Advertisement

60ಕ್ಕೂ  ಅಧಿಕ ವಿದ್ಯುತ್‌ ಕಂಬಗಳು ಧರೆಗೆ

10:02 AM Jun 10, 2018 | |

ಉಳ್ಳಾಲ : ಶನಿವಾರ ಬೆಳಗ್ಗೆಯಿಂದ ಸುರಿದ ಗಾಳಿ- ಮಳೆಗೆ ಉಳ್ಳಾಲ, ಕೋಟೆಕಾರು, ಕೊಣಾಜೆ, ದೇರಳಕಟ್ಟೆ ವ್ಯಾಪ್ತಿಯಲ್ಲಿ ಮರಗಳು ಬಿದ್ದು ಸುಮಾರು 60ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರಾಶಾಯಿಯಾಗಿವೆ. ಗಾಳಿಯ ಹೊಡೆತಕ್ಕೆ 10ಕ್ಕೂ ಹೆಚ್ಚು ಮನೆಗಳ ಹೆಂಚು, ಕಬ್ಬಿಣದ ಶೀಟ್‌ಗಳು ಹಾರಿ ಹೋಗಿದ್ದು, ಕುತ್ತಾರ್‌ ಬಳಿ ಮರ ಬಿದ್ದು ಮನೆ ಮತ್ತು ಅಂಗಡಿಯೊಂದಕ್ಕೆ ಹಾನಿಯಾಗಿದೆ.

Advertisement

ಉಳ್ಳಾಲ ವ್ಯಾಪ್ತಿಯ ಮೊಗವೀರಪಟ್ಣ, ಉಳ್ಳಾಲ ಹೊಗೆ, ವಿಜಯನಗರ, ಮೂರುಕಟ್ಟ, ಆನಂದಾಶ್ರಮ ಶಾಲೆ, ಸೋಮೇಶ್ವರ ದೇವಸ್ಥಾನ, ಸೋಮೇಶ್ವರ ಬೀಚ್‌ ಬದಿಯಲ್ಲಿ ಸುಮಾರು 25ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳ ಮೇಲೆ ಮರ ಬಿದ್ದಿದೆ. ಕೋಟೆಕಾರು, ಮೆಸ್ಕಾಂ ವ್ಯಾಪ್ತಿಯ ಸೋಮೇಶ್ವರ ಉಚ್ಚಿಲ, ಕಿನ್ಯ ಬೆಳರಿಂಗೆ, ಮಾಡೂರು, ತಲಪಾಡಿ, ಬಜಂಗ್ರೆ, ಕನೀರುತೋಟ ಸಹಿತ ವಿವಿಧೆಡೆ ಮರ ಬಿದ್ದು ಸುಮಾರು 28ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರಾಶಾಯಿಯಾಗಿವೆ. ದೇರಳಕಟ್ಟೆ ವ್ಯಾಪ್ತಿಯ ಬೆಳ್ಮ ಮಾಗಣ್ತಡಿ, ಬರಿಕೆ, ಮಂಜನಾಡಿ ಮಂಗಳಾಂತಿ, ಅಂಬ್ಲಿಮೊಗರು ಗಟ್ಟಿಕುದ್ರು, ಎಲಿಯಾರ್‌ಪದವು ಬಳಿ ಮರ ಬಿದ್ದು, ವಿದ್ಯುತ್‌ ತಂತಿಗಳಿಗೆ ಹಾನಿಯಾದರೆ, ನಾಟೆಕಲ್‌ ಜಂಕ್ಷನ್‌ ಮತ್ತು ಮಂಜನಾಡಿ ಲಾಡದಲ್ಲಿ ಮರ ಬಿದ್ದು ಮೂರು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

ಕೊಣಾಜೆ ಮೆಸ್ಕಾಂ ವ್ಯಾಪ್ತಿಯಲ್ಲಿ ನಾಟೆಕಲ್‌ ಮತ್ತು ಹರೇಕಳದಲ್ಲಿ ಮರ ಬಿದ್ದು 6 ವಿದ್ಯುತ್‌ ಕಂಬಗಳು ಧರಾಶಾಯಿಯಾಗಿವೆ. ಕೆಲವೆಡೆ ಬೆಳಗ್ಗಿನಿಂದಲೇ ವಿದ್ಯುತ್‌ ಸ್ಥಗಿತಗೊಂಡರೆ ಮೆಸ್ಕಾಂ ಇಲಾಖೆ ಸಂಜೆಯ ವೇಳೆಗೆ ಶೇ. 80ರಷ್ಟು ತ್ವರಿತ ಕಾಮಗಾರಿ ನಡೆಸಿ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿದೆ.

