Advertisement

500ಕ್ಕೂ ಹೆಚ್ಚು ಬಂಧನ; ಪೈಗಂಬರ್‌ ಅವಹೇಳನ ಖಂಡಿಸಿ ವಿವಿಧೆಡೆ ಮುಂದುವರಿದ ಪ್ರತಿಭಟನೆ

08:10 AM Jun 12, 2022 | Team Udayavani |

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್‌ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ವಕ್ತಾರರನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ಮಧ್ಯಾಹ್ನ ದೇಶಾದ್ಯಂತ ಏಕಕಾಲಕ್ಕೆ ಆರಂಭವಾದ ಮುಸ್ಲಿಂ ಸಮುದಾಯದ ಪ್ರತಿಭಟನೆ ಶನಿವಾರವೂ ಮುಂದುವರಿದಿದೆ.

Advertisement

ಝಾರ್ಖಂಡ್‌, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಗುಜರಾತ್‌, ದಿಲ್ಲಿ, ತೆಲಂಗಾಣ, ಜಮ್ಮು – ಕಾಶ್ಮೀರಗಳಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಝಾರ್ಖಂಡ್‌ನ‌ ರಾಂಚಿಯಲ್ಲಿ ಗಲಭೆಗೆ ಸಿಲುಕಿ ಇಬ್ಬರು ಮೃತಪಟ್ಟು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. 10 ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಇಂಟ ರ್ನೆಟ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ.

ಹಿಂಸಾಚಾರಕ್ಕೆ ಕಾರಣರಾದವರನ್ನು ಬಂಧಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಪೊಲೀಸರು ಕಾರ್ಯ ತತ್ಪರರಾಗಿದ್ದು, 500ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಉತ್ತರಪ್ರದೇಶವೊಂದರಲ್ಲೇ 237 ಮಂದಿ ಗಲಭೆಕೋರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶದ ಎರಡು ನಗರಗಳಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ ನಡೆಸ ಲಾಗಿದೆ. ಸಹರಾನ್ಪುರದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ತಂದ ಇಬ್ಬರು ಆರೋಪಿಗಳು ಮತ್ತು ಕಾನ್ಪುರದಲ್ಲಿ ಒಬ್ಬ ಆರೋಪಿಯ ಮನೆಯನ್ನು ಬುಲ್ಡೋಜರ್‌ ಬಳಸಿ ಕೆಡವಲಾಗಿದೆ.

ಪಶ್ಚಿಮ ಬಂಗಾಲದ ಹೌರಾದಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಅಪಾರ ಆಸ್ತಿಪಾಸ್ತಿ ನಷ್ಟ ವಾಗಿದೆ. ಶನಿವಾರವೂ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಭಾರೀ ಘರ್ಷಣೆ ನಡೆದಿದೆ. ಪ್ರತಿಭಟನಕಾರರು ರಸ್ತೆ ಮತ್ತು ರೈಲು ತಡೆ ನಡೆಸಿದ್ದರಿಂದ ಹಲವು ಸ್ಥಳೀಯ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ರದ್ದಾಗಿದೆ. ಜೂ. 14ರ ವರೆಗೆ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗಲಭೆಪೀಡಿತ ಹೌರಾಗೆ ಭೇಟಿ ನೀಡಲು ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಡಾ| ಸುಕಾಂತ ಮಜುಮಾªರ್‌ರನ್ನು ಪೊಲೀಸರು ಅರ್ಧದಾರಿಯಲ್ಲೇ ತಡೆದು ವಶಕ್ಕೆ ಪಡೆದು, ಅನಂತರ ಬಿಡುಗಡೆ ಮಾಡಿದ್ದಾರೆ.

Advertisement

ದೇವಸ್ಥಾನದ ಮೇಲೆ
ಪೆಟ್ರೋಲ್‌ ಬಾಂಬ್‌
ಝಾರ್ಖಂಡ್‌ನ‌ ರಾಂಚಿಯಲ್ಲಿ ಶುಕ್ರವಾರ ರಾತೋರಾತ್ರಿ ಸೂರ್ಯಮಂದಿರವೊಂದರ ಮೇಲೆ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದಿದ್ದಾರೆ. ದೇಗುಲದ ಅರ್ಚಕ ಮತ್ತು ಅವರ ಕುಟುಂಬ ದೇಗುಲ ಸಂಕೀರ್ಣದಲ್ಲಿ ಮಲಗಿದ್ದಾಗಲೇ ಈ ಕೃತ್ಯ ನಡೆದಿದೆ. ಆದರೆ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಆಗಿಲ್ಲ.

