Advertisement

ಬಿಜೆಪಿ ಭದ್ರನೆಲೆಗೆ ಇನ್ನಷ್ಟು ಸಂಘಟನಾತ್ಮಕ ಶಕ್ತಿ

11:33 PM Feb 22, 2020 | Sriram |

ಮಂಗಳೂರು: ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ನೂತನ ಅಧ್ಯಕ್ಷರಾಗಿ ಸುದರ್ಶನ ಎಂ. ಸೋಮವಾರ ಪದಗ್ರಹಣ ಮಾಡಲಿದ್ದಾರೆ.ಮೂಡುಬಿದಿರೆಯ ಬಿಲ್ಲವ ಸಮುದಾಯದ 43ರ ಹರೆಯದ ಬಿ.ಕಾಂ. ಪದವೀಧರ ಸುದರ್ಶನ್‌ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ, ಬಳಿಕ ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನವನ್ನು ವಿಧ್ಯುಕ್ತವಾಗಿ ವಹಿಸಿಕೊಳ್ಳುವ ಸಂದರ್ಭದಲ್ಲಿ ಉದಯವಾಣಿ ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

Advertisement

ಬೂತ್‌ಮಟ್ಟದಿಂದ ಜಿಲ್ಲಾಧ್ಯಕ್ಷತೆವರೆಗಿನ ನಿಮ್ಮ ಪಯಣ
ನಾನು ಮೂಲತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಸಾಮಾಜಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವನು. 1983ರಲ್ಲಿ ಚಂದ್ರಹಾಸ ಅವರು ನನ್ನನ್ನು ಸಂಘದ ಸಂಪರ್ಕಕ್ಕೆ ಕರೆತಂದವರು. ರಾಷ್ಟ್ರಕ್ಕೆ, ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕು ಎಂಬ ತುಡಿತ ಬಾಲ್ಯದಲ್ಲೇ ಮೊಳಕೆಯೊಡೆದಿತ್ತು. 1994ರಲ್ಲಿ ಬಿಜೆಪಿ ಬೂತ್‌ ಮಟ್ಟದ ಹೊಣೆಗಾರಿಕೆಯನ್ನು ನನಗೆ ಹಾಗೂ ಸಂತೋಷ್‌ ಕುಮಾರ್‌ ಅವರಿಗೆ ನಾಯಕರಾದ ಎಂ.ಎಸ್‌. ಕೋಟ್ಯಾನ್‌ ಹಾಗೂ ಬಾಹುಬಲಿ ಪ್ರಸಾದ್‌ ವಹಿಸಿಕೊಟ್ಟರು. ಮುಂದಕ್ಕೆ 2003ರಲ್ಲಿ ಬಜರಂಗ ದಳ ತಾಲೂಕು ಸಂಚಾಲಕನಾಗಿ, ಬಳಿಕ ಜಿಲ್ಲಾ ಸಂಚಾಲಕನಾಗಿ ಕಾರ್ಯನಿರ್ವಹಿಸಿದೆ. ನನ್ನ ಕೆಲಸ, ಕಾರ್ಯನಿಷ್ಠೆಯನ್ನು ಗುರುತಿಸಿ 2009ರಲ್ಲಿ ಹಿರಿಯರು ಸಂಘಟನ ಕಾರ್ಯದರ್ಶಿ ಪ್ರಸಾದ್‌ ಕುಮಾರ್‌ ಸೂಚನೆಯಂತೆ ಬಿಜೆಪಿ ಮೂಡುಬಿದಿರೆ ಮಂಡಲ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ವಹಿಸಿಕೊಂಡೆ. ಮುಂದಕ್ಕೆ ದ.ಕ. ಜಿಲ್ಲಾ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕನಾಗಿ ಕಾರ್ಯನಿರ್ವಹಿಸಿದೆ. ಹಿಂದಿನ ಅವಧಿಯಲ್ಲಿ 3 ವರ್ಷಗಳ ಕಾಲ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದೆ.

 ಸಾಮಾನ್ಯ ಕಾರ್ಯಕರ್ತನಾಗಿದ್ದವರು ಇಂದು ಜಿಲ್ಲೆಯಲ್ಲಿ ಪಕ್ಷದ ಅತ್ಯುನ್ನತ ಸ್ಥಾನಕ್ಕೇರಿದ್ದೀರಿ. ಇದು ಹೇಗೆ ಸಾಧ್ಯವಾಯಿತು?
ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಿ ಬೆಳೆಸುವುದು ಬಿಜೆಪಿಯ ವಿಶೇಷತೆೆ. ಅದುದರಿಂದಲೇ ಇಲ್ಲಿ ಬಡಕುಟುಂಬದಿಂದ ಬಂದವರು ದೇಶದ ಪ್ರಧಾನಿಯಾಗಲು, ಸಾಮಾನ್ಯ ಕಾರ್ಯರ್ತನೋರ್ವ ಸಂಸದ, ಪಕ್ಷದ ರಾಜ್ಯಾಧ್ಯಕ್ಷರಾಗುತ್ತಾರೆ. ಓರ್ವ ಸಾಮಾನ್ಯ ಕಾರ್ಯಕರ್ತ ಅತ್ಯುನ್ನತ ಪದವಿಗೇರಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ.ಪ್ರಾರಂಭದಿಂದಲೂ ಯಾವುದೇ ಹುದ್ದೆಯ ನಿರೀಕ್ಷೆ ಮಾಡಿದವನಲ್ಲ. ವಹಿಸಿದ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಾ ಬಂದವನು. ಹಾಗೆಯೇ ಜಿಲ್ಲಾ ಅಧ್ಯಕ್ಷತೆಯನ್ನು ನಿರೀಕ್ಷಿಸಿರಲಿಲ್ಲ. ಸಂಘದ ಮಾರ್ಗದರ್ಶನ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ.

 ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಕ್ಷ ಅಧಿಕಾರದಲ್ಲಿದೆ. ಅದನ್ನು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಜಿಲ್ಲೆಯ ಪ್ರಗತಿಗೆ ಯಾವ ರೀತಿ ಬಳಸಿಕೊಳ್ಳುತ್ತೀರಿ ?
ಜಿಲ್ಲೆಯಲ್ಲಿ ನಮ್ಮ ಪಕ್ಷದ ಏಳು ಮಂದಿ ಶಾಸಕರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು ಜಿಲ್ಲೆಯ ಯಾವುದೇ ಬೇಡಿಕೆಗಳಿಗೆ ತತ್‌ಕ್ಷಣ ಸ್ಪಂದಿಸುವ ಮುಖ್ಯಮಂತ್ರಿ ಇದ್ದಾರೆ. ನಮ್ಮ ಜಿಲ್ಲೆಯವರೇ ಆದ ನಳಿನ್‌ ಕುಮಾರ್‌ ಕಟೀಲು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಕೇಂದ್ರದಲ್ಲಿ ನಮ್ಮದೇ ಸರಕಾರವಿದೆ. ಇದೊಂದು ನನ್ನ ಪಾಲಿಗೆ ಉತ್ತಮ ಅವಕಾಶ ಎಂದು ಭಾವಿಸುತ್ತೇನೆ. ಈ ಸದವಕಾಶವನ್ನು ಬಳಸಿಕೊಂಡು ಎಲ್ಲರ ಜತೆ ಸಮನ್ವಯ ಸಾಧಿಸಿ ಪಕ್ಷದ ಸಂಘಟನೆ ಹಾಗೂ ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತೇನೆ.

 ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಜಾತಿ ರಾಜಕಾರಣ ಕೆಲಸ ಮಾಡಿದೆಯೇ?
ಖಂಡಿತವಾಗಿಯೂ ಇಲ್ಲ. ಬಿಜೆಪಿಯ ವೈಶಿಷ್ಟ್ಯ 
ಎಂದರೆ ಬಿಜೆಪಿ ಜಾತಿಗಿಂತ ಪಕ್ಷ ನಿಷ್ಠೆ ಮತ್ತು ಬದ್ಧತೆ ಹಾಗೂ ಪ್ರಾಮಾಣಿಕ ಕಾರ್ಯಕರ್ತನಿಗೆ ಪ್ರಾಧಾನ್ಯ ನೀಡುತ್ತದೆ. ನಾನು ಜಾತಿ ವ್ಯವಸ್ಥೆಯನ್ನು ಮೀರಿ ಬೆಳೆದವನು. ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ,ಒಂದೇ ದೇವರು ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ಇಂದಿಗೂ ಹೆಚ್ಚಿನ ಮಂದಿಗೆ ನಾನು ಯಾವ ಜಾತಿಗೆ ಸೇರಿದವನು ಎಂದು ತಿಳಿದಿಲ್ಲ. ಇದರ ಜತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಜಾತಿ ಪ್ರಶ್ನೆಯೇ ಬರುವುದಿಲ್ಲ. ಪಕ್ಷ ನಿಷ್ಠೆ ಮತ್ತು ಸಂಘಟನ ಶಕ್ತಿಯೇ ಇಲ್ಲಿ ಪ್ರಮುಖವಾಗಿರುತ್ತದೆ ಹೊರತು ಜಾತಿಯಲ್ಲ. ನನ್ನಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಪಕ್ಷದ ಹಿರಿಯರು, ಶಕ್ತಿ ತುಂಬಿರುವ ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ.

Advertisement

ಪಕ್ಷ ಸಂಘಟನೆ ಕಾರ್ಯಯೋಜನೆ
ದ.ಕ. ಜಿಲ್ಲೆ ಬಿಜೆಪಿಯ ಭದ್ರಕೋಟೆ. ಜಿಲ್ಲೆ 7 ಮಂದಿ ಶಾಸಕರನ್ನು, ಸಂಸದರನ್ನು ಹೊಂದಿದೆ. ಜಿ.ಪಂ.ನಲ್ಲಿ ನಾವೇ ಅಧಿಕಾರದಲ್ಲಿದ್ದೇವೆ. ಮಹಾನಗರ ಪಾಲಿಕೆಯ ಆಡಳಿತವೂ ನಮ್ಮ ವಶಕ್ಕೆ ಬಂದಿದೆ. ಜಿಲ್ಲೆಯಲ್ಲಿ ಹೆಚ್ಚಿನ ನಗರಾಡಳಿತ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇದೆಲ್ಲವೂ ನಮ್ಮ ಹಿರಿಯರ ತ್ಯಾಗ, ಮಾರ್ಗದರ್ಶನ ಮತ್ತು ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಸಾಧ್ಯವಾಗಿದೆ. ಕಾರ್ಯಕರ್ತರೇ ನಮ್ಮ ಆಸ್ತಿ. ಅವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಜಿಲ್ಲೆಯಲ್ಲಿ ಹೊಂದಿರುವ ಭದ್ರನೆಲೆಯಲ್ಲಿ ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯ ಮಾಡುತ್ತೇನೆ. ಪಕ್ಷ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಮಾರ್ಗದರ್ಶನ, ಸಲಹೆಗಳನ್ನು ಪಡೆಯುತ್ತೇನೆ. ಪಕ್ಷದ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಸಂತೋಷ್‌ಜಿ, ರಾಜ್ಯ ಸಂಘಟನ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರ ಮಾರ್ಗದರ್ಶನವನ್ನೂ ಪಡೆಯುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next