Advertisement

ಜಿಲ್ಲೆಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ

09:51 AM Jul 27, 2019 | Suhan S |

ಮೈಸೂರು:ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆಹಾನಿ ಸಂಭವಿಸಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ನೀರು ಕೊಡುವುದು ಕಷ್ಟವಾಗಿರುವುದರಿಂದ ಈ ವರ್ಷ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಭತ್ತದ ಬೀಜ ವಿತರಣೆ ಮಾಡುತ್ತಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಮಹಾಂತೇಶಪ್ಪ ತಿಳಿಸಿದರು.

Advertisement

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಶೇ.22 ಮಳೆ ಕೊರತೆ: ಮೈಸೂರು ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ 374.0 ಮಿ.ಮೀ. ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, ಈವರೆಗೆ 291.0 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ.22ರಷ್ಟು ಮಳೆ ಕೊರತೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ತಿ.ನರಸೀಪುರ ತಾಲೂಕಿನಲ್ಲಿ ಶೇ.35ರಷ್ಟು ಮಳೆ ಕೊರತೆ ಉಂಟಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚಿನ ಮಳೆ ಕೊರತೆ ಈ ತಾಲೂಕಿನಲ್ಲಾಗಿದೆ. ಕೆ.ಆರ್‌.ನಗರ ತಾಲೂಕಿನಲ್ಲಿ ಶೇ.30, ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲೂಕುಗಳಲ್ಲಿ ತಲಾ ಶೇ.27ರಷ್ಟು, ಮೈಸೂರು ತಾಲೂಕು ಶೇ.18, ನಂಜನಗೂಡು ತಾಲೂಕು ಶೇ.16, ಹುಣಸೂರು ತಾಲೂಕಿನಲ್ಲಿ ಶೇ.8ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ವಿವರಿಸಿದರು.

ಶೇ.53ರಷ್ಟು ಬಿತ್ತನೆ: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಮಳೆ ಆಶ್ರಿತ ಪ್ರದೇಶದಲ್ಲಿ 2,86,220 ಹೆಕ್ಟೇರ್‌, ನೀರಾವರಿ ಪ್ರದೇಶದಲ್ಲಿ 1,14,100 ಹೆಕ್ಟೇರ್‌ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 4 ಲಕ್ಷದ 320 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಾಗಿದ್ದು, ಈವರೆಗೆ ಮಳೆ ಆಶ್ರಿತ ಪ್ರದೇÍ‌ದಲ್ಲಿ 2,07,860 ಹೆಕ್ಟೇರ್‌, ನೀರಾವರಿ ಪ್ರದೇಶದಲ್ಲಿ 3,700 ಹೆಕ್ಟೇರ್‌ ಸೇರಿದಂತೆ 2,13,203 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ.53ರಷ್ಟು ಬಿತ್ತನೆಯಾಗಿದೆ ಎಂದರು.

ಬಾಡುತ್ತಿವೆ ಬೆಳೆಗಳು: ಏಕದಳ ಧಾನ್ಯಗಳಾದ ರಾಗಿ, ಜೋಳ ಮತ್ತು ಮುಸುಕಿನ ಜೋಳ 42,514 ಹೆಕ್ಟೇರ್‌ ಪ್ರದೇಶದಲ್ಲಿ, ದ್ವಿದಳ ಧಾನ್ಯ ಬೆಳೆಗಳಾದ ಅಲಸಂದೆ, ಹೆಸರು, ಉದ್ದು, ಅವರೆ ಮತ್ತು ತೊಗರಿ 49,541 ಹೆಕ್ಟೇರ್‌ ಪ್ರದೇಶದಲ್ಲಿ ಆವರಿಸಿದೆ. ಎಣ್ಣೆಕಾಳು ಬೆಳೆಗಳಾದ ನೆಲಗಡೆಲೆ, ಹರಳು ಮತ್ತು ಎಳ್ಳು 4,401 ಹೆಕ್ಟೇರ್‌ ಪ್ರದೇಶದಲ್ಲಿ ಆವರಿಸಿದ್ದು, ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು ಮತ್ತು ತಂಬಾಕು ಬೆಳೆಗಳು 1,16,747 ಹೆಕ್ಟೇರ್‌ ಪ್ರದೇಶದಲ್ಲಿ ಆವರಿಸಿದೆ ಎಂದು ಮಾಹಿತಿ ನೀಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದು, ಮುಸುಕಿನ ಜೋಳದ ಬೆಳೆಗಳು ಬಿತ್ತನೆ ಮತ್ತು ಬೆಳವಣಿಗೆ ಹಂತದಲ್ಲಿದೆ. ಉದ್ದು, ಹೆಸರು, ಅಲಸಂದೆ, ತಂಬಾಕು, ಹತ್ತಿ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ಮಳೆ ಕೊರತೆಯಿಂದಾಗಿ ಬೆಳೆಗಳು ಬಾಡುತ್ತಿವೆ ಎಂದು ವಿವರಿಸಿದರು.

