ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದೆ. ಅವರ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಸತ್ಯೇಂದ್ರ ಕುಮಾರ್ ಜೈನ್ ಅವರು 17 ಕೋಟಿ ರೂ.ಗಳ ಹವಾಲಾ ವ್ಯವಹಾರ ನಡೆಸಿರುವ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ.
ಆದಾಯ ತೆರಿಗೆ ಕಾನೂನುಗಳ ಉಲ್ಲಂಘನೆ ಗೈದು 17 ಕೋಟಿ ರೂ.ಗಳ ಅಕ್ರಮ ಹಣಕಾಸು ವ್ಯವಹಾರ ನಡೆಸಿರುವ ಆರೋಪದ ಮೇಲೆ ಜೈನ್ ಅವರನ್ನು ಇಲಾಖಾಧಿಕಾರಿಗಳು ಈಗಾಗಲೇ ಪ್ರಶ್ನಿಸಿದ್ದಾರೆ.
ಜೈನ್ ಹಾಗೂ ಅವರ ಪತ್ನಿಯ ನಿಯಂತ್ರಣದಲ್ಲಿರುವ ನಾಲ್ಕು ಖೋಟಾ ಕಂಪೆನಿಗಳ ಮೂಲಕ 2010ರಿಂದ 2016ರ ವರೆಗಿನ ಅವಧಿಯಲ್ಲಿ 16.39 ಕೋಟಿ ರೂ.ಗಳು ಸುಮಾರು 56 ಖೊಟ್ಟಿ ದಾಖಲೆಪತ್ರಗಳ ಮೂಲಕ ವರ್ಗಾವಣೆ ಮಾಡಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.
ಜೈನ್ ಅವರು ತಮ್ಮ ನಾಲ್ಕು ಖೊಟ್ಟಿ ಕಂಪೆನಿಗಳ ಮೂಲಕ ಹವಾಲಾ ನಿರ್ವಾಹಕರಾಗಿರುವ ಜೀವೆಂದ್ರ ಮಿಶ್ರಾ, ಅಭಿಷೇಕ್ ಛೊಕಾನಿ ಮತ್ತು ಕೋಲ್ಕತಾ ಮೂಲದ ರಾಜೇಂದ್ರ ಬನ್ಸಾಲ್ ಅವರಿಗೆ ಸುಮಾರು 17 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬಹಿರಂಗವಾಗಿದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಅತ್ಯಂತ ನಿಕಟವರ್ತಿಯಾಗಿರುವ ಜೈನ್ ಅವರು ತಮ್ಮ ವಿರುದ್ಧದ ಹವಾಲಾ ವಹಿವಾಟಿನ ಆರೋಪಗಳನ್ನು ಅಲ್ಲಗಳೆದು ಇವೆಲ್ಲವೂ ನಿರಾಧಾರ ಎಂದು ಹೇಳಿದ್ದಾರೆ.
ಆದರೆ ಕಳೆದ ವರ್ಷ ಡಿಸೆಂಬರ್‌ನಲ್ಲೇ ಸಿಬಿಐ ಅಧಿಕಾರಿಗಳು ಸತ್ಯೇಂದ್ರ ಜೈನ್ ಅವರ ಕರ್ತವ್ಯನಿರತ ವಿಶೇಷ ಅಧಿಕಾರಿ ನಿಕುಂಜ್ ಅಗ್ರವಾಲ್ ಅವರ ಕಚೇರಿಯ ಮೇಲೆ ದಾಳಿ ನಡೆಸಿದ್ದು ಆರೋಪಿತ ಹವಾಲಾ ವಹಿವಾಟುಗಳು ಆ ಮೂಲಕ ಬೆಳಕಿಗೆ ಬಂದಿವೆ ಎನ್ನಲಾಗಿದೆ.