Advertisement

500ಕ್ಕೂ ಹೆಚ್ಚು ನಕಲಿ ಐಡಿ ಕಾರ್ಡ್‌ ಪತ್ತೆ

05:33 PM Mar 29, 2019 | pallavi |

ಶಹಾಪುರ: ನಗರದ ಹಾಲಬಾವಿ ರಸ್ತೆ ಬದಿಯಲ್ಲಿ ಬುಧವಾರ ನಕಲಿ ಮತದಾನ ಗುರುತಿನ ಚೀಟಿ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ನಗರ ಘಟಕ ಅಧ್ಯಕ್ಷ ಲಾಲನಸಾಬ್‌ ಖುರೇಶಿ ಹಾಗೂ ಇತರರು 500ಕ್ಕೂ ಹೆಚ್ಚು ಗುರುತಿನ ಚೀಟಿ ಎಸೆದಿರುವದನ್ನು ಕಂಡು ಮಾಧ್ಯಮಕ್ಕೆ ಮಾಹಿತಿ ನೀಡಿದರು. ಅಲ್ಲದೆ ಗುರುವಾರ ತಹಶೀಲ್ದಾರ್‌ ಕಚೇರಿಗೆ ತೆರಳಿ ಈ ಕುರಿತು ದೂರು ಸಲ್ಲಿಸಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಬಿಜೆಪಿ ಎಸ್‌ಸಿ ಮೋರ್ಚಾ ನಗರ ಅಧ್ಯಕ್ಷ ನಿಂಗಣ್ಣ ಹೊಸಮನಿ, ಹಯ್ನಾಳಪ್ಪ ನಾಲವಡಗಿ, ಯಲ್ಲಯ್ಯ ನಾಯಕ ವನದುರ್ಗ ಇದ್ದರು. ಮನವಿ ಸ್ವೀಕರಿಸಿದ
ತಹಶೀಲ್ದಾರ್‌ ಸಂಗಮೇಶ ಜಿಡಗೆ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ನಗರದ ಹಳ್ಳದ ಚರಬಸವೇಶ್ವರ ದೇವಸ್ಥಾನದ ಹತ್ತಿರದ ಮುಳ್ಳು ಕಂಟಿಯಲ್ಲಿ ಎಸೆದಿದ್ದ
ಸುಮಾರು 75ಕ್ಕೂ ಹೆಚ್ಚು ಮತದಾನ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದುಕೊಂಡರು. ಇನ್ನುಳಿದವು ಚರಂಡಿಯಲ್ಲಿ ಬೆರೆತು ಹೋಗಿವೆ. ಕೆಲವೊಂದು ನೀರಲ್ಲಿ ಹರಿದುಕೊಂಡು ಹೋಗಿವೆ ಎನ್ನಲಾಗಿದೆ.

ಶಹಾಪುರ ಮತಕ್ಷೇತ್ರದ ಸಗರ ಹಾಗೂ ಮಹಲ್‌ ರೋಜಾ ವಿಳಾಸ ಹೊಂದಿದ ಮತದಾನ ಗುರುತಿನ ಚೀಟಿಗಳು ಪತ್ತೆಯಾಗಿವೆ ಎಂದು ತಹಶೀಲ್ದಾರ್‌ ಸಂಗಮೇಶ ಜಿಡಗೆ ಸುದ್ದಿಗಾರರಿಗೆ ತಿಳಿಸಿದರು. ಈ ಕುರಿತು ಸೂಕ್ತ ಸಮಗ್ರ ತನಿಖೆ ನಡೆಸಲಾಗುವದು. ಇವು ಮೇಲ್ನೋಟಕ್ಕೆ ನಕಲಿ ಎಂಬುದು ತಿಳಿದಿದೆ. ಯಾಕಂದರೆ ಮತದಾನ ಚೀಟಿ ಝೆರಾಕ್ಸ್‌ ಪ್ರತಿ ಇರುವುದು ಕಂಡು ಬಂದಿದೆ. ಈ ಕುರಿತು ತನಿಖೆ ನಂತರ ಸತ್ಯ ಹೊರ ಬೀಳಲಿದೆ. ಇವುಗಳನ್ನು ಯಾರು ತಯಾರು ಮಾಡಿದ್ದಾರೆ. ಎಲ್ಲಿ ಬಳಕೆಯಾಗಿವೆ ಎಂಬುದನ್ನು ಪತ್ತೆ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾವುದು ಎಂದು ತಿಳಿಸಿದರು.