Advertisement

ಭತ್ತದ ಬೆಳೆ ಕಷ್ಟ: ಕೆಆರ್‌ಎಸ್‌ ಮತ್ತು ಹಾರಂಗಿ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆ ನಡೆದು, ನಾಲೆಗಳಿಗೆ ಬಿಡಲಾಗಿದೆ. ಆದರೆ, ಕಬಿನಿ ಜಲಾಶಯದ ನೀರಿನ ಮಟ್ಟ ಕಡಿಮೆ ಇರುವ ಜೊತೆಗೆ ಸುಪ್ರೀಂ ಕೋರ್ಟ್‌ ಆದೇಶದಂತೆ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದರಿಂದ ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ವರ್ಷ ಬೆಳೆದು ನಿಂತಿರುವ ಬೆಳೆಗೆ ಬಿಟ್ಟು, ಹೊಸದಾಗಿ ಭತ್ತದ ಬೆಳೆಗೆ ನೀರು ಕೊಡುವುದು ಕಷ್ಟ. ಹೀಗಾಗಿ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಭತ್ತದ ಬೀಜ ವಿತರಣೆ ಮಾಡುತ್ತಿಲ್ಲ ಎಂದು ತಿಳಿಸಿದರು.

ವರ್ಗಾವಣೆ: ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ದೂರದ ಊರುಗಳ ಶಾಲೆಗಳನ್ನು ಯಾವ ಶಿಕ್ಷಕರೂ ಆಯ್ಕೆ ಮಾಡಿಕೊಳ್ಳಲ್ಲ. ಇಲ್ಲಿಗೇ ಹೋಗಿ ಎಂದು ನಾವು ಬಲವಂತವಾಗಿ ಹೇರಲಾಗಲ್ಲ ಎಂದು ಡಿಡಿಪಿಐ ಉತ್ತರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ, ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಮಾಹಿತಿ ಕೊಡುವಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದರೆ ಇಲಾಖೆಯಲ್ಲಿ ಎಷ್ಟರ ಮಟ್ಟಿಗೆ ನಿಮ್ಮ ಹಿಡಿತ ಇದೆ ಎಂಬುದನ್ನು ತೋರಿಸುತ್ತದೆ. ಸರ್ಕಾರಿ ವ್ಯವಸ್ಥೆ ಈ ರೀತಿ ಆದರೆ ಹೇಗೆ ಸೇವೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ನಿಯೋಜಿತ ಶಿಕ್ಷಕರು ಮೂಲ ಸ್ಥಳಗಳಿಗೆ ಕಳುಹಿಸುವಂತೆ ತಾಕೀತು ಮಾಡಿದರು.

ಜನರೇ ಗಲೀಜು ಮಾಡ್ತಾರೆ: ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣದಲ್ಲಿದ್ದು, ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಮುಂಗಾರು ಆರಂಭವಾಗಿರುವುದರಿಂದ ಅಲ್ಲಲ್ಲಿ ಮಳೆ ನೀರು ನಿಂತು ಲಾರ್ವಾ ಬೆಳೆಯಲು ಕಾರಣವಾಗುತ್ತಿದೆ. ನೀರು ಶೇಖರಣೆ ಬಗ್ಗೆ ಮನೆ ಮನೆಗೂ ಭೇಟಿ ಮಾಡಿ ಮಾಹಿತಿ ಕೊಡುತ್ತಿದ್ದೇವೆ. ಆದರೆ, ಸ್ಥಳೀಯ ಸಂಸ್ಥೆಗಳವರು ಸ್ವಚ್ಛತೆ ಮಾಡಿದರೂ ಜನ ಅಲ್ಲಿಗೇ ಕಸ ಹಾಕಿ ಗಲೀಜು ಮಾಡುತ್ತಾರೆ. ಇದು ಸಾಂಕ್ರಮಿಕ ರೋಗಗಳು ಕಾರಣವಾಗುತ್ತದೆ ಎಂದು ಡಿಎಚ್ಒ ಡಾ.ವೆಂಕಟೇಶ್‌ ತಿಳಿಸಿದರು.