ಪ್ರಯಾಗ್‌ರಾಜ್‌: ಪಿತೂರಿಗಾರ ವಶಕ್ಕೆ
ಶುಕ್ರವಾರ ನಡೆದ ಹಿಂಸಾಚಾರದ ಪಿತೂರಿಗಾರ ಎನ್ನಲಾದ ಜಾವೇದ್‌ ಅಹ್ಮದ್‌ನನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಭೆ ಸಂಬಂಧ 68 ಮಂದಿಯನ್ನು ಬಂಧಿಸಲಾಗಿದ್ದು, ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗ್ಯಾಂಗ್‌ಸ್ಟರ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜಾವೇದ್‌ ಪುತ್ರಿ ದಿಲ್ಲಿ ವಿ.ವಿ. ವಿದ್ಯಾರ್ಥಿನಿಯಾಗಿದ್ದು, ಆಕೆಯೂ ಇಂಥ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ. ಅಗತ್ಯಬಿದ್ದರೆ ತಂಡವನ್ನು ದಿಲ್ಲಿಗೆ ಕಳುಹಿಸಲಾಗುವುದು ಎಂದು ಪ್ರಯಾಗ್‌ರಾಜ್‌ ಎಸ್‌ಎಸ್‌ಪಿ ಹೇಳಿದ್ದಾರೆ.

ಸಮಾಜವಿದ್ರೋಹಿ ಶಕ್ತಿಗಳು ಪೊಲೀಸರ ಮೇಲೆ ಕಲ್ಲುತೂರಾಟ ಮಾಡಲು ಮಕ್ಕಳನ್ನು ಬಳಸಿವೆ. ಅಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ.
-ಅಜಯ್‌ ಕುಮಾರ್‌,
ಪ್ರಯಾಗ್‌ರಾಜ್‌ ಎಸ್‌ಎಸ್‌ಪಿ

ಎಲ್ಲೆಲ್ಲಿ ಏನೇನಾಯಿತು?
ಪ. ಬಂಗಾಲ: ಮುರ್ಷಿದಾಬಾದ್‌, ಹೌರಾ ಜಿಲ್ಲೆ ಗಳಲ್ಲಿ ಜೂ. 14ರ ವರೆಗೆ ಇಂಟರ್ನೆಟ್‌ ಸಂಪರ್ಕ ಸ್ಥಗಿತ
ಲಕ್ನೋ: ಹಿಂಸಾಚಾರ ಸಂಬಂಧ 230 ಮಂದಿ ಬಂಧನ, ಗಲಭೆಕೋರರ ಆಸ್ತಿಪಾಸ್ತಿ ಜಪ್ತಿ
 ಸಹರಾನ್ಪುರ: ಗಲಭೆಕೋರರ ಮನೆಗಳನ್ನು ಬುಲ್ಡೋಜರ್‌ನಿಂದ ಉರುಳಿಸಿದ ಉ. ಪ್ರ. ಪೊಲೀಸರು
 ಝಾರ್ಖಂಡ್‌:ಹಿಂಸಾಚಾರದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ ಸರಕಾರ
 ಜಮ್ಮು -ಕಾಶ್ಮೀರ: ಪೂಂಛ ಜಿಲ್ಲೆ ಸಂಪೂರ್ಣ ಸ್ತಬ್ಧ. ಭದೇರ್‌ವಾನಲ್ಲಿ ಕರ್ಫ್ಯೂ
 ಮಹಾರಾಷ್ಟ್ರ: 100ಕ್ಕೂ ಹೆಚ್ಚು ಪ್ರತಿಭಟನಕಾರರ ವಿರುದ್ಧ ಕೇಸು ದಾಖಲು
ಗುಜರಾತ್‌, ಜಮ್ಮು: ನೂಪುರ್‌ ಶರ್ಮಾ, ನವೀನ್‌ ಕುಮಾರ್‌ ಜಿಂದಾಲ್‌ ಪರ ಕೆಲವೆಡೆ ಹಿಂದೂ ಸಂಘಟನೆಗಳಿಂದ ಧರಣಿ

Advertisement

Udayavani is now on Telegram. Click here to join our channel and stay updated with the latest news.

Next