Advertisement

ಸರ್ಕಾರ ಕೈ ಹಿಡಿದರೆ ಭಾರತಕ್ಕೆ ಇನ್ನಷ್ಟು ಚಿನ್ನ!

12:11 PM May 23, 2022 | Team Udayavani |

ಶಿರಸಿ: ರಾತ್ರಿ ಬೆಳಗಾಗುವುದರೊಳಗೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಶಿರಸಿಯ ಪ್ರೇರಣಾ ಶೇಟ್‌ಗೆ ಭಾರತ ಅಥವಾ ಕರ್ನಾಟಕ ಸರ್ಕಾರಗಳು ಕೈ ಹಿಡಿದು ನಡೆಸಿದರೆ ಭಾರತಕ್ಕೆ ಇನ್ನಷ್ಟು ಚಿನ್ನದ ಪದಕಗಳು ಪಕ್ಕಾ!

Advertisement

ಹೌದು, ಮಲೆನಾಡಿನ ಅಪ್ಪಟ ಕ್ರೀಡಾ ಪ್ರತಿಭೆ ಪ್ರೇರಣಾ ನಂದಕುಮಾರ ಶೇಟ್‌ ಫ್ರಾನ್ಸ್‌ನಲ್ಲಿ ನಡೆದ 17 ವರ್ಷದೊಳಗಿನ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಚೀನಾವನ್ನು ಎದುರಿಸಿ ದೇಶ, ರಾಜ್ಯಕ್ಕೆ ಚಿನ್ನ ತಂದು ಕೊಟ್ಟಿದ್ದಾಳೆ.

ಕಳೆದ ಐದು ವರ್ಷದಲ್ಲಿ ಪ್ರೇರಣಾ ನಿರಂತರ ಸಾಧನೆ ಈ ಗೆಲುವಿಗೆ ಕಾರಣವಾಯಿತು. ಫ್ರಾನ್ಸ್‌ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಿದ್ದ ಪ್ರೇರಣಾ ಚೀನಾದ ಆಟಗಾರ್ತಿ ವಿರುದ್ಧ ಮೂರು ಸೆಟ್‌ ನಲ್ಲಿ 13/21, 21/12, 21/16 ಅಂತರದಲ್ಲಿ ಮಣಿಸಿ ಗೆದ್ದಿದ್ದಳು.

ಅಕ್ಕನ ದಾರಿಯಲ್ಲಿ ನಡೆದ ತಂಗಿ: ಶಿರಸಿಯ ಪ್ರೇರಣಾ ನಂದಕುಮಾರ ಶೇಟ್‌ ತನ್ನ ಅಕ್ಕ ಬ್ಯಾಡ್ಮಿಂಟನ್‌ ಆಟಗಾರ್ತಿ ಪ್ರಾರ್ಥನಾ ದಾರಿಯಲ್ಲೇ ನಡೆದವಳು. ಅಕ್ಕ ಶಿರಸಿಯಲ್ಲಿ ಬ್ಯಾಡ್ಮಿಂಟನ್‌ ತರಬೇತಿ ಪಡೆಯುವಾಗ, ಆಡುವಾಗ ಈಕೆಯೂ ಆಸಕ್ತಳಾಗಿ ತನ್ನ ಐದನೇ ತರಗತಿಯಿಂದಲೇ ತಾನೂ ಬ್ಯಾಡ್ಮಿಂಟನ್‌ ಬ್ಯಾಟ್‌ ಹಿಡಿದಳು. ಕರಾರುವಕ್ಕಾಗಿ ಬ್ಯಾಟ್‌ ಬೀಸುವುದನ್ನು ಅಕ್ಕನೂ ಪ್ರಥಮ ಗುರುವೂ ಆದಳು.

ಬ್ಯಾಡ್ಮಿಂಟನ್‌ ತರಬೇತುದಾರ ರವೀಂದ್ರ ಶಾನಭಾಗ್‌ ಅವರು ಪ್ರಥಮವಾಗಿ ತರಬೇತಿ ನೀಡಿದರು. ಪ್ರಾರ್ಥನಾ ಶಾಲಾ ಆಟಗಳಲ್ಲಿ ರಾಷ್ಟ್ರಮಟ್ಟದಲ್ಲೂ ಭಾಗವಹಿಸಿದ್ದರು. ಬಳಿಕ ಹುಬ್ಬಳ್ಳಿಯ ಎನ್‌ಎಂಬಿಎ ಅಕಾಡೆಮಿಯ ಮಂಜುನಾಥ ಫೆಡ್ಕರ್‌ ತರಬೇತಿ ಆರಂಭಿಸಿದರು. ನಡುವೆ ಟೂರ್ನಾಮೆಂಟ್‌ ಇದ್ದಾಗ ಹುಬ್ಬಳ್ಳಿ, ಮೈಸೂರು, ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಿ ತರಬೇತಿ ಪಡೆಯುತ್ತಿದ್ದಳು.