ಟೆಂಡರ್‌ ಆಗಿಲ್ಲ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಪಿ.ಶಿವಣ್ಣ, ರಾಜ್ಯಮಟ್ಟದಲ್ಲಿ ಟೆಂಡರ್‌ ಆಗದ ಕಾರಣ ಜಿಲ್ಲೆಗೆ ಜೂನ್‌-ಜುಲೈ ತಿಂಗಳಲ್ಲಿ ತೊಗರಿಬೇಳೆ ಸರಬರಾಜಾಗಿಲ್ಲ. ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಕೇಜಿಗೆ 90 ರಿಂದ 100 ರೂ. ದರ ಇದೆ. ಸರ್ಕಾರ ಕೇಜಿಗೆ 70 ರೂ.ಗಳಿಗಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡುವಂತಿಲ್ಲ ಅಂದಿದ್ದರಿಂದ ಟೆಂಡರ್‌ ಆಗಿರಲಿಲ್ಲ. ಈ ತಿಂಗಳು ಟೆಂಡರ್‌ ಆಗಿದ್ದು, ಆಗಸ್ಟ್‌ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ತೊಗರಿಬೇಳೆ ಕೊಡಲಾಗುವುದು ಎಂದು ಹೇಳಿದರು. ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಮುಖ್ಯ ಯೋಜನಾಧಿಕಾರಿ ಪದ್ಮಶೇಖರ ಪಾಂಡೆ ಸಭೆಯಲ್ಲಿದ್ದರು.

ಮೈಸೂರಿನ ಗೌರವ ಕಳೆಯಬೇಡಿ:

ಎಸ್‌ಎಸ್‌ಎಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಕಳೆದ ವರ್ಷ ರಾಜ್ಯದಲ್ಲಿ 11ನೇ ಸ್ಥಾನದಲ್ಲಿದ್ದ ಮೈಸೂರು ಈ ವರ್ಷ 17ನೇ ಸ್ಥಾನಕ್ಕೆ ಕುಸಿದಿದೆ. ಫ‌ಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳದೆ ಮೈಸೂರಿನ ಗೌರವ ಕಳೆಯಬೇಡಿ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಡಿಡಿಪಿಐ ಪಾಂಡುರಂಗ, ಸರ್ಕಾರಿ ಶಾಲೆಗಳು ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳ ಫ‌ಲಿತಾಂಶ ಉತ್ತಮವಾಗಿದೆ. ಆದರೆ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಫ‌ಲಿತಾಂಶ ಸುಧಾರಣೆಯಾಗುತ್ತಿಲ್ಲ. ಖಾಸಗಿ ಶಾಲೆಗಳಲ್ಲಿನ ಶಿಕ್ಷಕರು ನಿವೃತ್ತಿಯಾದರೆ ಆಡಳಿತ ಮಂಡಳಿ ಕೂಡಲೇ ಮತ್ತೂಬ್ಬ ಶಿಕ್ಷಕರನ್ನು ನೇಮಕ ಮಾಡಿಕೊಂಡು ಪಾಠ ಮಾಡಿಸಲು ಮುಂದಾಗದಿರುವುದೂ ಕಾರಣ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಕೆ.ಜ್ಯೋತಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಶೈಕ್ಷಣಿಕ ನಗರಿ ಎಂದು ಹೆಸರಿದೆ. ಇಂತಹ ಕಡೆ ಎಸ್‌ಎಸ್‌ಎಲ್ಸಿ ಫ‌ಲಿತಾಂಶ ಕುಸಿತವಾಗುತ್ತಿರುವುದು ಸರಿಯಲ್ಲ.
ಫ‌ಲಿತಾಂಶ ಸುಧಾರಣೆಯಾಗದ ಖಾಸಗಿ ಶಾಲೆಗಳ ಅನುದಾನ ಹಿಂಪಡೆಯಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಎಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಜಾಗನಕೋಟೆ, ನಡಹಳ್ಳಿ, ಬಳ್ಳೆ ಹಾಡಿ ಸೇರಿದಂತೆ 9 ಗ್ರಾಮಗಳ ಶಾಲೆಗಳಲ್ಲಿ ಶಿಕ್ಷಕರುಗಳೇ ಇಲ್ಲ. ಅಲ್ಲಿಗೆ ಇನ್ನೊಬ್ಬ ಶಿಕ್ಷಕರು ಬರೋವರೆಗೆ ಇದ್ದವರನ್ನು ರಿಲೀವ್‌ ಮಾಡಿ ಕಳುಹಿಸಿದಿರಿ ಎಂದು ಡಿಡಿಪಿಐಯನ್ನು ಪ್ರಶ್ನಿಸಿದರು.
ಆಸ್ಪತ್ರೆ ಉದ್ಘಾಟನೆಯಾಗಿ ಮೂರು ವರ್ಷವಾದರೂ ವೈದ್ಯರಿಲ್ಲ!

 ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಗ್ರಾಮದಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ಮೂರು ವರ್ಷವಾದರೂ ಅಲ್ಲಿಗೆ ವೈದ್ಯಕೀಯ ಸಿಬ್ಬಂದಿ ನೇಮಿಸದಿರುವುದು ಕೆಡಿಪಿ ಸಭೆಯಲ್ಲಿ ಬೆಳಕಿಗೆ ಬಂತು.ಸಭೆಗೆ ಮಾಹಿತಿ ನೀಡಿದ ಡಿಎಚ್ಒ ಡಾ.ವೆಂಕಟೇಶ್‌, ಮೂರು ವರ್ಷಗಳ ಹಿಂದೆ ಈ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿದ್ದರೂ ಅಲ್ಲಿಗೆ ಮಾನವ ಸಂಪನ್ಮೂಲ ಒದಗಿಸಲು ಆರೋಗ್ಯ ಇಲಾಖೆಯ ಅನುಮತಿ ದೊರೆತಿಲ್ಲವಾದ್ದರಿಂದ ಅಲ್ಲಿಗೆ ಸಂಚಾರಿ ಘಟಕದ ವೈದ್ಯರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಇದನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯ್ತಿ ಸಿಇಒ, ಉದ್ಘಾಟನೆಯಾಗಿ ಮೂರು ವರ್ಷವಾದರೂ ವೈದ್ಯ ಸಿಬ್ಬಂದಿ ನೇಮಕವಾಗಿಲ್ಲ ಎಂದರೆ ಜಿಲ್ಲಾಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಜಿಲ್ಲೆಯಲ್ಲಿ ಈ ತರಹದ ಪ್ರಕರಣಗಳು ಎಷ್ಟಿದೆ ಎಂಬುದನ್ನು ಪಟ್ಟಿ ಮಾಡಿ ಇಲಾಖಾ ಮಟ್ಟದಲ್ಲಿ ಫಾಲೋಅಫ್ ಮಾಡಿ, ಇಲ್ಲದಿದ್ದರೆ ಕೆಲಸವಾಗಲ್ಲ ಎಂದು ತಾಕೀತು ಮಾಡಿದರು.
ಆ.15ರೊಳಗೆ ಸಮವಸ್ತ್ರ , ಶೂ, ಸೈಕಲ್:

ಆಗಸ್ಟ್‌ 15 ಅಥವಾ 20ರೊಳಗೆ ಶಾಲಾ ಮಕ್ಕಳಿಗೆ ಸಮವಸ್ತ್ರ, ಸಾಕ್ಸ್‌-ಶೂ ವಿತರಣೆ, 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಗು ವುದು ಎಂದು ಡಿಡಿಪಿಐ ಪಾಂಡುರಂಗ ಸಭೆಗೆ ತಿಳಿಸಿದರು. ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ 1 ಲಕ್ಷ ರೂ. ಮೀರಿದರೆ ಅಲ್ಪಾವಧಿ ಟೆಂಡರ್‌ ಕರೆಯಬೇಕಾಗುತ್ತದೆ. ರಾಜ್ಯ ಕಚೇರಿಯಿಂದಲೇ ನೇರವಾಗಿ ಹಣ ಹೋಗುತ್ತದೆ. ಈವರೆಗೆ ರಾಜ್ಯ ದಿಂದ ಹಣ ಬಾರದಿರುವುದರಿಂದ ಸಾಕ್ಸ್‌, ಶೂ ವಿತರಿಸಿಲ್ಲ. ಹಣ ಬಂದ ಕೂಡಲೇ ಎಸ್‌ಡಿಎಂಸಿಯವರು ಖರೀದಿ ಮಾಡಿ ವಿತರಣೆ ಮಾಡುತ್ತಾರೆ. ಜಿಲ್ಲೆಯಲ್ಲಿ ಪಠ್ಯಪುಸ್ತಕ ಶೇ.100 ರಷ್ಟು ಪೂರೈಕೆ ಮಾಡಲಾಗಿದೆ. ದಾಖಲಾತಿ ಹೆಚ್ಚಾಗಿರುವ ಶಾಲೆಗಳಲ್ಲಿ ಪಠ್ಯಪುಸ್ತಕಗಳ ಕೊರತೆ ಕಂಡು ಬಂದಿದ್ದು, ಒಂದೆರಡು ದಿನಗಳಲ್ಲಿ ಸರಿಪಡಿಸುವುದಾಗಿ ಹೇಳಿದರು.
ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ: ಸಿಇಒ ಎಚ್ಚರಿಕೆ

