ಅಮೆರಿಕದ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಬಳಸಿಕೊಳ್ಳು ವಂತೆ ತಮ್ಮದೇ ಪಕ್ಷದ ಸಂಸದ ರಾಂಡ್‌ ಪಾಲ್‌ ನೀಡಿರುವ ಸಲಹೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ವಾಗತಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಇದೊಂದು ಉತ್ತಮ ಆಲೋಚನೆ ರಾಂಡ್‌’ ಎಂದು ಕೊಂಡಾಡಿದ್ದಾರೆ. 

Advertisement

ಮೆಕ್ಸಿಕೋ ತಡೆಗೋಡೆಗೆ ದೇಣಿಗೆ ಕೇಳಿದ ಟ್ರಂಪ್‌
ಅಮೆರಿಕ ಹಾಗೂ ಮೆಕ್ಸಿಕೋ ನಡುವೆ ನಿರ್ಮಿಸಲು ಉದ್ದೇಶಿಸಿರುವ ಬೃಹತ್‌ ತಡೆಗೋಡೆಗೆ ಅಂದಾಜು 1 ಲಕ್ಷ 14 ಕೋಟಿ ರೂ.ಗಳ ಅವಶ್ಯಕತೆಯಿದ್ದು ಇದನ್ನು ಅಮೆರಿಕದ ಸಂಸದರು ದೇಣಿಗೆಯ ರೂಪದಲ್ಲಿ ನೀಡಬೇಕೆಂದು ಅಧ್ಯಕ್ಷ ಟ್ರಂಪ್‌ ಮನವಿ ಮಾಡಿದ್ದಾರೆ. ಈ ಹಣವು ಮೆಕ್ಸಿಕೋ ಗಡಿಯಲ್ಲಿ 508.5 ಕಿ.ಮೀಗಳವರೆಗೆ ತಂತಿ ಬೇಲಿ ಹಾಕಲು ಹಾಗೂ ಈಗಾಗಲೇ 508.5 ಕಿ.ಮೀಗಳವರೆಗೆ ಇರುವ ತಡೆಗೋಡೆಯನ್ನು ಮತ್ತಷ್ಟು ಬಲಪಡಿಸಲು ಉಪಯೋಗಿಸಲಾಗುತ್ತದೆ. ಒಟ್ಟಾರೆ 2027ರೊಳಗೆ ಪೂರ್ಣ ಪ್ರಮಾಣದ ತಡೆಗೋಡೆ ನಿರ್ಮಾಣವಾಗುತ್ತದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಆದರೆ, ಅಧ್ಯಕ್ಷರ ಈ ಮನವಿಯನ್ನು ವಿರೋಧ ಪಕ್ಷವಾದ ಡೆಮಾಕ್ರಾಟ್‌ ಸಂಸದರು ತೀವ್ರವಾಗಿ ಟೀಕಿಸಿದ್ದು, ಇಷ್ಟು ಮೊತ್ತದ ಯೋಜನೆ ಬೇಕೇ ಎಂದು ಪ್ರಶ್ನಿಸಿದ್ದಾರೆ. ಸದ್ಯದಲ್ಲೇ ಅಮೆರಿಕದ ಬಜೆಟ್‌ ಅಧಿವೇಶನ ಶುರುವಾಗಲಿದ್ದು, ಮೆಕ್ಸಿಕೋ ಗಡಿಯ ಪ್ರಸ್ತಾವನೆಗೆ ವಿರೋಧ ಪಕ್ಷಗಳ ಸಂಸದರನ್ನು ಟ್ರಂಪ್‌ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ನಡೆಯದಿದ್ದರೆ ಇಡೀ ಬಜೆಟ್‌ ನನೆಗುದಿಗೆ ಬೀಳುವ ಭೀತಿಯೂ ಆವರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next