Advertisement

ಒಳ್ಳೆ ಆಟಗಾರರ ಎದುರುಗಡೆ ಆಡಲೂ ಬೇಕಿತ್ತು. ಆಗೀಗ ಮಂಜುನಾಥ ಅವರು ಟಿಪ್ಸ್‌ ಕೂಡ ನೀಡುತ್ತಿದ್ದರು. ಪ್ರೇರಣಾ ಎಂಟನೇ ವರ್ಗದಲ್ಲಿ ಓದುವಾಗ ಸ್ಕೂಲ್‌ ಗೇಮ್‌ ಫೆಡರೇಶನ್‌ ಇಂಡಿಯಾದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗಳಿಸಿದ್ದಳು.

ಚಿನ್ನವೇ ನೆರವಾಯ್ತು! ಕಳೆದ ಎರಡು ವರ್ಷದಲ್ಲಿ ಕೋವಿಡ್‌ ಬಂದು ಸ್ಪರ್ಧೆಗಳು ನಡೆಯಲಿಲ್ಲ. ಆದರೆ, ನಿರಂತರ ಅಭ್ಯಾಸ ಬಿಟ್ಟಿರಲಿಲ್ಲ. ಲಾಕ್‌ಡೌನ್‌ ಇದ್ದಾಗ ಮನೆಯಲ್ಲೇ ವ್ಯಾಯಾಮ ಮಾಡುತ್ತಿದ್ದಳು. ಕೋವಿಡ್‌ ಮುಗಿಯುವ ವೇಳೆಗೆ ಈಕೆ ಎಸ್ಸೆಸ್ಸೆಲ್ಸಿಗೆ ಬಂದಿದ್ದಳು. ರಾಜ್ಯ, ಹೊರ ರಾಜ್ಯದ ಸ್ಪರ್ಧೆಗಳ ನಡುವೆ ಮೊನ್ನೆ ಬಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದಿದ್ದಳು. ಕೋವಿಡ್‌ ನಂತರ 17 ವರ್ಷ ವಯೋಮಾನದಲ್ಲಿ ಸ್ಪರ್ಧೆಗೆ ಬಂದಳು.

ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ನಡೆಸಿದ ಸ್ಪರ್ಧೆಯಲ್ಲಿ ಉಳಿದವರನ್ನು ಹಿಂದಿಕ್ಕಿ ರಾಜ್ಯದ ರ್‍ಯಾಂಕ್‌ ಪಟ್ಟಿಯಲ್ಲಿ ಬಂದಿದ್ದಳು. ಕೆಬಿಎ ಈಗ ಪ್ರೇರಣಾಗೆ ಉಚಿತ ತರಬೇತಿ ನೀಡುತ್ತಿದ್ದಳು. ಒಲಿಂಪಿಯನ್‌ ಅನೂಪ ಶ್ರೀಧರ ಮೂಲಕ ತರಬೇತಿ ಕೊಡಿಸಲು ಆರಂಭಿಸಿದರು. ಮಂಗಳೂರು ಸೇರಿದಂತೆ ಹಲವಡೆ ನಡೆದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದಳು.

ಕೋವಿಡ್‌ನಿಂದ ಮುಂದೂಡಲಾಗಿದ್ದ ಸ್ಪರ್ಧೆಯಲ್ಲಿ ಪುನಃ ಆಯ್ಕೆ ಮಾಡಲಾಯಿತು. ಪೂನಾದಲ್ಲಿ ಭಾರತದ ತಂಡದ ಆಯ್ಕೆ ನಡೆಯಿತು. ಅಲ್ಲಿ ರನ್ನರ್‌ ಅಪ್‌ ಆಗಿದ್ದಳು, ಫ್ರಾನ್ಸ್‌ನಲ್ಲಿ ನಡೆಯುವ ಸ್ಕೂಲ್‌ ಗೇಮ್‌ ಫೆಡರೇಶನ್‌ ಆಫ್‌ ಇಂಡಿಯಾ ಮೂಲಕ ಕಳಿಸಲಾಯಿತು.

ಅಪ್ಪ ಅಮ್ಮನೇ ಕೋಚರ್‌ ಜತೆಗೆ ಕಳಿಸಿದರು. ತಲಾ ಎರಡೂವರೆ ಲಕ್ಷ ಜತೆ ಫಿಟ್ ನೆಸ್‌ ಕೋಚ್‌ ಕಳಿಸಿದೆವು. ವೀಸಾ ಸೇರಿದಂತೆ ಆರು ಲಕ್ಷ ರೂ. ಖರ್ಚು ಆಗಿದೆ. ಈ ಖರ್ಚು ಮಾಡುವಾಗ ಚಿನ್ನ ತರತಾಳೆ ಎಂದು ಗೊತ್ತಿರಲಿಲ್ಲ. ಎಲ್ಲರೂ ಆಡುವವರೇ ಇರತಾರೆ, ಅವರನ್ನು ಸೋಲಿಸಿ ಬಂಗಾರ ತಂದಳು. ಶಿರಸಿಯ ಲಯನ್ಸ್‌ ಶಾಲೆ, ಲಯನ್ಸ ಕ್ಲಬ್‌, ಈಗ ಕೆಬಿಎ ಸಹಕಾರ, ತರಬೇತಿದಾರರ ಪ್ರೇರಣೆಯಿಂದ ಈ ಸಾಧನೆ ಆಗಿದೆ ಎನ್ನುತ್ತಾರೆ ಪ್ರೇರಣಾ ತಂದೆ ನಂದಕುಮಾರ ಶೇಟ್‌.