ಮೈಸೂರು: ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಗಳಿಗೆ ಆಯಾಯ ಇಲಾಖೆಗಳ ಜಿಲ್ಲಾ ಮುಖ್ಯಸ್ಥರುಗಳೇ ಬರಬೇಕು. ಇಲ್ಲವಾದಲ್ಲಿ ಕ್ರಮಕ್ಕಾಗಿ ನಿಮ್ಮ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಜಿಪಂ ಸಿಇಒ ಕೆ.ಜ್ಯೋತಿ ಎಚ್ಚರಿಸಿದರು. ಜಿಪಂ ವ್ಯಾಪ್ತಿಗೆ ಬರುವ 33 ಇಲಾಖೆಗಳ ಪೈಕಿ ಹತ್ತಕ್ಕೂ ಹೆಚ್ಚು ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಅನುಮತಿಯನ್ನೇ ಪಡೆಯದೆ ಗೈರಾಗಿರುವುದಲ್ಲದೆ, ತಮ್ಮ ಕಚೇರಿಯ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆಗೂ ಮುನ್ನ ಹೊಸದಾಗಿ ಅಧ್ಯಕ್ಷೆಯಾಗಿದ್ದ ಪರಿಮಳಾ ಶ್ಯಾಂ ಅವರಿಗೆ ಇದು ಮೊದಲ ಕೆಡಿಪಿ ಸಭೆ. ಹೀಗಾಗಿ ಸಭೆಯಲ್ಲಿ ಹಾಜರಿರುವ ಎಲ್ಲ್ಲಾ ಅಧಿಕಾರಿಗಳು ಪರಿಚಯ ಮಾಡಿಕೊಳ್ಳುವಂತೆ ಸೂಚಿಸಿದರು.
ಆಗ ಹತ್ತಕ್ಕೂ ಹೆಚ್ಚು ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿ ಗಳು ಅನುಮತಿ ಪಡೆಯದೆ, ಸಭೆಗೆ ಗೈರಾಗಿ ತಮ್ಮ ಕಚೇರಿಯ ಸಿಬ್ಬಂದಿಯನ್ನು ಕಳುಹಿಸಿರುವುದು ಪತ್ತೆ ಯಾಯಿತು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಇಒ, ಕೆಡಿಪಿ ಸಭೆಗೆ ಹಾಜರಾಗುವಂತೆ ಒಂದು ವರ್ಷದಿಂದ ವಿನಂತಿ ಮಾಡುತ್ತಿದ್ದೇವೆ. ಪದೇ ಪದೆ ಹೇಳಲು ನೀವು ಶಾಲಾ ಮಕ್ಕಳಲ್ಲ. ಸಕಾರಣವಿಲ್ಲದೆ ಗೈರಾಗುವುದು ಚೆನ್ನಾಗಿ ಕಾಣುವುದಿಲ್ಲ. ಶಿಷ್ಟಾಚಾರ-ಸಂಪ್ರದಾಯಕ್ಕಾಗಿ ಕೆಡಿಪಿ ಸಭೆ ನಡೆಯುವುದಲ್ಲ. ಈ ಸಭೆಯಲ್ಲಿ ಇಲಾಖಾ ಯೋಜನೆಗಳ ಚರ್ಚೆ ಯಾಗುವುದರಿಂದ ನಿಗದಿತ ಸಮಯದಲ್ಲಿ ಕಾರ್ಯ ಕ್ರಮಗಳ ಅನುಷ್ಠಾನ ಸಾಧ್ಯವಾಗುತ್ತದೆ. ಸಮಸ್ಯೆ ಗಳಿದ್ದರೆ ಮೇಲ್ಮಟ್ಟಕ್ಕೆ ತಿಳಿಸಿ ಯೋಜನೆ ಜಾರಿ ಮಾಡಲು ಅನುಕೂಲವಾಗುತ್ತದೆ. ಸುಮ್ಮನೆ ಹೋಗಿ ಕುಳಿತು ಬರೋಕೆ ಯಾಕೆ ಹೋಗಬೇಕು ಎಂಬ ಭಾವನೆ ಸರಿಯಲ್ಲ. ಗೈರಾದವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next