Advertisement
ಸಂಜಯ್ ಮೂಲತಃ ಓರ್ವ ಎಂಜಿನಿಯರ್ ಆಗಿದ್ದರೂ, ಕೃಷಿಯಲ್ಲಿ ಏನಾದರೂ ಮಾಡಲೇಬೇಕು ಎಂಬ ತುಡಿತದಿಂದ ತಮ್ಮ 24 ಎಕರೆ ತೋಟದಲ್ಲಿ ಸುಧಾರಣೆ ತರುವ ಪ್ರಯತ್ನಕ್ಕೆ ಮುಂದಾದರು. ಇದಕ್ಕೆ ಅವರ ತಂದೆ ಬಸಪ್ಪ ಪಂಚಗಾಂವಿ ಹಾಗೂ ಸಹೋದರರಾದ ಸಂಗಪ್ಪ ಪಂಚಗಾಂವಿ, ರಮೇಶ್ ಪಂಚಗಾಂವಿಯವರ ಬೆಂಬಲ ಸಿಕ್ಕಿತು.
ಈ ತೋಟದಲ್ಲಿ ಒಟ್ಟು 7,000 ಶ್ರೀಗಂಧದ ಮರಗಳಿವೆ. ಜತೆಗೆ 2,500 ಸಾವಿರ ಪೇರಲ ಗಿಡಗಳು, 1,250 ಜಂಬು ನೇರಳೆ ಗಿಡಗಳು, 1,200 ತೈವಾನ್ ಪಪ್ಪಾಯ, 1,500 ಕೇಸರ್ ಮಾವಿನ ಗಿಡಗಳು, 800 ಆಪೂಸ್ ಮಾವಿನ ಗಿಡಗಳು, 300 ಹಿಮ್‌ಸಾಗರ ಮಾವಿನ ಗಿಡಗಳು, 1,000 ನುಗ್ಗೆ ಗಿಡಗಳೂ ಇವೆ. ಇದರ ಜತೆಗೆ ಆ್ಯಪಲ…, ವೈಟ್ ನೇರಳೆ, ಸೀತಾಫಲ, ರಾಮಫಲ, ಲಕ್ಷ್ಮಣ ಫಲ, ಹನುಮಾನ್ ಫಲ, ನಿಂಬು, ಕಿತ್ತಳೆ, ಮೂಸಂಬಿ, ಸ್ಟ್ರಾಬೆರಿ ಮುಂತಾದವುಗಳಿವೆ. ದುಬಾರಿ ಮಾವಿನ ಹಣ್ಣಿನ ತಳಿ ಎನಿಸಿರುವ ಪರ್ಪಲ್ ಮ್ಯಾಂಗೊ, ಮಾಲ್ಟಾ, ಡ್ರಾಗನ್ ಫ್ರುಟ್ ಮುಂತಾದವೂ ಇಲ್ಲಿವೆ. ರಿಸ್ಕ್ ಇಲ್ಲ
ಈ ತೋಟದ ನಿರ್ವಹಣಾ ವೆಚ್ಚ ತುಂಬಾ ಕಮ್ಮಿ. ಪೂರ್ತಿ ನೈಸರ್ಗಿಕ ಕೃಷಿ ಅಳವಡಿಸಿರುವುದರಿಂದ ರಾಸಾಯನಿಕ ಗೊಬ್ಬರಗಳ ಖರ್ಚು ಉಳಿದ ಹಾಗಾಯಿತು. ನಿರಂತರವಾಗಿ ಜೀವಾಮೃತವನ್ನು ಸಿಂಪಡಣೆ ಮತ್ತು ನೀರಿನ ಮೂಲಕವೂ ಉಣಿಸುತ್ತಿದ್ದಾರೆ. ಪಪ್ಪಾಯಕ್ಕೆ ಬರುವ ವೈರಸ್ ಕಾಟ ಒಂದು ಬಿಟ್ಟರೆ ತೋಟ ನಿರ್ವಹಿಸಲು ಇನ್ಯಾವ ತೊಂದರೆಯೂ ಬಂದಿಲ್ಲ. ಬರೀ ಅಡಕೆ, ಬರೀ ತೆಂಗು ಹೀಗೆ ಒಂದೇ ಬೆಳೆ ಬೆಳೆದು ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಮಿಶ್ರ ಬೆಳೆ ಬೆಳೆದರೆ ರೈತನಿಗೆ ಭದ್ರತೆ ಇರುತ್ತದೆ ಎನ್ನುವುದಕ್ಕೆ ಸಂಜಯ್ ಅವರೇ ಸಾಕ್ಷಿ.
Related Articles
ಇವಿಷ್ಟು ಬೆಳೆಗಳಲ್ಲಿ ರೆಡ್‌ಲೇಡಿ ಪಪ್ಪಾಯದಿಂದ ಒಳ್ಳೆಯ ದುಡ್ಡು ಬರತೊಡಗಿದೆ. ಒಟ್ಟು 24 ಎಕರೆಯಲ್ಲಿ ಶ್ರೀಗಂಧದ ನಡುವೆ ಬೆಳೆಸಿರುವ 12 ಸಾವಿರ ಪಪ್ಪಾಯ ಗಿಡಗಳಿಂದ ಈಗಾಗಲೇ ಸುಮಾರು 15 ಟನ್ ಇಳುವರಿ ಬಂದಿದೆ. ಶುರುವಿನಲ್ಲಿ ಕೆ.ಜಿ. ಹಣ್ಣಿಗೆ 7-8 ರೂ.ಇದ್ದಿದ್ದು ಈಗ 25 ರೂ. ವರೆಗೆ ಹೋಗಿದೆ. ದರ ಜಾಸ್ತಿಯಾದ ಸಮಯದಲ್ಲೇ ಇವರ ತೋಟದಿಂದ ಹಣ್ಣಿನ ಇಳುವರಿ ಜಾಸ್ತಿಯಾಗಿರುವುದರಿಂದ ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ಒಂದು ಟನ್‌ಗೆ 25 ಸಾವಿರ ರೂ.ನಂತೆ ಪಪ್ಪಾಯ ಮಾರಾಟವಾಗಿದೆ.
Advertisement
– ಎಸ್. ಕೆ. ಪಾಟೀಲ್