ಸರ್ಕಾರ ಕೈ ಹಿಡಿಯಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವಿನ ನಗೆ ಬೀರಿದ ಪ್ರೇರಣಾಳಿಗೆ ಇನ್ನಷ್ಟು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಬರುತ್ತಿದೆ. ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅನೂಪ್‌ ಶ್ರೀಧರರ ಮೂಲಕ ಉಚಿತವಾಗಿ ತರಬೇತಿ ನೀಡುತ್ತಿದೆ. ಆದರೆ, ವಿದೇಶ, ಹೊರ ರಾಜ್ಯಗಳ ಸ್ಪರ್ಧೆಗಳು ಬಂದರೆ ವೀಸಾ ಹಾಗೂ ಪ್ರಯಾಣದ ತನಕ ಎಲ್ಲವನ್ನೂ ಪ್ರೇರಣಾ ಪಾಲಕರೇ ನೋಡಿಕೊಳ್ಳಬೇಕಾಗಿದೆ. ರಾಜ್ಯ, ಕೇಂದ್ರ ಸರ್ಕಾರ ಈಕೆಗೆ ಕೈ ಹಿಡಿದು ವೀಸಾ, ಪ್ರಯಾಣ ವೆಚ್ಚ ಹಾಗೂ ಇತರೆ ಖರ್ಚು ನೋಡಿಕೊಂಡರೆ ಭಾರತ, ಕರುನಾಡಿಗೆ ಇನ್ನಷ್ಟು ಚಿನ್ನಗಳು ಪಕ್ಕಾ ಬರಲಿವೆ.

ಪ್ರೇರಣಾಳಿಗೆ ಸ್ವಾಗತ ಕಾರ್ಯಕ್ರಮ ಇಂದು

ಶಿರಸಿ: ಫ್ರಾನ್ಸ್‌ ದೇಶದ ನಾರ್ಮಂಡಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಪ್ರೇರಣಾ ನಂದಕುಮಾರ್‌ ಶೇಟ್‌ ವಿಶ್ವ ಚಾಂಪಿಯನ್‌ ಆಗಿ ಹೊರ ಹೊಮ್ಮಿದ ಬೆನ್ನಲ್ಲೇ ಅವಳಿಗೆ ಸ್ವಾಗತ ಹಾಗೂ ಸಾಧನೆ ತೋರಿದ ಪ್ರೇರಣಾಳನ್ನು ತವರು ನೆಲ ಶಿರಸಿಗೆ ಅದ್ದೂರಿಯಾಗಿ ಸ್ವಾಗತಿಸಿ, ನಾಗರಿಕ ಸಮ್ಮಾನ ನೀಡಲು ಲಯನ್ಸ್‌ ಕ್ಲಬ್‌ ಹಾಗೂ ಲಯನ್ಸ್‌ ಶಿಕ್ಷಣ ಸಂಸ್ಥೆ ಮುಂದಾಗಿದೆ. ಮೇ 23 ರಂದು ಸಂಜೆ 4 ಗಂಟೆಗೆ ನೀಲೇಕಣಿ ವೃತ್ತದಲ್ಲಿ ಪ್ರೇರಣಾ ಶೇಟ್‌ ಹಾಗೂ ಅವಳ ಪಾಲಕರನ್ನು ಸ್ವಾಗತಿಸಿ ಮೆರವಣಿಗೆಯಲ್ಲಿ ಲಯನ್ಸ್‌ ಶಾಲೆಗೆ ಬರಮಾಡಿಕೊಳ್ಳಲಾಗುತ್ತಿದೆ. ಬಳಿಕ ನಡೆಯುವ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ ಲಯನ್ಸ್‌ ಕ್ಲಬ್ಬಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಲಯನ್ಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಶಿರಸಿ ಲಯನ್ಸ್‌ ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರ್ಗ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಈಗ ಪ್ರೇರಣಾಗೆ ಉಚಿತ ತರಬೇತಿ ನೀಡುತ್ತಿದೆ. ಫ್ರಾನ್ಸ್‌ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಚಿನ್ನ ತರತಾಳೆ ಎಂದು ಅಂದುಕೊಂಡಿರಲಿಲ್ಲ. ಅವಳ ಸಾಧನೆ ಖುಷಿ ತಂದಿದೆ. ನಂದಕುಮಾರ ಶೇಟ್‌, ಪ್ರೇರಣಾ ತಂದೆ

ಶಿರಸಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗಳಿಸಿದ ಪ್ರೇರಣಾ ಶೆಟ್‌ ಭಾರತಕ್ಕೆ ಹೆಮ್ಮೆ ತಂದಿದ್ದಾಳೆ. ಆಕೆಯ ಭವಿಷ್ಯದಲ್ಲಿ ಇನ್ನೂ ಸಾಧನೆಯಾಗಲಿ. –ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌         

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next