ಮನೆಗಳಿಗೆ ಹಾನಿ
ಗಾಳಿಗೆ ಮೊಗವೀರಪಟ್ಣ ಸಹಿತ ವಿವಿಧೆಡೆ ಮನೆಗಳ ಹೆಂಚು, ಕಬ್ಬಿಣದ ಶೀಟ್‌ಗಳು ಹಾರಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಯಿತು. ಕುತ್ತಾರ್‌ ರಾಜರಾಜೇಶ್ವರೀ ದೇಗುಲದ ಬಳಿ ಮರವೊಂದು ಉರುಳಿ ಬಿದ್ದು ಲೀಲಾವತಿ ಸುಂದರ್‌ ಅವರ ಮನೆಗೆ ಹಾನಿಯಾಗಿದೆ. ಮನೆಗೆ ತಾಗಿಕೊಂಡಿದ್ದ ಲೋಹಿತ್‌ ಅವರ ಅಕ್ವೇರಿಯಂ ಅಂಗಡಿ ಸಂಪೂರ್ಣ ಧ್ವಂಸವಾಗಿ ಸುಮಾರು 50 ಸಾವಿರ ರೂ. ಗೂ ಅಧಿಕ ನಷ್ಟವಾಗಿದೆ. 

ಮರ ಉರುಳಿ ಬಿದ್ದ ಸಂದರ್ಭದಲ್ಲಿ ಅಂಗಡಿಯ ಬಳಿ ನಿಂತಿದ್ದ ಮೂವರು ಓಡಿ ಹೋಗಿದ್ದರಿಂದ ಪ್ರಾಣಾಪಾಯದಿಮದ ಪಾರಾಗಿದ್ದಾರೆ. ಸೋಮೇಶ್ವರ ದೇವಸ್ಥಾನದ ಶೀಟ್‌ ಹಾರಿ ಹೋಗಿ ಹಾನಿಯಾದರೆ, ರುದ್ರಭೂಮಿಗೂ ಹಾನಿಯಾಗಿದೆ. ಪ್ರದೇಶಕ್ಕೆ ಸೋಮೇಶ್ವರ ಗ್ರಾಮ ಪಂಚಾಯತ್‌ ಅಧ್ಯಕ್ಷ ರಾಜೇಶ್‌ ಉಚ್ಚಿಲ್‌, ತಾ.ಪಂ. ಸದಸ್ಯ ರವಿಶಂಕರ್‌ ಭೇಟಿ ನೀಡಿದರು.

Advertisement

ಪಡುಪಣಂಬೂರು: ಗಾಳಿ, ಮಳೆಗೆ ಮನೆ ಹಾನಿ
ಪಡುಪಣಂಬೂರು, ಜೂ 9: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಲ್ಲಾಪುವಿನ ಬಳಿಯ ತೋಕೂರು ಗ್ರಾಮದಲ್ಲಿ ಸಂತೋಷ್‌ ಎಂಬವರ ಮನೆಯ ಒಂದು ಭಾಗದಲ್ಲಿ ತೀವ್ರ ಗಾಳಿ, ಮಳೆಗೆ ಹಾನಿಯಾಗಿದೆ.

