ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸೂತ್ರಧಾರಿ ಎನ್ನಲಾಗಿರುವ ಪರಶುರಾಮ ವಾಗ್‌ಮೋರೆ ಎಸ್‌ಐಟಿ ಮುಂದೆ ನೀಡಿರುವ ಹೇಳಿಕೆಯ ಪ್ರಕಾರ ಪ್ರಗತಿಪರ ಚಿಂತಕರಾದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ನಟ ಗಿರೀಶ್ ಕಾರ್ನಾಡ್, ಸಾಹಿತಿಗಳಾದ ಕೆ ಎಸ್ ಭಗವಾನ್, ನರೇಂದ್ರ ನಾಯಕ್, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ಹತ್ಯೆಗೆ ಸಂಚು ರೂಪಣೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಕೋರಿ ಎಸ್‌ಐಟಿ (ವಿಶೇಷ ತನಿಖಾ ದಳ), ಗೃಹ ಇಲಾಖೆಗೆ ಪತ್ರ ಬರೆದಿರುವುದಾಗಿ ವರದಿಗಳು ತಿಳಿಸಿವೆ.
ಹತ್ಯೆ ಸಂಚಿಗೆ ಗುರಿಯಾಗಿರುವ ಈ ನಾಲ್ವರಿಗೂ ಸಶಸ್ತ್ರ ಭದ್ರತಾ ಪಡೆಯನ್ನು ಒದಗಿಸಬೇಕು; ಷವರ ಕಚೇರಿ, ನಿವಾಸಗಳಿಗೆ ಸಿಸಿ ಟಿವಿ ಅಳವಡಿಸಬೇಕು; ಅವರು ಹೋಗಿ ಬರುವ ಸ್ಥಳಗಳಿಗೆ ಎಸ್ಕಾರ್ಟ್ ಒದಗಿಸಬೇಕು ಎಂಬುದಾಗಿಯೂ ಎಸ್‌ಐಟಿ ಗೃಹ ಇಲಾಖೆಗೆ ಮನವಿ ಮಾಡಿದೆ.
2017ರ ಸೆ.5ರಂದು ಪತ್ರಕರ್ತೆ ಗೌರಿ ಹತ್ಯೆ ನಡೆದಿತ್ತು. ಇದನ್ನು ಅನುಸರಿಸಿ ಗಿರೀಶ್ ಕಾರ್ನಾಡ್ ಸಹಿತ ನಾಲ್ವರು ಪ್ರಮುಖ ಪ್ರಗತಿಪರ ಚಿಂತಕರು ಕೂಡ ಹತ್ಯೆಗೀಡಾಗುವ ಭಯ, ಆತಂಕ ಮೂಡಿತ್ತು. “ಈ ಪ್ರಗತಿಪರರನ್ನು ಹತ್ಯೆ ಗೈಯುವ ಯೋಜನೆಯಲ್ಲಿ ಇವರ ಚಲನ ವಲಯನಗಳ ಮೇಲೆ ಹದ್ದಿನ ಕಣ್ಣಿಡಲಾಗಿತ್ತು’ ಎಂದು ವಾಗ್‌ಮೋರೆ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾನೆ.
ಈ ನಡುವೆ ಚಿಂತಕ ನರೇಂದ್ರ ಧಾಬೋಲ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆ ಪಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರದ ಎಸ್‌ಐಟಿ ತಂಡ ಪರಶುರಾಮ ವಾಗ್‌ಮೋರೆಯನ್ನು ತನಿಖೆಗಾಗಿ ವಶಕ್ಕೆ ಪಡೆಯಲು ಬೆಂಗಳೂರಿಗೆ ಆಗಮಿಸಿದೆ ಎಂದು ವರದಿಗಳು ತಿಳಿಸಿವೆ.