ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟು ಕೊಟ್ಟಿದ್ದರೂ, ಬಿಜೆಪಿ ಕಳೆದುಕೊಂಡ ಮತಗಳು ಕಾಂಗ್ರೆಸ್‌ಗೆ ಹೋಗದೇ ಪ್ರಾದೇಶಿಕ ಪಕ್ಷಗಳು ಇದನ್ನು ಗಳಿಸಿಕೊಂಡಿರುವುದು ಕಂಡುಬಂದಿದೆ. 2014ರ ಚುನಾವಣೆಗೆ ಹೋಲಿಸಿದರೆ ಈ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮತ ಹಂಚಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಳೆದುಕೊಂಡಿದೆ. ಆಸಕ್ತಿಕರ ಸಂಗತಿಯೆಂದರೆ, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿಯ ಮತ ಹಂಚಿಕೆಯೇ ಹೆಚ್ಚಿದೆ. ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗಿಂತ ಸ್ವಲ್ಪವೇ ಕಡಿಮೆ ಇದೆ. ತೆಲಂಗಾಣ ಹಾಗೂ ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳಾದ ಟಿಆರ್‌ಎಸ್ ಮತ್ತು ಎಂಎನ್‌ಎಫ್ ಜಯಗಳಿಸಿದ್ದು, 2019 ರಲ್ಲೂ ಪ್ರಾದೇಶಿಕ ಪಕ್ಷಗಳೇ ಹೆಚ್ಚಿನ ಪ್ರಾತಿನಿಧ್ಯ ಪಡೆದುಕೊಳ್ಳಲಿವೆ ಎಂದು ಹೇಳಲಾಗಿದೆ.
ಛತ್ತೀಸ್‌ಗಢದಲ್ಲಿ ಈ ಬಾರಿ ಶೇ. 43 ಮತಗಳನ್ನು ಪಡೆದಿದ್ದು, 2013ರಲ್ಲಿ 40.3 ರಷ್ಟು ಮತಗಳನ್ನು ಪಡೆದಿತ್ತು. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ ಶೇ. 38.37 ಮತಗಳನ್ನು ಪಡೆದಿತ್ತು. ಆದರೆ ಬಿಜೆಪಿ ಶೇ. 33 ರಷ್ಟು ಮತ ಗಳನ್ನು ಪಡೆದಿದ್ದು, 2013ರಲ್ಲಿ ಇದು ಶೇ. 41ರಷ್ಟಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಶೇ. 49 ರಷ್ಟು ಮತಗಳನ್ನು ಗಳಿಸಿತ್ತು.
ಇದೇ ರೀತಿ ರಾಜಸ್ಥಾನದಲ್ಲೂ 2013ರಲ್ಲಿ ಶೇ. 45.2 ರಿಂದ ಶೇ. 38.8 ಕ್ಕೆ ಕುಸಿತ ಕಂಡಿದೆ. ಲೋಕ ಸಭೆಯಲ್ಲಿ ಶೇ. 55ರಷ್ಟು ಮತಗಳನ್ನು ಬಿಜೆಪಿ ಗಳಿಸಿತ್ತು. ಆದರೆ ಕಾಂಗ್ರೆಸ್ 2013ರಲ್ಲಿ ಶೇ. 33.1 ರಿಂದ ಈಗ ಶೇ. 39.3ಕ್ಕೆ ಏರಿಕೆಯಾಗಿದೆ. ಲೋಕ ಸಭೆ ಚುನಾವಣೆ ಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸೋತಿದ್ದರೂ, ಶೇ. 30 ರಷ್ಟು ಮತಗಳನ್ನು ಪಡೆದಿತ್ತು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 2013ರಲ್ಲಿ ಶೇ. 36.4 ರಷ್ಟು ಮತಗಳಿಸಿದ್ದು, ಈ ಬಾರಿ ಶೇ. 40.9 ರಷ್ಟು ಮತಗಳಿಸಿದೆ. ಆದರೆ ಬಿಜೆಪಿ ಶೇ. 44.9 ರಿಂದ ಶೇ. 41ಕ್ಕೆ ಕುಸಿದಿದೆ. ಅಚ್ಚ ರಿಯ ಸಂಗತಿ ಯೆಂದರೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ನ ಮತ ಗಳಿಕೆಗಿಂತ ಶೇ. 0.1 ರಷ್ಟು ಕಡಿಮೆ ಮತಗಳನ್ನು ಕಾಂಗ್ರೆಸ್ ಪಡೆದಿದೆ. ಬಿಎಸ್‌ಪಿ ಮತಗಳು ಶೇ. 5ಕ್ಕೆ ಕುಸಿದಿದ್ದು, ಸ್ವತಂತ್ರ ಅಭ್ಯರ್ಥಿಗಳು ಶೇ. 5.8 ರಷ್ಟು ಮತಗಳನ್ನು ಪಡೆದಿದ್ದಾರೆ. ಇತರ ಸಣ್ಣ ಪಕ್ಷಗಳ ಮತಗಳಿಕೆಯಲ್ಲಿ ಗಮನಾರ್ಹ ಏರಿಕೆಯಾಗಿದೆ.
ಇಂದು ಬಿಜೆಪಿ ಸಭೆ: ಬಿಜೆಪಿಯ ಪದಾಧಿಕಾರಿಗಳ ಮಹತ್ವದ ಸಭೆ ಗುರುವಾರ ನವದೆಹಲಿಯಲ್ಲಿ ನಡೆಯಲಿದೆ. ಅಧ್ಯಕ್ಷ ಅಮಿತ್ ಶಾ ಈ ಸಭೆಯನ್ನು ಆಯೋಜಿಸಿದ್ದು, ಐದು ರಾಜ್ಯಗಳಲ್ಲಿ ಪಕ್ಷಕ್ಕೆ ಉಂಟಾದ ಹಿನ್ನಡೆ ಮತ್ತು ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. ಈ ಸಭೆಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಶನಿವಾರ ಪ್ರಮಾಣ: ಮಿಜೋರಾಂನಲ್ಲಿ ಝೋರಾಂತಾಂಗ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ ನೇತೃತ್ವದ ಹೊಸ ಸರ್ಕಾರ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದೆ. ರಾಜ್ಯಪಾಲ ಕುಮ್ಮನಮ್ ರಾಜಶೇಖರನ್ ಅವರು ತಾಂಗ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿದ್ದಾರೆ.