ಬದಿಯಡ್ಕ: ಶಿಕ್ಷಣ ಕ್ಷೇತ್ರವು ತೀವ್ರ ಗತಿಯಲ್ಲಿ ಖಾಸಗೀಕರಣಗೊಳ್ಳುತ್ತಿದ್ದು, ಸರಕಾರವು ಕೂಡ ಕೌಶಲಾಧಾರಿತ ಶಿಕ್ಷಣದೊಂದಿಗೆ ಖಾಸಗಿ ರಂಗವು ಬಲವರ್ಧನೆಗೊಳ್ಳಬೇಕೆಂದು ಬಯಸುತ್ತಿದೆ. ಹಾಗಾಗಿ ಖಾಸಗಿ ಶಾಲೆಗಳ ಜವಾಬ್ದಾರಿ ತುಂಬ ಹೆಚ್ಚಾಗಿದೆ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ| ವಸಂತ ಕುಮಾರ ಪೆರ್ಲ ಅವರು ಹೇಳಿದರು.
ಬದಿಯಡ್ಕದಲ್ಲಿರುವ ಶ್ರೀ ಭಾರತಿ ವಿದ್ಯಾಪೀಠದ ವಾರ್ಷಿಕೋತ್ಸವ “ವಸಂತೋತ್ಸವ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಪ್ರಧಾನ ಅತಿಥಿಗಳಾಗಿ ಅವರು ಮಾತನಾಡಿದರು.ಶ್ರೀ ಭಾರತಿ ವಿದ್ಯಾಪೀಠವು ಬದಿಯಡ್ಕ ಪರಿಸರದಲ್ಲಿ ಉತ್ತಮ ಶಿಕ್ಷಣ ನೀಡುವಲ್ಲಿ ತುಂಬ ಶ್ರಮಿಸುತ್ತಿದೆ. ಈ ಪ್ರಯತ್ನ ಮುಂದುವರಿಯಲಿ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ ಅವರು ವ್ಯಕ್ತಿತ್ವದ ಸರ್ವಾಂಗೀಣ ವಿಕಾಸದ ಕಡೆಗೆ ಶಿಕ್ಷಣ ವ್ಯವಸ್ಥೆಯು ಗಮನ ಹರಿಸಬೇಕು ಎಂದರು. ಶಾಲೆಯ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಂಸ್ಥಾಪಕರಾದ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಅಪೇಕ್ಷೆಯಂತೆ ಈ ಭಾಗದ ಜನತೆಗೆ ಉತ್ತಮ ಶಿಕ್ಷಣ ನೀಡಬೇಕೆಂಬುದೇ ನಮ್ಮ ಧ್ಯೇಯ ಎಂದು ಅವರು ಹೇಳಿದರು. ಶಾಲೆಯ ಮುಖ್ಯ ಅಧ್ಯಾಪಕ ಸತ್ಯನಾರಾಯಣ ಶರ್ಮ ವರದಿ ವಾಚಿಸಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ರಕ್ಷಕರ ಸಂಘದ ಅಧ್ಯಕ್ಷ ಬದಿಯಡ್ಕ ಗಣೇಶ ಪೈ, ಮಾತೆಯರ ಸಂಘದ ಅಧ್ಯಕ್ಷೆ ಪ್ರಮೀಳಾ ಉಪಸ್ಥಿತರಿದ್ದರು. ನಿತೀಶ್ ಕೆ. ಸ್ವಾಗತಿಸಿದರು. ವೈಷ್ಣವಿ ಭಟ್ ವಂದಿಸಿದರು. ರತ್ನಮಾಲಾ ಎಸ್.ವಿ. ಕಾರ್ಯಕ್ರಮ ನಿರೂಪಿಸಿದರು.
ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಮಾಣಪತ್ರ ಮತ್ತು ನೆನಪಿನ ಕಾಣಿಕೆಗಳೊಂದಿಗೆ ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಸರ್ವಾಂಗೀಣ ಸಾಧನೆಗೈದ ವಿದ್ಯಾರ್ಥಿನಿ ವೈದೇಹಿ ವಿ. ಅವರನ್ನು ಚಿನ್ನದ ಪದಕದೊಂದಿಗೆ ಸ್ವರ್ಣಾಂಕುರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನಂತರ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಜರಗಿತು.
ಎಲ್ಲರಲ್ಲೂ ಶಿಕ್ಷಣದ ಅರಿವು ಮೂಡಿದೆ
ಶಿಕ್ಷಣವು ಇಂದು ಸಾರ್ವತ್ರೀಕರಣ ಗೊಂಡಿದೆ. ಎಲ್ಲರಲ್ಲೂ ಶಿಕ್ಷಣ ಮಹತ್ವದ ಬಗ್ಗೆ ಅರಿವು ಮೂಡಿದೆ. ಇಂತಹ ಸಂದರ್ಭದಲ್ಲಿ ಎಲ್ಲ ಸಮುದಾಯಗಳಿಗೂ ಉತ್ತಮ ಶಿಕ್ಷಣ ಲಭಿಸಿ ಎಲ್ಲರೂ ಸುಶಿಕ್ಷಿತ ಮತ್ತು ಆರೋಗ್ಯವಂತ ಪ್ರಜೆಗಳಾಗಿ ರೂಪುಗೊಳ್ಳುವಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಪಾಠ ಪಠ್ಯಗಳ ಜತೆಗೆ ಕೌಶಲ ಬೆರೆತ ಶಿಕ್ಷಣದ ಕಡೆಗೆ ಗಮನ ಕೇಂದ್ರೀಕರಿಸಬೇಕಾದ ದಿನಗಳು ಬಂದಿವೆ
– ಡಾ| ಪೆರ್ಲ,
ಮಂಗಳೂರು ಆಕಾಶವಾಣಿ ವಿಶ್ರಾಂತ ನಿರ್ದೇಶಕ