ಶುಕ್ರವಾರ ರಾತ್ರಿ ಬಂದ ಭಾರೀ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿಯ ಹೆಂಚುಗಳು ಹಾರಿದ್ದು, ಪಕ್ಕಾಸು, ರೀಪುಗಳು ತುಂಡಾಗಿ ಬಿದ್ದಿದೆ. ಸುಮಾರು 20 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖೆಯ ಗ್ರಾಮ ಕರಣಿಕ ಮೋಹನ್‌ ಅವರು ತಿಳಿಸಿದ್ದಾರೆ. ಸ್ಥಳಕ್ಕೆ ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್‌, ಸದಸ್ಯ ದಿನೇಶ್‌ ಕುಲಾಲ್‌ ಮತ್ತು ಪಿಡಿಒ ಅನಿತಾ ಕ್ಯಾಥರಿನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮರಬಿದ್ದು ಸಂಚಾರ ವ್ಯತ್ಯಯ
ಮೂಲ್ಕಿ: ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಕಾರ್ನಾಡು ಕೈಗಾರಿಕಾ ಪ್ರದೇಶದ ಹೆದ್ದಾರಿ ಪಕ್ಕದ ಕಾಸಪ್ಪಯ್ಯರ ಮನೆ ಸಂಪರ್ಕ ರಸ್ತೆಗೆ ಮರವೊಂದು ಅಡ್ಡವಾಗಿ ಬಿದ್ದು ಗುಡ್ಡದ ಮಣ್ಣು ಕುಸಿದು ರಸ್ತೆ ಸಂಚಾರ ಸ್ವಲ್ಪ ಸಮಯ ಅಸ್ತವ್ಯಸ್ತವಾಯಿತು. ತತ್‌ಕ್ಷಣ ಅಲ್ಲಿಗೆ ಧಾವಿಸಿ ಬಂದ ನಗರ ಪಂಚಾಯತ್‌ ಸದಸ್ಯರಾದ ಬಿ.ಎಂ.ಆಸೀಫ್‌ ಹಾಗೂ ಪುತ್ತು ಬಾವಾ ಅವರು ನಗರ ಪಂಚಾಯತ್‌ ವಿಪತ್ತು ನಿರ್ವಹಣ ತಂಡದ ಸಿಬಂದಿಗಳಿಂದ ಅಡ್ಡವಾಗಿ ಬಿದ್ದಿರುವ ಮರವನ್ನು ತೆಗೆದು ರಸ್ತೆ ಸಂಚಾರ ಸುಗಮಗೊಳಿಸಿದರು. ಸುಮಾರು 1 ಲಕ್ಷ ರೂ.ನಷ್ಟು ಸೊತ್ತುಗಳು ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲ್ಕಿ ನಗರ ಪಂಚಾಯತ್‌ ಮತ್ತು ಮೂಲ್ಕಿ ವಿಶೇಷ ತಹಶಿಲ್ದಾರ್‌ ಅವರ ಕಚೇರಿಯಲ್ಲಿ ಮಳೆ ಆಪತ್ತು ನಿರ್ವಹಣೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ತೊಂದರೆಗೆ ಒಳಗಾದವರು ನಗರ ಪಂಚಾಯತ್‌ ಮತ್ತು ವಿಶೇಷ ತಹಶೀಲ್ದಾರ್‌ ಕಚೇರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ನಗರ ಪಂಚಾಯತ್‌ ಮೂಲ್ಕಿ, ಕಿಲ್ಪಾಡಿ ಮತ್ತು ಅತಿಕಾರಿಬೆಟ್ಟು ಗ್ರಾ.ಪಂ. ಮೂಲಕ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ವಹಣೆಯ ಕಾಮಗಾರಿ ನಡೆಯುತ್ತಿದೆ.

ಬಿರುಸುಗೊಂಡ ಸಮುದ್ರದ ಅಲೆಗಳು
ಉಳ್ಳಾಲ ಸಹಿತ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ಬಿರುಸುಗೊಂಡಿದ್ದು ದೊಡ್ಡ ದೊಡ್ಡ ಅಲೆಗಳು ಸಮುದ್ರ ತಟಕ್ಕೆ ಅಪ್ಪಳಿಸುತ್ತಿವೆ. ಮೆಸ್ಕಾಂ ಇಲಾಖೆಯ ಅಧಿಕಾರಿಗಳಾದ ದಯಾನಂದ್‌, ರಾಜೇಶ್‌, ಪ್ರವೀಣ್‌, ನಿತೇಶ್‌ ಬಬ್ಬುಕಟ್ಟೆ, ಸಂತೋಷ್‌ ವಿದ್ಯುತ್‌ ಕಂಬಗಳು ಬಿದ್ದ ಸ್ಥಳಕ್ಕೆ ಭೇಟಿ ನೀಡಿ ತ್ವರಿತ ಕಾಮಗಾರಿಗೆ ಕ್ರಮ ಕೈಗೊಂಡರು. 

ಮೂಡುಪೆರಾರ: ಅಪಾಯದಲ್ಲಿ ಮನೆ
ಪಡುಪೆರಾರ: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೂಡುಪೆರಾರ ಅರ್ಕೆ ಪದವು ಎಂಬಲ್ಲಿ ಮಳೆಗೆ ಅವರಣಗೋಡೆ ಕುಸಿದು ಅರ್ಕೆ ಪದವಿನ ಸೌಮ್ಯಾ ಬಾಲಕೃಷ್ಣ ಎಂಬವರ ಮನೆ ಅಪಾಯದಲ್ಲಿದೆ. ಸುಮಾರು 1.5 ಲಕ್ಷ ರೂ. ಸಂಭವಿಸಿದೆ. ಸ್ಥಳಕ್ಕೆ ಪಿಡಿಒ ಭೋಗಮಲ್ಲಣ್ಣ, ಗ್ರಾಮ ಕರಣಿಕ ಮಲ್ಲಪ್ಪ, ಎಂಜಿನಿಯರ್‌ ವಿಶ್ವನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆವರಣಗೋಡೆ ಕುಸಿತ 
ಕೊಳಂಬೆ: ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊಳಂಬೆ ಗ್ರಾಮದ ಪಡ್ಡಾಯಿಬೆಟ್ಟು ಎಂಬಲ್ಲಿ ಶನಿವಾರ ಬೆಳಗ್ಗೆ ಆವರಣ ಗೋಡೆಯ ಕಲ್ಲು ಹಾಗೂ ಮಣ್ಣು ಗುಡ್ಡ ಜರಿದು ಗಣೇಶ್‌ ಎಂಬವರ ಮನೆಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next