ವೋಟರ್‌ ಐಡಿ ಆ್ಯಪ್‌ನಲ್ಲಿ ವಿಳಾಸ ತಪ್ಪು ಬೆಳಕಿಗೆ ನಗರದ ಹಳ್ಳದ ಚರಬಸವೇಶ್ವರ ದೇವಸ್ಥಾನದ ಹತ್ತಿರದ ಮುಳ್ಳು ಕಂಟಿಯಲ್ಲಿ ದೊರೆತ ಮತದಾನ ಗುರುತಿನ ಚೀಟಿಗಳ ವೈಎಸ್‌ಜಿ ಸಂಖ್ಯೆ ಪರಿಶೀಲಿಸಲಾಗಿದೆ. ಹೆಸರು ಸರಿಯಾಗಿ ತೋರಿಸುತ್ತಿದೆ. ಆದರೆ ವಿಳಾಸ ಮಾತ್ರ ತಪ್ಪು ತೋರುತ್ತಿದೆ ಎನ್ನಲಾಗಿದೆ. ದೊರೆತ ಕಾರ್ಡ್‌ಗಳ ಸಂಖ್ಯೆ ಆ್ಯಪ್‌ನಲ್ಲಿ ನೋಡಿದರೆ ರಸ್ತಾಪುರ ಎಂದು ಬರುತ್ತಿದೆ. ಆದರೆ ದೊರೆತ ಮತದಾನ ಗುರುತಿನ ಚೀಟಿಯಲ್ಲಿ ಬಹುತೇಕ ಸಗರ ಮತ್ತು ಮಹಲ್‌ ರೋಜಾ ಎಂದು ನಮೂದಿಸಲಾಗಿದೆ.

2018ರಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವ್ಯಾಪಕ ಅಕ್ರಮ ಮತದಾನ ನಡೆದಿರುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಸೂಕ್ತ ತನಿಖೆ ನಡೆಯಬೇಕು. ದೊರೆತ ಮತದಾನ ಚೀಟಿಯಲ್ಲೂ ದಿನಾಂಕ ಏ.24, 2018ಎಂದು ನಮೂದಿಸಲಾಗಿದೆ. ಅಲ್ಲದೆ ಲೋಕಸಭೆ ಚುನಾವಣೆ ವೇಳೆಯೂ ಅಕ್ರಮ ಮತದಾನ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.
ಯಲ್ಲಯ್ಯ ನಾಯಕ, ಬಿಜೆಪಿ ರೈತ ಮುಖಂಡ

Advertisement

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಹಾಪುರ ಮತ ಕ್ಷೇತ್ರದಲ್ಲಿ ವ್ಯಾಪಕವಾಗಿ ನಕಲಿ ಮತದಾನ ಗುರುತಿನ ಚೀಟಿ ಬಳಕೆಯಾಗಿರುವ ಸಾಧ್ಯತೆ ಇದೆ. ಕಳೆದ ವಿಧಾನಸಭೆಯಲ್ಲಿ ನಮ್ಮ ನಾಯಕರಾದ ಮಾಜಿ ಶಾಸಕ, ಗುರು ಪಾಟೀಲ ಶಿರವಾಳ ಅವರು 30 ಸಾವಿರಕ್ಕೂ ಅ ಧಿಕ ಮತಗಳ ಅಂತರದಿಂದ ಸೋಲಿಗೆ ಇಂತಹ ನಕಲಿ ಮತದಾನ ಚೀಟಿಗಳೇ ಕಾರಣ. ಕೂಡಲೇ ಈ ಬಗ್ಗೆ ತನಿಖೆಯಾಗಬೇಕು.
ಲಾಲನಸಾಬ್‌ ಖುರೇಶಿ, ಬಿಜೆಪಿ ನಗರ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next